ಅಭಿವ್ಯಕ್ತಿಯ ಮೇಲ್ಮೆಯಲ್ಲಿ ರಂಗದೆಚ್ಚರದ ಹಾಸ್ಯ..

ಹಿರಿಯ ಹಾಸ್ಯಗಾರ ಬಂಟ್ವಾಳರಿಗೆ ನುಡಿನಮನ..

by Narayan Chambaltimar

ಯಕ್ಷಗಾನದಲ್ಲಿ ನಾಟ್ಯದಿಂದ ತೊಡಗಿ ವೇಷದ ತನಕ ಎಲ್ಲವೂ ಕಲಿಕೆಯ ಹಿನ್ನೆಲೆಯಲ್ಲಿ ಪಕ್ವಗೊಳ್ಳುತ್ತಾ ಸಾಗುತ್ತವೆ. ಆದರೆ ಹಾಸ್ಯವು ಕಲಿತು ಬರುವಂತಹುದಲ್ಲ. ಅದು ಸ್ವ-ಭಾವ. ಇದರೊಂದಿಗೆ ಕಲಿಕೆಯು ಮಿಳಿತಗೊಂಡಾಗ ‘ಹಾಸ್ಯಗಾರ’ ರೂಪುಗೊಳ್ಳುತ್ತಾನೆ. ಹೀಗೆ ರೂಪುಗೊಂಡ ಹಾಸ್ಯಗಾರನೊಳಗೆ ಮೂರನೇ ಕಣ್ಣು ಜಾಗೃತವಾಗಿರಬೇಕು. ಜತೆಗೆ ಸ್ವ-ಎಚ್ಚರ ಕೂಡಾ. ಹೀಗೆ ರೂಪುಗೊಂಡರೆ ಯಕ್ಷಗಾನವೂ ಸೇರಿದಂತೆ ಎಲ್ಲಾ ರಂಗದಲ್ಲೂ ಜೈಸಬಹುದು.

ಲೇ:ನಾ. ಕಾರಂತ ಪೆರಾಜೆ

ಮೊನ್ನೆ ಮಂಗಳವಾರ ಪುತ್ತೂರಿನ ʼನಟರಾಜ ವೇದಿಕೆʼಯಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಪ್ರವಾಸಿ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ. ಶ್ರೀ ಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಸಾರಥ್ಯ. ಅಂದು ಚೌಕಿಯಲ್ಲಿ ಒಬ್ಬರೇ ಕುಳಿತಿದ್ದರು. ಮಾತನಾಡಿಸಿದೆ. ಎಂದಿನಂತೆ ಉಭಯಕುಶಲೋಪರಿ.. ʼಈಗ ನನ್ನ ಬೆಲೆ ಹೆಚ್ಚಾಗಿದೆʼ ಎಂದು ಕಿವಿ ತೋರಿಸಿದ್ರು. ಫಕ್ಕನೆ ಅರ್ಥವಾಗಲಿಲ್ಲ. ಮತ್ತೆ ತಿಳಿಯಿತು.

ಅವರ ಶ್ರವಣಶಕ್ತಿ ಕೆಲವು ವರುಷಗಿಂದ ಕುಂಠಿತವಾಗಿತ್ತು. ಅದಕ್ಕವರು ವೈದ್ಯಕೀಯ ವ್ಯವಸ್ಥೆ ಮಾಡಿಕೊಂಡಿದ್ದರು. “ಈಗ ಎರಡು ಕಿವಿಯೂ ಚೆನ್ನಾಗಿ ಕೇಳುತ್ತದೆ. ಇನ್ನು ನೀವು ಬಯ್ದರೆ ಗೊತ್ತಾಗ್ತದೆ. ಮೂವತ್ತು ಸಾವಿರ ರೂಪಾಯಿಗೂ ಅಧಿಕ ಖರ್ಚಾಯಿತು.” ಎಂದು ವಿನೋದದಿಂದ ಅನುಭವ ಹಂಚಿಕೊಂಡಿದ್ದರು. ಒಂದೇ ವಾರದಲ್ಲಿ ಸಾವಿನ ಸುದ್ದಿ...

