- ಇಷ್ಟಕ್ಕೂ ಕಾಸರಗೋಡಿನಲ್ಲಿ ಎಷ್ಟು ರಸ್ತೆಗಳಿಲ್ಲ?
ಬೆಸ್ತರ ಕೇರಿಗೆ ಸಾಗುವ ಬೀಚ್ ರಸ್ತೆಗೆ ಏಕೆ ಗವಾಸ್ಕರ್ ಹೆಸರು..? ನಿಜವಾದ ಕ್ರೀಡಾಭಿಮಾನ ಇರುವುದೇ ಆದಲ್ಲಿ ರಸ್ತೆಯಲ್ಲಿ, ಕಾಸರಗೋಡಿನ ವಿದ್ಯಾನಗರದಲ್ಲಿರುವ ಮುನ್ಸಿಪಲ್ ಸ್ಟೇಡಿಯಂ ಗೆ ಸುನಿಲ್ ಗಾವಸ್ಕರ್ ಹೆಸರಿಡಲಿ. ಅದಲ್ಲವೇ ಕಾಳಜಿ..?
ಎಂದು ಪ್ರಶ್ನಿಸಿರುವ ಅವರು ಇದು ಗವಾಸ್ಕರ್ ಜತೆಗೆ ಆತ್ಮೀಯತೆ ಉಳ್ಳ ಉದ್ಯಮಿ ತನ್ನೂರಿಗೆ ಗವಾಸ್ಕರನ್ನು ಕರೆಸಿ ಸಾರ್ವಜನಿಕರೆದುರು ಷೋ ಮಾಡುವ ಉದ್ದೇಶದ ಪ್ರಯತ್ನ. ಇದಕ್ಕೆ ಶಾಸಕರೂ ಸಾಥ್ ನೀಡುವುದು ಶಂಕೆಯುಂಟುಮಾಡಿದೆ ಎಂದು ಕೌನ್ಸಿಲರ್ ಆರೋಪಿಸಿದ್ದಾರೆ.
ಕಣಿಪುರ ಸುದ್ದಿಜಾಲ (ಅ. 20)
ಕಾಸರಗೋಡು ನಗರದ ನೆಲ್ಲಿಕುಂಜೆ (ನೆಲ್ಲಿಕುನ್ನ್) ರಸ್ತೆ (ಬೀಚ್ ರೋಡ್) ಗೆ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಹೆಸರಿಡುವ ನಿರ್ಧಾರಕ್ಕೆ ಸ್ಥಳೀಯ ನಾಗರಿಕರು ಮತ್ತು ವಾರ್ಡ್ ಕೌನ್ಸಿಲರ್ ಸಹಿತ ಬಿಜೆಪಿ ವಿರೋಧಿಸಿದೆ.
ನಗರಸಭೆ ಏಕಪಕ್ಷೀಯವಾಗಿ ಶಾಸಕರ ಹಿತಾಸಕ್ತಿಗೆ ಮಣಿದು ಈ ತೀರ್ಮಾನ ಕೈಗೊಂಡಿದೆಯೆಂದೂ, ತೀರ್ಮಾನ ಬದಲಿಸದಿದ್ದರೆ ನಾಮಕರಣಕ್ಕೆ ಆಸ್ಪದ ನೀಡಲಾರೆವು ಮತ್ತು ಸುನಿಲ್ ಗಾವಸ್ಕರ್ ಆಗಮನವನ್ನೇ ತಡೆಯುವುದಾಗಿ ಮುನ್ನಚ್ಚರಿಕೆ ನೀಡಿದೆ.
ಕಾಸರಗೋಡು ನಗರದ ಬೇಂಕ್ ರಸ್ತೆಯಿಂದ 3ಕಿ
ಮೀ ದೂರವುಳ್ಳ ನೆಲ್ಲಿಕುಂಜೆ ಕಡಲತೀರಕ್ಕೆ ಸಾಗುವ ರಸ್ತೆಯನ್ನು ಈ ವರೆಗೆ ಬೀಚ್ ರೋಡ್, (ನೆಲ್ಲಿಕುನ್ನ್ ಕಡಪ್ಪರಂ ರೋಡ್) ಎಂದೇ ಕರೆಯಲಾಗುತಿತ್ತು. ಆದರೆ ಈ ರಸ್ತೆಗೂ, ಈ ನಾಡಿಗೂ ಏನೇನೂ ಸಂಬಂಧಗಳೇ ಇಲ್ಲದ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೆಸರನ್ನಿರಿಸಲು, ಶಾಸಕ ಎನ್. ಎ. ನೆಲ್ಲಿಕುನ್ನ್ ಸಲ್ಲಿಸಿದ ಮನವಿಯನುಸಾರ ನಗರಸಭೆ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಿದೆ. ಇದಕ್ಕೆ ವಿರೋಧ ಸೂಚಿಸಿರುವ ವಾರ್ಡು ಸದಸ್ಯೆ ಉಮಾ ಅವರು ನೆಲ್ಲಿಕುನ್ನ್ ಕಡಲತೀರ ಬೆಸ್ತರ ಕುಟುಂಬ ವಾಸಿಸುವ ಪ್ರದೇಶ. ಇಲ್ಲಿನ ರಸ್ತೆ ಹೆಸರನ್ನು ಇದೀಗ ಏಕಾಏಕಿ ಬದಲಾಯಿಸುವುದರ ಔಚಿತ್ಯ ಏನು ಎಂದು ಪ್ರಶ್ನಿಸಿದ್ದಾರೆ.
