ಪೊಳಲಿ (ಮಂಗಳೂರು): ಎಲ್ಲ ಕಲೆಗಳು ಕಳೆಗಳಾಗಿ ಯಕ್ಷಗಾನಕ್ಕೆ ದಾಪುಗಾಲಿಡುತ್ತಿರುವ ಈ ಸಮಯದಲ್ಲಿ, ಪಾರಂಪರಿಕ ಯಕ್ಷಗಾನದ ರಕ್ಷಣೆಗೆ ಸಹಜವಾಗಿ ಕೂಗೆದ್ದಿದೆ. ಯಕ್ಷಗಾನವೆಂದರೆ ಇದಮಿತ್ಥಂ ಎಂಬ ಯಾವುದೇ ಲಿಖಿತ ದಾಖಲೆಗಳಿಲ್ಲ. ಆದರೆ, ಹಿರಿಯರು ಹಾಕಿಕೊಟ್ಟ ರಂಗ ಕ್ರಮಗಳನ್ನೇ ಅನುಸರಿಸುತ್ತಾ ಹೋದಲ್ಲಿ, ಕಳೆ ನಿವಾರಣೆಯಾಗಿ, ಕಲೆ ಬೆಳಗುವುದು ಸಾಧ್ಯ ಎಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದ ಆವರಣದಲ್ಲಿ ಭಾನುವಾರ (ಅಕ್ಟೋಬರ್ 13) ಸಂಜೆ, 4ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಯಕ್ಷಕಲಾ ಪೊಳಲಿ ಸಂಸ್ಥೆಯ ಸಂಪೂರ್ಣ ಸಹಕಾರದಲ್ಲಿ, ಬೈಪಾಡಿತ್ತಾಯ ಶಿಷ್ಯ ವೃಂದದ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಹಿರಿಯ ಯಕ್ಷಗಾನ ಕಲಾ ದಂಪತಿ ಶ್ರೀಮತಿ ಲೀಲಾವತಿ ಮತ್ತು ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಅವರ ಡಿಜಿ ಯಕ್ಷ ಫೌಂಡೇಶನ್ (ರಿ) ವತಿಯಿಂದ ಪ್ರತಿವರ್ಷ ಶ್ರೀಹರಿಲೀಲಾ ಯಕ್ಷನಾದ ಪುರಸ್ಕಾರ ನೀಡಲಾಗುತ್ತಿದೆ. ಪ್ರಶಸ್ತಿಯು ₹10,078 ರೂ., ಸ್ಮರಣಿಕೆ, ಶಾಲು ಒಳಗೊಂಡಿದೆ.
2024ರ ಶ್ರೀ ಹರಿಲೀಲಾ ಯಕ್ಷ ನಾದ ಪುರಸ್ಕಾರವನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪ್ರದಾನ ಮಾಡಿದ್ದು, ತೆಂಕು ತಿಟ್ಟು ಹಿಮ್ಮೇಳದ ಇಬ್ಬರು ಮಹಾನ್ ಗುರುಗಳ ಸಂಗಮಕ್ಕೆ ಪೊಳಲಿಯು ಸಾಕ್ಷಿಯಾಯಿತು.
ಮುಖ್ಯ ಅತಿಥಿ, ಯಕ್ಷಕಲಾ ಪೊಳಲಿ, ಇದರ ಸಂಚಾಲಕ, ಉದ್ಯಮಿ ವೆಂಕಟೇಶ್ ನಾವಡರು ಶುಭ ಹಾರೈಸಿದರು. ಹವ್ಯಾಸಿ ಕಲಾವಿದರೂ ಆಗಿರುವ ಮಂಗಳೂರಿನ ಉಪನ್ಯಾಸಕ ಡಾ.ಪುರುಷೋತ್ತಮ ಭಟ್ ನಿಡುವಜೆ ಅವರು ಅಭಿನಂದನ ನುಡಿಗಳನ್ನಾಡಿದರು. ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಸಮಿತಿಯ ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿದರು. ಕಲಾವಿದೆ ಸಾಯಿಸುಮಾ ನಾವಡ ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಉಡುಪ ಕತ್ತಲ್‌ಸಾರ್ ವಂದಿಸಿದರು.
18 ಚೆಂಡೆಗಳ ವಿಶೇಷ ಅಬ್ಬರ ತಾಳ
ಕಾರ್ಯಕ್ರಮಕ್ಕೆ ಮುನ್ನ 18 ಮಂದಿ ಮಕ್ಕಳು ಚೆಂಡೆಯ “ಅಬ್ಬರತಾಳ” ಎಂಬ, ಹರಿನಾರಾಯಣ ಬೈಪಾಡಿತ್ತಾಯರ ಸಂಯೋಜನೆಯ ಚೆಂಡೆಯ ವಿಶಿಷ್ಟ ನಾದವೈಭವವನ್ನು ಪ್ರದರ್ಶಿಸಿದರು. ಇದಕ್ಕೂ ಮೊದಲು ಬೈಪಾಡಿತ್ತಾಯ ಶಿಷ್ಯ ವೃಂದದಿಂದ ಯಕ್ಷಗಾನೀಯ ಹಾಡುಗಳ ಗಾನ ವೈವಿಧ್ಯ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ಬಳ್ಳಮಂಜ ಭಾಗವತಿಕೆಯಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಜರುಗಿದ್ದು, ಡಾ.ಪ್ರಭಾಕರ ಜೋಶಿ, ಹರೀಶ ಬಳಂತಿಮೊಗರು ಹಾಗೂ ದಿನೇಶ್ ಶೆಟ್ಟಿ ಕಾವಳಕಟ್ಟೆ ಅರ್ಥದಾರಿಗಳಾಗಿ ಸಹಕರಿಸಿದರು.