ದಕ್ಷಾಧ್ವರ ಪ್ರಸಂಗವೊಂದರಲ್ಲಿ ವಿಪ್ರನ ಪಾತ್ರ ಮಾಡಿ ಹೇಳಿದ ಮಾತು ನೆನಪಾಗುತ್ತದೆ… “ ಕೆಮ್ಮು, ದಮ್ಮು,. ನಡೆಯುವುದಕ್ಕೆ ಆಗುವುದಿಲ್ಲ. ಹೆಂಡತಿ, ಮಕ್ಕಳು, ಬಂಧುಗಳು ಎಲ್ಲರೂ ಇದ್ದಾರೆ. ಆದರೆ ಯಾರಿಗೂ ಹೊರೆಯಾಗದೆ ಸಾಯಬೇಕೆನ್ನುವುದು ಆಶೆ” ಎಂದಿದ್ದರು.
ದೈವಾಧೀನರಾದ ಬಂಟ್ವಾಳ ಹಾಸ್ಯಗಾರರಿಗೆ ಕಂಬನಿ…

ಚಿತ್ರ :ಸ್ವಸ್ತಿಕ್ ಪದ್ಯಾಣ

ಯಕ್ಷಗಾನದಲ್ಲಿ ನಾಟ್ಯದಿಂದ ತೊಡಗಿ ವೇಷದ ತನಕ ಎಲ್ಲವೂ ಕಲಿಕೆಯ ಹಿನ್ನೆಲೆಯಲ್ಲಿ ಪಕ್ವಗೊಳ್ಳುತ್ತಾ ಸಾಗುತ್ತವೆ. ಆದರೆ ಹಾಸ್ಯವು ಕಲಿತು ಬರುವಂತಹುದಲ್ಲ. ಅದು ಸ್ವ-ಭಾವ. ಇದರೊಂದಿಗೆ ಕಲಿಕೆಯು ಮಿಳಿತಗೊಂಡಾಗ ‘ಹಾಸ್ಯಗಾರ’ ರೂಪುಗೊಳ್ಳುತ್ತಾನೆ. ಹೀಗೆ ರೂಪುಗೊಂಡ ಹಾಸ್ಯಗಾರನೊಳಗೆ ಮೂರನೇ ಕಣ್ಣು ಜಾಗೃತವಾಗಿರಬೇಕು. ಜತೆಗೆ ಸ್ವ-ಎಚ್ಚರ ಕೂಡಾ. ಹೀಗೆ ರೂಪುಗೊಂಡರೆ ಯಕ್ಷಗಾನವೂ ಸೇರಿದಂತೆ ಎಲ್ಲಾ ರಂಗದಲ್ಲೂ ಜೈಸಬಹುದು.

ಬಂಟ್ವಾಳ ಜಯರಾಮ ಆಚಾರ್ ಅವರೊಂದಿಗೆ ಮಾತಿಗೆ ಕುಳಿತಾಗ ಇಂತಹ ಸೂಕ್ಷ್ಮ ವಿಚಾರಗಳು ಹೊಕ್ಕು ಹೊರಬರುತ್ತವೆ. ಇವರದು ನಕ್ಕು ನಗಿಸುವ ಹಾಸ್ಯವಲ್ಲ! ತಾನೇ ನಗುವ ಹಾಸ್ಯವೂ ಅಲ್ಲ! ಹಾಸ್ಯವು ಮಾತನ್ನು ಬಯಸುವುದಿಲ್ಲ. ಹಾಸ್ಯಗಾರ ವಾಚಾಳಿಯಾದಾಗ ಹಾಸ್ಯರಸವು ಮುಸುಕು ಹಾಕಿಕೊಳ್ಳುತ್ತದೆ! ಹಾಸ್ಯವೆಂದರೆ ವಿಕಾರವಲ್ಲ. ರಂಗದಲ್ಲಿ ಏನು ಮಾಡಿದರೂ ಪ್ರೇಕ್ಷಕರು ಸಹಿಸಿಕೊಳ್ಳುತ್ತಾರೆ ಎನ್ನುವುದು ಭ್ರಮೆ.
ತುಳು ಪ್ರಸಂಗವೊಂದರ ಸಂವಾದವೊಂದರಲ್ಲಿ ಸಹ ಪಾತ್ರಧಾರಿಗಳು ಉಚ್ಛರಿಸಿದ ಪದವೊಂದನ್ನು ಅಬದ್ಧವಾಗಿ ಹೇಳಿದ್ದರಂತೆ. ಆಟ ನೋಡುತ್ತಿದ್ದ ಮಹಿಳೆಯೋರ್ವರು ತಲೆತಗ್ಗಿಸಿ ಎದ್ದು ಹೋದರು. ಅವರು ಹೇಳಿದ ಪದವು ತುಳುವಿನಲ್ಲಿ ಒಂದು ಅರ್ಥ ಕೊಟ್ಟರೆ, ಹಿಂದಿಯಲ್ಲಿ ಅಶ್ಲೀಲ ಅರ್ಥವನ್ನು ಸ್ಫುರಿಸಿತ್ತು. ಅರಿಯದೆ ರಂಗದಲ್ಲಿ ಬಳಸಿದ್ದರು. ಅಲ್ಲದೆ ಪ್ರೇಕ್ಷಕರನ್ನು ಟಾರ್ಗೆಟ್‌ ಮಾಡಿದ ಹಾಸ್ಯಗಳು ಎಂದೂ ಅಲ್ಪಾಯುಷಿ.