ಅವರು ಹೇಳುವ ಅಭಿಪ್ರಾಯಗಳು ಇಲ್ಲಿವೆ…
“ಭಾರತೀಯ ಕ್ರಿಕೆಟ್ ರಂಗದ ದೈತ್ಯಪ್ರತಿಭೆ ಸುನೀಲ್ ಗವಾಸ್ಕರ್ ಬಗ್ಗೆ ನಮಗೆಲ್ಲರಿಗೂ ಗೌರವ ಇದೆ. ನಮಗೂ ಸ್ಪೋರ್ಟ್ಸ್ ಮೆನ್ ಸ್ಪಿರಿಟ್ ಇದೆ. ಹಾಗೆಂದು ಗವಾಸ್ಕರ್ ಹೆಸರನ್ನು ಬೀಚ್ ರಸ್ತೆಗಿಡುವುದರ ಉದ್ದೇಶ, ಅಗತ್ಯವೇನು?
ರಸ್ತೆಯ ಹೆಸರನ್ನು ಮರುನಾಮಕರಣ ಮಾಡಿ ಬದಲಾಯಿಸುವುದಿದ್ದರೆ ನಮ್ಮೂರಿನ ಗ್ರಾಮ ಸಭೆಯಲ್ಲಿ ಮಂಡಿಸಬೇಕಿತ್ತು. ವಿವಿಧ ಸಂಘ, ಸಂಸ್ಥೆ, ಸಮಿತಿಗಳನ್ನು ಒಗ್ಗೂಡಿಸಿ ಅಭಿಪ್ರಾಯ ಶೇಖರಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಉದ್ಯಮಿಯೊಬ್ಬರ ಆಸಕ್ತಿಯಂತೆ ಶಾಸಕರ ಒತ್ತಾಯದಿಂದ ನಗರಸಭೆ ತೀರ್ಮಾನಿಸಿರುವುದನ್ನು ನಾಗರಿಕ ಪ್ರತಿನಿಧಿಯಾಗಿ ಪ್ರತಿಭಟಿಸುತ್ತೇನೆ” ಎಂದು ವಾರ್ಡು ಪ್ರತಿನಿಧಿ ಉಮಾ ಹೇಳಿದ್ದಾರೆ.
ನೆಲ್ಲಿಕುಂಜೆ ಕಡಪ್ಪುರ (ಬೀಚ್) ಲೈಟ್ ಹೌಸ್
ರಸ್ತೆಗೆ ಮರುನಾಮಕರಣ ಮಾಡಿ ಬದಲಾಯಿಸುವುದಿದ್ದರೆ ಕಾರ್ಯಕ್ರಮ ಗವಾಸ್ಕರ್ ಉಪಸ್ಥಿತಿಯಲ್ಲಿ ನಡೆಯಲಿದೆಯೆಂದೂ, ಅವರ ಪುರುಸೊತ್ತಿನಂತೆ ನವಂಬರ್, ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆ ನಡೆಯಲಿದೆಯೆಂದೂ ಪ್ರಕಟಿಸಲಾಗಿತ್ತು. ಆದರೆ ಏಕಪಕ್ಷೀಯ ನಿರ್ಧಾರದ ಈ ಪರಿಷ್ಕರಣೆಯನ್ನು ಒಪ್ಪುವುದಿಲ್ಲ ಮತ್ತು ಗವಾಸ್ಕರ್ ಬಂದರೂ ಕಾರ್ಯಕ್ರಮವನ್ನು ತಡೆಯುವುದಾಗಿ ಬಿಜೆಪಿ ನಗರ ಘಟಕ ಘೋಷಿಸಿದ ಹಿನ್ನೆಲೆಯಲ್ಲಿ ರಸ್ತೆಯ ಮರು ನಾಮಕರಣ ವಿವಾದಕ್ಕೀಡಾಗಿದೆ.