ವಯನಾಡು : ವಯನಾಡು ಸಂಸದೀಯ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ರಿಯಾಂಕ ಗಾಂಧಿ ವಿರುದ್ಧ ಬಿಜೆಪಿ ಕೋಝಿಕೋಡಿನ ಯುವ ನಾಯಕಿ ನವ್ಯಾ ಹರಿದಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನವ್ಯಾ ಅವರು ಪ್ರಸ್ತುತ ಕೋಝಿಕ್ಕೋಡ್ ಕಾರ್ಪೋರೇಷನ್ ಕೌನ್ಸಿಲರ್ ಆಗಿದ್ದು, ಇದೇ ಮೊದಲ ಬಾರಿಗೆ ಸಂಸದೀಯ ಚುನಾವಣಾ ಅಭ್ಯರ್ಥಿಯಾಗುತ್ತಿದ್ದಾರೆ.
ಪಕ್ಷ ಒದಗಿಸಿದ ಅವಕಾಶವನ್ನು ಪಕ್ಷಕ್ಕಾಗಿ ಸದ್ವಿನಿಯೋಗಿಸುವೆ ಎಂದ ಅವರು ವಯನಾಡು ಉಪ ಚುನಾವಣೆ ಎಂಬುದು ರಾಹುಲ್ ಗಾಂಧಿ ಜನರಿಗೆ ಸೃಷ್ಠಿಸಿದ ಹೊರೆ ಎಂದು ಆರೋಪಿಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.
ರಾಹುಲ್ ಗಾಂಧಿಯ ರಾಜಕೀಯ ಭವಿಷ್ಯದ ಸಂಧಿಗ್ಧ ಘಟ್ಟದಲ್ಲಿ ಕೈ ಹಿಡಿದ ವಯನಾಡನ್ನು ಅವರು ಉಪೇಕ್ಷಿಸಿ ಹೋಗಿದ್ದಾರೆ. ವಯನಾಡಿನ ಚೂರಲ್ ಮಲ ಭೂಕುಸಿತ ಸಂಭವಿಸಿದಾಗ ಇಲ್ಲಿಗೆ ಎಂ. ಪಿ. ಇರಲಿಲ್ಲ. ಜನರು ಚುನಾಯಿಸಿದ ಎಂ. ಪಿ. ಐದು ವರ್ಷ ನಾಡಿನ ಸೇವಕನಾಗಿರಬೇಕೆಂಬುದು ರೂಢಿ. ಆದರೆ ರಾಯ್ಬರೇಲಿಯಲ್ಲಿ ಗಮನಕೇಂದ್ರೀಕರಿಸಲು ವಯನಾಡನ್ನು ಉಪೇಕ್ಷಿಸಿದ ಅವರು ಈಗ ವಯನಾಡು ಸಂಸದೀಯ ಕ್ಷೇತ್ತರವನ್ನು ಕೂಡಾ ಕುಟುಂಬಸೊತ್ತಾಗಿಸಲು ಹೊರಟಿದ್ದಾರೆ ಎಂದು ಪ್ರಿಯಾಂಕಾ ಅಭ್ಯರ್ಥಿತನವನ್ನು ಟೀಕಿಸಿದ್ದಾರೆ.
ಇದೇ ಮೊದಲ ಬಾರಿ ಚುನಾವಣೆ ಎದುರಿಸಿ ಸಕ್ರಿಯ ರಾಜಕೀಯಕ್ಕೆ ಕಾಲೂರುವ ಪ್ರಿಯಾಂಕಗಾಂಧಿ ಯಾನೆ ವಾದ್ರಾ ಇದೇ 23ರಂದು ನಾಮಪತ್ರಿಕೆ ಸಲ್ಲಿಸುವರು.
ವಯನಾಡು ಕಾಂಗ್ರೆಸ್ ಪಾಲಿಗೆ ಸುಭದ್ರ ಕ್ಷೇತ್ರವಾಗಿದೆ.
ಕಳೆದ ಬಾರಿ ರಾಹುಲ್ ಗಾಂಧಿ 2ನೇ ಬಾರಿ ಸ್ಪರ್ಧಿಸಿದಾಗ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧಿಸಿ ಬಿಜೆಪಿಗೆ ಗಣನೀಯ ಮತ ಹೆಚ್ಚಿದ್ದರೂ. ಎಡರಂಗದಿಂದ ಈ ಬಾರಿ ಸಿಪಿಐಯ ಸತ್ಯನ್ ಮೊಗೇರಿ ಅಭ್ಯರ್ಥಿಯೆಂದು ಘೋಷಿಸಲಾಗಿದೆ.