ಇಂತಹ ಪ್ರಕರಣಗಳು ಆದಾಗ ನಾವೆಲ್ಲಿ ತಪ್ಪುತ್ತಿದ್ದೇವೆ ಎನ್ನುವ ಅರಿವಾಗುತ್ತದೆ. ಪ್ರೇಕ್ಷಕರು ಜಾಗೃತರಾಗಿದ್ದರೆ ರಂಗವು ಆಭಾಸವಾಗುವುದಿಲ್ಲ. ನಾನು ಬೆಳೆಯುತ್ತಿದ್ದ ಆರಂಭ ಕಾಲದಲ್ಲಿ ಪ್ರೇಕ್ಷಕರಲ್ಲಿ ರಂಗಎಚ್ಚರವಿತ್ತು. ಆಭಾಸಗಳನ್ನು ಸಹಿಸುತ್ತಿರಲಿಲ್ಲ. ಏಕಾಂತದಲ್ಲಿ ಕಲಾವಿದರೊಂದಿಗೆ ಅಸಹನೆಯಿಂದ ಹೇಳುತ್ತಿದ್ದರು. ಹೀಗೆ ಪ್ರೇಕ್ಷಕರಿಂದ ಹಿಮ್ಮಾಹಿತಿ ಸಿಕ್ಕಾಗ ತಪ್ಪನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಇಂತಹ ಘಟನೆಗಳು ನನ್ನೊಳಗೆ ಸದಾ ಜಾಗೃತ – ಬಂಟ್ವಾಳರ ಯಶದ ಹಾದಿಯ ಕ್ಯಾಪ್ಸೂಲುಗಳಿವು.

ಹಿಂದಿನ ಹಾಸ್ಯ ಹೇಗಿತ್ತು? ಬಂಟ್ವಾಳರು ಹೇಳುತ್ತಾರೆ – “ಪಾತ್ರದ ಕುಣಿತದ ವಿನ್ಯಾಸಗಳು ಯಕ್ಷಗಾನದ ಚೌಕಟ್ಟಿನಲ್ಲಿದ್ದುವು. ಈಗಿನಂತೆ ಫಿನಿಶಿಂಗ್ ಇದ್ದಿರಲಿಲ್ಲ. ಹಾಸ್ಯಗಾರ ಕಲಿಕಾ ಪಠ್ಯದೊಳಗೆ ತನ್ನ ಜಾಣ್ಮೆಯನ್ನು ಪ್ರದರ್ಶಿಸಬೇಕು. ಮಾತಿನಲ್ಲಿ ಹೆಚ್ಚು ದ್ವಂದ್ವಾರ್ಥ ಪದಗಳಿರುತ್ತಿದ್ದುವು. ಜನರು ಅದನ್ನು ಅಶ್ಲೀಲ, ಅಬದ್ಧ ಎಂದು ಸ್ವೀಕರಿಸುತ್ತಿರಲಿಲ್ಲ. ಎಂಜಾಯ್ ಮಾಡುತ್ತಿದ್ದರು. ಹಾಸ್ಯ ರಸವಾಗಿಯೇ ಸ್ವೀಕೃತಿ ಪಡೆಯುತ್ತಿತ್ತು. ಜಾತಿಗೆ ಸಂಬಂಧಪಟ್ಟ ಪಾತ್ರಗಳು ಬಂದಾಗ ಎಲ್ಲೂ ಜಾತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಈಗ ಬಿಡಿ, ಒಂದೊಂದು ಪದವನ್ನು ಎತ್ತಿ ಹಿಡಿದು ವಿವಾದವನ್ನುಂಟು ಮಾಡುವ ಮನಃಸ್ಥಿತಿ ಉಂಟಾಗಿದೆ.”

