ಕಣಿಪುರ ಸುದ್ದಿಜಾಲ (ಅ. 21)
ಕಾಸರಗೋಡು :ಕೇಂದ್ರ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವ ಭರವಸೆಯ ಆಮಿಷ ಒಡ್ಡಿ ಅನೇಕರಿಂದ ಲಕ್ಷ ಲಕ್ಷ ಪಡೆದು ಸುಮಾರು 3ಕೋಟಿಯಷ್ಟು ಹಣ ಎಗರಿಸಿದ ಮಾಜಿ ಡಿವೈಎಫ್ಐ ನಾಯಕಿ ಸಚಿತಾ ರೈಯನ್ನೇಕೆ ಪೋಲೀಸರು ಬಂಧಿಸುತ್ತಿಲ್ಲ?
ಗ್ರಾಮೀಣ ಮುಗ್ಧ ಯುವಕ, ಯುವತಿಯರಿಗೆ ಪರಿಚಯದ ಸೋಗಿನಲ್ಲಿ ಉದ್ಯೋಗ ಭರವಸೆ ನೀಡಿ ಕೋಟ್ಯಾಂತರ ರೂ ಪಡೆದು ವಂಚಿಸಿದ ಈಕೆಯ ಬೆನ್ನ ಹಿಂದಿನ ವಂಚನಾ ಜಾಲವನ್ನು ಬಯಲಿಗೆಳೆಯಲು ರಾಜಕೀಯ ಸಂಘಟನೆಗಳೇಕೆ ಪ್ರತ್ಯಕ್ಷ ಹೋರಾಟಕ್ಕಿಳಿಯದೇ ನುಣುಚಿಕೊಳ್ಳುತ್ತಿವೆ??
ಪುತ್ತಿಗೆ ಬಾಡೂರು ಪ್ರಾಥಮಿಕ ಸರಕಾರಿ ಶಾಲಾಧ್ಯಾಪಕಿ, ಡಿವೈಎಫ್ಐ ಮಾಜಿ ನಾಯಕಿ ಸಚಿತಾ ರೈ(27) ನೇತೃತ್ವದಲ್ಲಿ ಕಾಸರಗೋಡು ತಾಲೂಕಿನಲ್ಲಿ ಅನೇಕರಿಗೆ ಉದ್ಯೋಗ ಭರವಸೆಯಿತ್ತು ಲಕ್ಷ, ಲಕ್ಷ ರೂಗಳನ್ನು ಪಡೆದು ವಂಚಿಸಿದ ಕೇಸುಗಳು ದಿನೇ, ದಿನೇ ಹೆಚ್ಚುತ್ತಿದ್ದರೂ ಈಕೆಯ ಬಂಧನ ನಡೆಯದೇ, ವಂಚನಾ ಜಾಲ ಬೆಳಕಿಗೆ ಬಾರದೇ ಇರುವುದು ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯ ಊಹಾಪೋಹಕ್ಕೆಕಾರಣವಾಗುತ್ತಿವೆ. ಪ್ರಸಕ್ತ ಪೆರುಂಬಳ ನಿವಾಸಿ ಧನಿಷ್ಮ (27) ಎಂಬವರು ತನಗಾದ ಉದ್ಯೋಗ ವಂಚನೆ ವಿರುದ್ಧ ಮೇಲ್ಪರಂಬ ಠಾಣೆಯಲ್ಲಿ ದೂರು ನೀಡುವುದರೊಂದಿಗೆ ಈಕೆಯ ವಿರುದ್ಧ 7 ವಂಚನಾ ಕೇಸು ದಾಖಲಾಗಿವೆ.
ಕಾಸರಗೋಡಿನ ಸಿಪಿಸಿಆರ್ ಐ ಯಲ್ಲಿ ಅಥವಾ ಕೇಂದ್ರೀಯ ವಿ. ವಿಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ 7ಲಕ್ಷ ರೂ ಪಡೆದು ಕಬಳಿಸಿರುವುದಾಗಿ ಪೆರುಂಬಳ ನಿವಾಸಿ ಧನಿಷ್ಮ ಮೇಲ್ಪರಂಬ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಸಚಿತಾವಿರುದ್ದ ಏಳು ಕೇಸುಗಳು ದಾಖಲಾದರೂ ಆಕೆಯ ಬಂಧನವಾಗಲೀ, ಜಾಲವನ್ನು ಬೆಳಕಿಗೆ ತರುವುದಾಗಲೀ ನಡೆಯಲಿಲ್ಲ. ಕುಂಬಳೆ, ಬದಿಯಡ್ಕ, ಮೇಲ್ಪರಂಬ ಮತ್ತು ಉಪ್ಪಿನಂಗಡಿ ಠಾಣೆಯಲ್ಲಿ ವಂಚನಾ ಕೇಸು ದಾಖಲಾದರೂ ಸಚಿತಾ ರೈ ಪಕ್ಷದ ಬೆಂಬಲದಿಂದ ಅಡಗುತಾಣದಲ್ಲಿದ್ದಾಳೆಂದು ಹೇಳಲಾಗುತ್ತಿದೆ.