ಕಣಿಪುರ ಸುದ್ದಿಜಾಲ
ಕಾಸರಗೋಡು (ಅ. 19)
ಪತಿಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೈದ ಸುಳ್ಯ ಮೂಲದ ಮಹಿಳೆಯ ಸಾವು ಮರಣೋತ್ತರ ಪರೀಕ್ಷೆಯ ವೇಳೆ ಆಕೆಯ ಗುಪ್ತಾಂಗ ಭಾಗದ ಸ್ಯಾನಿಟರಿ ಪ್ಯಾಡ್ ನ ಒಳಗಿಂದ ಸಿಕ್ಕಿದ ರಹಸ್ಯ ಪತ್ರದ ಮೂಲಕ ” ಬಿಗ್ ಟ್ವಿಸ್ಟ್” ಪಡೆದುಕೊಂಡಿದೆ.
ಕಾಸರಗೋಡಿನ ಬೋವಿಕ್ಕಾನ ಪರಿಸರದ ಪೊವ್ವಲ್ ಬೆಂಚುಕೋರ್ಟು ನಿವಾಸಿ, ಜಾಫರ್ ಎಂಬಾತನ ಪತ್ನಿ , ಮೂಲತಃ ಸುಳ್ಯ ಗಾಂಧಿನಗರದ ಅಲೀಮ ಯಾನೆ ಶೈಮ (35) ಎಂಬಾಕೆಯ ಆತ್ಮಹತ್ಯೆ ದೌರ್ಜನ್ಯದ ಕರ್ಣಕಠೋರ ಕತೆಗಳನ್ನು ತೆರೆದಿಟ್ಟಿದೆ.
ಕಳೆದ ಮಂಗಳವಾರ ರಾತ್ರಿ ಐವರು ಮಕ್ಕಳತಾಯಿ ಅಲೀಮ ಮನೆಯ ಬಾತ್ ರೂಂನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿದ್ದಳು. ಪತ್ನಿ ಆತ್ಮಹತ್ಯೆ ಮಾಡಿದ್ದಾಳೆಂದು ತಿಳಿದ ಬೆನ್ನಲ್ಲೇ ಪತಿ ಜಾಫರ್ ರಾತ್ರಿಯೇ ಮನೆ, ಊರು ಬಿಟ್ಟು ತಲೆಮರೆಸಿಕೊಂಡಿದ್ದನು. ಪತಿ ಪತ್ನಿಯರ ನಡುವೆ ರಾತ್ರಿ ಜಗಳ ಏರ್ಪಟ್ಟಿತ್ತೆಂದೂ, ಪತಿಯ ಸಂಶಯ ರೋಗ ಸಹಿಸಲಾಗದೇ, ತಾನು ಅನುಭವಿಸಿದ ದೌರ್ಜನ್ಯ ದ ಅನುಭವಗಳನ್ನು ವಿವರಿಸುತ್ತಾ ಆತ್ಮಹತ್ಯೆ ಅಲ್ಲದೇ ಮತ್ತೊಂದು ದಾರಿ ತನಗೆ ಕಾಣದು ಎಂದು ವಿವರವಾಗಿ ಬರೆದು ಪ್ಯಾಡ್ ನೊಳಗೆ ಪತ್ರ ಇಟ್ಟು ಅಲೀಮ ಯಾನೆ ಶೈಮ ಆತ್ಮಹತ್ಯೆ ಮಾಡಿದ್ದಳು.
ಪತಿಯ ದೌರ್ಜನ್ಯದ ಹೆಸರಲ್ಲಿ ಜಾಫರ್ ಮನೆಯವರ ಜತೆ ಅಲೀಮಳ ಮನೆಯವರ ನಡುವೆ ಈ ಮೊದಲು ಜಗಳ, ಸಂಘರ್ಷ ಕೂಡಾ ಏರ್ಪಟ್ಟಿದೆ.