ಬಂಟ್ವಾಳ ಜಯರಾಮ ಆಚಾರ್ ಹನುಮಗಿರಿ ಶ್ರೀ ಕೋದಂಡರಾಮ ಮೇಳದ ಹಾಸ್ಯಗಾರರು. ಸುಮಾರು ಅರ್ಧ ಶತಮಾನದ ರಂಗಾನುಭವ. ಇವರ ತಂದೆ ಹಾಸ್ಯಗಾರರು. ತಂದೆ ಅಮ್ಟಾಡಿ ಮೇಳದಲ್ಲಿದ್ದಾಗ ಚಿಕ್ಕ ಪಾತ್ರಗಳ ಮೂಲಕ ಬಣ್ಣ ಹಚ್ಚಿದರು. ಶಾಲಾ ಕಲಿಕೆಯ ನಿಲುಗಡೆಯ ಬಳಿಕ ಬಣ್ಣದ ಲೋಕದತ್ತ ಚಿತ್ತ. ಅಮ್ಮನ ಪ್ರೋತ್ಸಾಹ. ಮುಂದೆ ಸುಂಕದಕಟ್ಟೆ, ಸೊರ್ನಾಡು, ಕಟೀಲು ಮೇಳಗಳಲ್ಲಿ ನಾಲ್ಕು ವರುಷಗಳ ಅಭ್ಯಾಸ. ನಂತರವಷ್ಟೇ ಶ್ರೀಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕಲಿಕೆ. “ನಾನೇನು ಕುಣಿಯುತ್ತೇನೆ ಎಂದು ಹೇಳಬೇಕಾದರೆ ಗುರುವಿನ ಬಳಿಯೇ ಕಲಿಯಬೇಕು. ಮಹಾನ್ ಗುರು ಪಡ್ರೆ ಚಂದು ಗುರುಗಳಾಗಿ ಒದಗಿದ್ದರು. ಧರ್ಮಸ್ಥಳದ ಪೂಜ್ಯ ಖಾವಂದರು ನನ್ನೊಳಗಿನ ಹಾಸ್ಯಗಾರನಿಗೆ ರೂಪು ಕೊಟ್ಟರು.” ಎನ್ನುತ್ತಾರೆ.

