ಕಾರ್ಕಳ : ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೦೨೪ರ ಸಾಲಿನ ಮತ್ತೆ ಮೂರು ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ,
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಆಚಾರ್ ಮತ್ತು ಅವರ ಪತ್ನಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ವಾಣಿ ಬಿ. ಆಚಾರ್ ಅವರು ಕನ್ನಡ ಸಂಘದಲ್ಲಿ ಸ್ಥಾಪಿಸಿದ ದತ್ತಿನಿಧಿಯ ‘ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’ಯನ್ನು ಕಾಂತಾವರದ ನಿವೃತ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿಠಲ ಬೇಲಾಡಿ ಅವರಿಗೆ, ಕನ್ನಡ ಸಂಘದಲ್ಲಿ ಮೊಗಸಾಲೆ ಕುಟುಂಬದವರು ಸ್ಥಾಪಿಸಿದ ದತ್ತಿನಿಧಿಯ ‘ಕಾಂತಾವರ ಸಾಹಿತ್ಯ ಪ್ರಶಸ್ತಿ’ಯನ್ನು ಸುಳ್ಯ ತಾಲೂಕಿನ ಅಜ್ಜಾವರದ ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರಿಗೆ ಮತ್ತು ಕನ್ನಡ ಸಂಘದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಧ್ಯಾಪಿಕೆ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಅವರು ಸ್ಥಾಪಿಸಿದ ದತ್ತಿನಿಧಿಯ ‘ಕಾಂತಾವರ ಅನುವಾದ ಸಾಹಿತ್ಯ ಪ್ರಶಸ್ತಿ’ಯನ್ನು ಕುಂದಾಪುರದ ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಅವರಿಗೆ ನೀಡುವುದೆಂದು ನಿರ್ಣಯಿಸಲಾಗಿದೆ.
ಪ್ರಶಸ್ತಿಯು ತಲಾ ೧೦,೦೦೦ ರೂಪಾಯಿಗಳ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.
ನವಂಬರ್ ೧ರಂದು ನಡೆಯುವ ‘ಕಾಂತಾವರ ಉತ್ಸವ’ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.