ವಿಪರೀತ ಸಂಶಯ ರೋಗಿಯಾದ ಪತಿ, ಇಲ್ಲ ಸಲ್ಲದ ಆರೋಪಗಳಿಂದ ದೈಹಿಕ ಹಲ್ಲೆ, ದೌರ್ಜನ್ಯ ನಡೆಸಿದ್ದಲ್ಲದೇ, ತನ್ನ ಮೊಬೈಲ್ ಕಿತ್ತುಕೊಂಡು, ಯಾರೊಂದಿಗೂ ಸಂಪರ್ಕವೇ ಇಲ್ಲದಂತೆ ಮಾಡಿ, ತನ್ನನ್ನು ಬೆತ್ತಲು ಮಾಡಿ ಹಲ್ಲೆಗೈಯ್ಯುವುದು ಸಹಿತ ಅಪಪ್ರಚಾರಗಳನ್ನು ಮಾಡಿ ಹೆಣ್ಣೊಬ್ಬಳಿಗೆ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆಂದು ಆಕೆ ಪತ್ರದಲ್ಲಿ ವಿವರಿಸಿದ್ದಾಳೆ. ಲೈಂಗಿಕ ದೌರ್ಜನ್ಯವೂ ಒಳಗೊಂಡ ಅನೇಕ ಆರೋಪಗಳನ್ನು ತನಿಖಾ ವಿಧೇಯವಾಗಿ ಪ್ರಕಟಿಸುವುದರಿಂದ ಪೋಲೀಸರು ತಡೆದಿದ್ದಾರೆ.
ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಾಗ ಆಕೆ ಬರೆದಿಟ್ಟ ಪತ್ರ ಗುಪ್ತಾಂಗ ಭಾಗದಿಂದ ಪತ್ತೆಯಾಗಿತ್ತು. ತಾನು ಬೇರೆಲ್ಲಾದರೂ ಪತ್ರ ಇಟ್ಟರೆ ಪತಿ ಹಾಗೂ ಆತನ ಮನೆಯವರು ಅದನ್ನು ನಾಶಪಡಿಸುವ ಭಯ ಇರುವುದರಿಂದ ಹೀಗಿಟ್ಟಿರುವುದಾಗಿಯೂ ಆಕೆ ಉಲ್ಲೇಖಿಸಿದ್ದಾಳೆ. ಈ ನಡುವೆ ನಾಪತ್ತೆಯಾದ ಜಾಫರ್ ಇನ್ನೂ ಪತ್ತೆಯಾಗಿಲ್ಲ. ಮೃತ ಮಹಿಳೆ ಬರೆದಿಟ್ಟ ಪತ್ರ ಸಿಕ್ಕಿದ ಮೇಲೂ ಪ್ರಕರಣ ದಾಖಲಿಸಿರುವ ಪೋಲೀಸರು ಜಾಫರ್ ವಿರುದ್ಧ ಆತ್ಮಹತ್ಯಾ ಪ್ರೇರಣೆ, ನಿರಂತರ ದೌರ್ಜನ್ಯ, ನೈತಿಕ ಸಂಶಯದ ಕೇಸು ದಾಖಲಿಸಿಲ್ಲ ಎಂದು ಆರೋಪಿಸಿ ಸುಳ್ಯ ಗಾಂಧಿನಗರ ಮೂಲದ ಮಹಿಳೆ ಕುಟುಂಬದವರು ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಮಾನವ ಹಕ್ಕು ಆಯೋಗಕ್ಕೆ ದೂರಿದ್ದಾರೆ.
ಪ್ರಕರಣದಲ್ಲಿ ಅಪರಾಧಿಯಾದ ಜಾಫರ್ ಮತ್ತು ಆತನ ಕುಟುಂಬದ ಮೇಲೆ ಮೊಕದ್ದಮೆ ದಾಖಲಿಸಿ ಆರೋಪಿಗಳಿಗೆ ನ್ಯಾಯೋಚಿತ ಶಿಕ್ಷೇ ನೀಡಬೇಕೆಂದು ಒತ್ತಾಯಿಸಿದ್ದಾರೆ.