ಆ ಘಟನೆಯನ್ನು ಬಂಟ್ವಾಳರು ಸ್ವಾರಸ್ಯವಾಗಿ ಹೇಳುತ್ತಾರೆ. ಕಲಿಕೆಯ ಕೊನೆಗೆ ವಿದ್ಯಾರ್ಥಿಗಳಿಂದ ಪ್ರದರ್ಶನ. ಪ್ರಸಂಗ ರತಿ ಕಲ್ಯಾಣ. ಬಂಟ್ವಾಳರದು ‘ಮೇಘಸ್ತನಿ’ಯ ಪಾತ್ರ. ತುಂಬು ಉತ್ಸಾಹದಿಂದ ಅಭಿನಯಿಸಿದ್ದರು ಕೂಡಾ. ಕೊನೆಗೆ ಗುರು ಪಡ್ರೆ ಚಂದು ಅವರಲ್ಲಿ ಖಾವಂದರು ಹೇಳಿದರಂತೆ – ‘ಇವರಿಗೆ ಬಣ್ಣದ ವೇಷ ಬೇಡ, ಹಾಸ್ಯಕ್ಕೆ ತಯಾರು ಮಾಡಿ’. ಅಂದರೆ ಅಂದಿನ ಮೇಘಸ್ತನಿಯ ರಾಕ್ಷಸಿಯ ಅಭಿವ್ಯಕ್ತಿಯಲ್ಲಿ ಹಾಸ್ಯರಸವೇ ಹೆಚ್ಚಿತ್ತಂತೆ! ಆಗ ಗುರುಕುಲದಲ್ಲಿ ಕಲಿಸುವ ರೀತಿಯೂ ಅನನ್ಯ. ಮನಮುಟ್ಟುವ ಪಾಠ, ಪಠ್ಯ. ನಂತರ ಕಟೀಲು, ಸುಂಕದಕಟ್ಟೆ ಪುತ್ತೂರು, ಹೊಸನಗರ, ಎಡನೀರು ಮೇಳಗಳಲ್ಲಿ ತಿರುಗಾಟ.

ಹಾಸ್ಯಗಾರರಾದ ಸುಜನ ಸುಳ್ಯ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು, ಮಿಜಾರು ಅಣ್ಣಪ್ಪ, ವಿಟ್ಲ ಗೋಪಾಲಕೃಷ್ಣ ಜೋಶಿ.. ಹೀಗೆ ಹಿರಿಯ ಹಾಸ್ಯಗಾರರ ಪ್ರಭಾವ. ಆದರೆ ಯಾರದ್ದೇ ಅನುಕರಣೆಯಿಲ್ಲ. ಸ್ವ-ಪಾಕದಲ್ಲಿ ಕಟ್ಟಿಕೊಂಡ ಬದುಕು. ಬಹುಶಃ ರಂಗಶಿಸ್ತು ಬಂದಿರುವುದು ಇಂತಹ ಹಿರಿಯರ ಒಡನಾಟದ ಫಲ. ಶಿಷ್ಟ ಹಾಸ್ಯವು ಮೂಡಿಬಂದಿರುವುದು ‘ರಂಗದಲ್ಲಿ ಹೇಗಿರಬಾರದು’ ಎನ್ನುವ ಎಚ್ಚರವು ಕಲಿಸಿದ ಪಾಠ. ಹಾಸ್ಯಗಾರರು ನಿರ್ವಹಿಸುವ ಹಾಸ್ಯೇತರ ಪಾತ್ರಗಳಲ್ಲಿ ಹಾಸ್ಯ ನುಸುಳಬಾರದು ಎನ್ನುವ ಸ್ಪಷ್ಟ ಜ್ಞಾನ ಬಂಟ್ವಾಳರಲ್ಲಿದೆ.

ಯಕ್ಷಗಾನದ ಹಾಸ್ಯದ ಸ್ವರೂಪ ಹೇಗೆ? ಹಾಸ್ಯಗಾರ ತನ್ನ ಹಾಸ್ಯವನ್ನು ರಂಗದಲ್ಲಿ ದುರುಪಯೋಗ ಮಾಡಬಾರದು. ಯಾರನ್ನೋ ಮೆಚ್ಚಿಸಲು ಹಗುರನಾಗಬಾರದು. ಮಾತು ಮಿತವಾಗಿದ್ದರೆ ಹಾಸ್ಯ ರಸದ ಉತ್ಪತ್ತಿಗೆ ಅವಕಾಶ ಹೆಚ್ಚು. ಒಂದು ನೋಟದಿಂದ, ನಗೆಯಿಂದ, ನಡಿಗೆಯಿಂದ ಹಾಸ್ಯ ರಸ ಸಾಧ್ಯ. ಹಾಸ್ಯದ ಪಾತ್ರಾಭಿವ್ಯಕ್ತಿಗೆ ಪೂರ್ವಸಿದ್ಧತೆ ಮಾಡಿಕೊಂಡರೆ ಪ್ರಯೋಜನವಿಲ್ಲ. ರಂಗದಲ್ಲಿ ಸಹಪಾತ್ರ, ಹಿಮ್ಮೇಳ, ಪ್ರೇಕ್ಷಕರ ಪ್ರತಿಕ್ರಿಯೆ ಜತೆಗೆ ಪಾತ್ರಧಾರಿಯ ಅಂದಿನ ಮನಃಸ್ಥಿತಿ… ಹೀಗೆ ಎಲ್ಲಾ ಒಳಸುರಿಗಳು ಒಗ್ಗೂಡಿ ಅಭಿವ್ಯಕ್ತಿ ರೂಪುಗೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ್ದು ಹಾಸ್ಯಗಾರ ರಂಗದಲ್ಲಿ ಸ್ವತಂತ್ರನಲ್ಲ. ಸಹಪಾತ್ರದ ಓಘ, ಅನುಭವದಂತೆ ಹಾಸ್ಯಗಾರದ ಅಭಿವ್ಯಕ್ತಿ. ಸಹಪಾತ್ರ ಸೊರಗಿದರೆ ಹಾಸ್ಯವೂ ಸೊರಗುತ್ತದೆ.

: ಬದಲಾದ ಮನಃಸ್ಥಿತಿಯಲ್ಲಿ ಎಲ್ಲಾ ರಂಗದಲ್ಲೂ ಹಾಸ್ಯವು ಹಾಸ್ಯಾಸ್ಪದವಾಗುತ್ತಿವೆ. ರಂಗದಲ್ಲಿ ಹಾಸ್ಯಗಾರ ಇರುತ್ತಾರೆ ಹೊರತು ಅವರ ಹಾಸ್ಯಕ್ಕೆ ಪ್ರೇಕ್ಷಕರು ನಗುವುದಿಲ್ಲ! ಬದುಕಿನಲ್ಲಿ ನಗು ಕಳೆದುಹೋಗಿದೆ! ನಗಲೂ ಗೊತ್ತಿಲ್ಲ! ಮತ್ತೊಂದೆಡೆ ಹಾಸ್ಯ ರಸಗಳ ಉತ್ಪತ್ತಿಯಲ್ಲಿ ಹಾಸ್ಯಗಾರರು ಸೋಲುತ್ತಿದ್ದಾರೆ! ಇಂತಹ ಸ್ಥಿತಿಯಲ್ಲಿ ಬಂಟ್ವಾಳರ ಹಾಸ್ಯ ಪ್ರಸ್ತುತವಾಗುತ್ತದೆ. ತನ್ನದು ಯಕ್ಷಗಾನದ ಹಾಸ್ಯ ಎನ್ನುವ ‘ಸದಾಎಚ್ಚರ’ ಇವರ ಹಾಸ್ಯ ಪಾತ್ರಗಳ ಯಶದ ಗುಟ್ಟು. ದಕ್ಷಾಧ್ವರ ಪ್ರಸಂಗದ ‘ವಿಪ್ರ’, ದೇವಿಮಹಾತ್ಮೆಯ ‘ಮಾಲಿನಿ ದೂತ’, ಬೇಡರಕಣ್ಣಪ್ಪ ಪ್ರಸಂಗದ ‘ಕೈಲಾಸ ಶಾಸ್ತ್ರಿ’, ಮಹಾಕಲಿ ಮಗಧೇಂದ್ರದ ‘ಜಗಜಟ್ಟಿ’.. ಹೀಗೆ ವಿವಿಧ ಪಾತ್ರ ವೈವಿಧ್ಯಗಳಲ್ಲಿ ಬಂಟ್ವಾಳರ ಅಭಿವ್ಯಕ್ತಿ ಮೇಲ್ಮೆ ಪಡೆದಿದೆ.

ನಮ್ಮ ಕಲಾ ಬದುಕಿನ ಮಹತ್ವದ ಕಾಲಘಟ್ಟ ಯಾವುದು? ಎನ್ನುವ ಪ್ರಶ್ನೆಗೆ ಬಂಟ್ವಾಳ ಜಯರಾಮ ಆಚಾರ್ಯರು ಹೇಳುತ್ತಾರೆ – “ಪುತ್ತೂರು ಮೇಳದ ತಿರುಗಾಟದ ಸಮಯ. ಬಾಲೆನಾಗಮ್ಮ, ರಾಣಿ ಚಿತ್ರಾಂಗದೆ ಮೊದಲಾದ ಪ್ರಸಂಗಗಳು ಹಿಟ್ ಆಗಿತ್ತು. ಆಗ ಕಾಳಿಂಗ ನಾವಡರ ವಿಜೃಂಬಣೆಯ ಕಾಲ. ಪತ್ರಿಕೆಯಲ್ಲಿ ಅವರ ಹೆಸರು ರಾರಾಜಿಸುತ್ತಿತ್ತು. ಆ ಹೊತ್ತಲ್ಲಿ ‘ಬಂಟ್ವಾಳ ಜಯರಾಮ ಆಚಾರ್ಯರ ಪಾತ್ರವನ್ನು ನೋಡಲು ಮರೆಯದಿರಿ’ ಎಂದು ಪತ್ರಿಕೆಯಲ್ಲಿ ಪ್ರಕಟವಾಗಲು ಶುರುವಾಗಿತ್ತು. ಆಗದು ದೊಡ್ಡ ಸಂಗತಿ. ನಮ್ಮಂತಹ ಸಣ್ಣ ಕಲಾವಿದರಿಗೆ ಹೆಸರು ತಂದುಕೊಟ್ಟ ಪುತ್ತೂರು ಮೇಳದ ಪ್ರಸಂಗಗಳು, ತಂದುಕೊಟ್ಟ ಕೀರ್ತಿಗಳು ಮರೆಯುವಂತಹುದಲ್ಲ.”

ನಾಲ್ಕೈದು ದಶಕದ ಹಿಂದೆ ನೋಟ ಹರಿಸೋಣ. ನಾಟಕ ಕಂಪೆನಿಗಳಲ್ಲಿ ತಯಾರಾದ ಕಲಾವಿದರು ಸಿನಿಮಾ ರಂಗದಲ್ಲಿ ಮಿಂಚಿದ್ದೇ ಹೆಚ್ಚು. ನಾಟಕ ರಂಗವು ಭಾವಗಳನ್ನು ಕಟ್ಟಿಕೊಡುತ್ತದೆ. ಅಭಿನಯಗಳಲ್ಲಿ ಭಾವನೆಗಳ ಅನಾವರಣಕ್ಕೆ ನಾಟಕ ರಂಗ ದೊಡ್ಡ ಕೊಡುಗೆ. ಈ ಹಿನ್ನೆಲೆಯಲ್ಲಿ ಬಂಟ್ವಾಳರು ನಾಟಕ, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕ್ಷೇತ್ರಗಳ ದಟ್ಟ ಅನುಭವ ಅವರನ್ನು ನಿಜಾರ್ಥದ ಹಾಸ್ಯಗಾರರನ್ನಾಗಿ ರೂಪಿಸಿದೆ. ಯಕ್ಷಗಾನದ ಆರಂಭ ಕಾಲದಲ್ಲಿ ಕಲಿತ ಹಿಮ್ಮೇಳ ಜ್ಞಾನವೂ ಕಲಾಯಾನಕ್ಕೆ ಪೂರಕವಾಗಿದೆ.

ಲೇಖಕ ನಾ. ಕಾರಂತ ಪೆರಾಜೆ ಅಡಿಕೆ ಪತ್ರಿಕೆಯ ಉಪಸಂಪಾದಕ ಹಾಗೂ ಹಿರಿಯ ಪತ್ರಕರ್ತರು, ಜನಪ್ರಿಯ ಅಂಕಣಗಾರರು.
ಯಕ್ಷಗಾನದ ವೇಷಧಾರಿ, ತಾಳಮದ್ದಳೆ ಅರ್ಥಧಾರಿ. ಕಣಿಪುರ ಮಾಸಪತ್ರಿಕೆಯ ಅಂಕಣಗಾರರು.
ಈ ಬರಹ ಹಿಂದೆ 2018ರಲ್ಲಿ ಪ್ರಜಾವಾಣಿಯಲ್ಲಿ “ಧದಿಗಿಣತೋಂ” ಕಾಲಂ ನಲ್ಲಿ ಪ್ರಕಟವಾಗಿತ್ತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00