ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಯುನೆಸ್ಕೊ ಮಾನ್ಯತೆ ಪಡೆದ ಸಂಸ್ಥೆಯಾದ ಶ್ರೀ ಇಡುಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರು “ಅಮೂರ್ತ ಜಾನಪದ ಪರಂಪರೆಯ ಅಂತರಾಷ್ಟ್ರೀಯ ದಿನಾಚರಣೆ”ಯನ್ನು ‘ಸ್ತ್ರೀಯರಿಗೆ ಯಕ್ಷಗಾನ ವೇಷಭೂಷಣ ಹಾಗೂ ಯಕ್ಷಗಾನದ ಕುರಿತಾದ ಅನುಭವ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಅಂತರಾಷ್ಟ್ರೀಯ ದಿನಾಚರಣೆಯನ್ನು ಆಯೋಜಿಸಲಾಯಿತು.
ಯಕ್ಷಗಾನ ವೇಷಭೂಷಣವನ್ನು ಧರಿಸಿಕೊಂಡ ಸ್ತ್ರೀಯರು ಹೆಜ್ಜೆ ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಂಡಳಿಯ ಟ್ರಸ್ಟಿಗಳಾದ ಶ್ರೀಧರ ಹೆಗಡೆ ಕೆರೆಮನೆ ಅತಿಥಿಗಳನ್ನು ಸ್ವಾಗತಿಸಿ ದಿನಾಚರಣೆಯ ಮಹತ್ವ ಮತ್ತು ಯುನೆಸ್ಕೋ ನೀಡಿದ ಮಾನ್ಯತೆಯ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆಯವರು ಮಾತನಾಡಿ “90 ವರ್ಷಗಳ ಇತಿಹಾಸವಿರುವ ಮತ್ತು ಪಾರಂಪರಿಕ ಯಕ್ಷಗಾನವನ್ನು ಉಳಿಸಿ, ಬೆಳೆಸಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಗೆ ಯುನೆಸ್ಕೋ ಮಾನ್ಯತೆ ಬಂದಿರುವುದು ಸಂಸ್ಥೆಯ ಸಾಧನೆಗೆ ಬಂದಿರುವ ಗೌರವ” ಎಂದು ಅಭಿಪ್ರಾಯಪಟ್ಟರು. ದೇಶದ ಸಂಸ್ಕೃತಿ ಮತ್ತು ಪಾರಂಪರಿಕತೆಗೆ ಕೊಡುಗೆ ನೀಡಿದ ಯಕ್ಷಗಾನ ಕ್ಷೇತ್ರವನ್ನು ಯುನೆಸ್ಕೋ ಸಂಸ್ಥೆ ಗುರುತಿಸುವಂತೆ ಮಾಡುವಲ್ಲಿ, ಈ ಮಂಡಳಿ ಸಾಕಷ್ಟು ಸಾರ್ಥಕವಾದ ಕಾರ್ಯ ಮಾಡಿರುವುದು ಶ್ಲಾಘನೀಯ. ಈ ಮಂಡಳಿ ಯುನೆಸ್ಕೋ ಮಾನ್ಯತೆ ಪಡೆದಿರುವುದು ನಾಡಿಗೆ ಮತ್ತು ಈ ದೇಶಕ್ಕೆ ಸಂದ ಗೌರವ ಎಂದು ಅಭಿಮಾನದಿಂದ ಅಭಿನಂದಿಸಿದರು. ಇದಕ್ಕೆ ಪೂರಕವಾಗಿ ಸ್ತ್ರೀಯರಿಗೆ ಯಕ್ಷಗಾನ ವೇಷಭೂಷಣ ಹಾಗೂ ಯಕ್ಷಗಾನದ ಕುರಿತಾದ ಅನುಭವವನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಿರುವುದು ಅನನ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕ ಕೆ. ಜಿ. ಹೆಗಡೆ ಅಣ್ಣುಹಿತ್ತಲು ಮಾತನಾಡುತ್ತಾ ಉತ್ತರ ಕನ್ನಡ ಜಿಲ್ಲೆಯ ಗಂಡು ಕಲೆಯಾದ ಯಕ್ಷಗಾನ ಕಲೆಯ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಹಾಸುಹೊಕ್ಕುಗಳನ್ನು ಸಂರಕ್ಷಿಸಲು ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಅವಿರತವಾಗಿ ಮೂರು ತಲೆಮಾರಿನಿಂದ ಸಾರ್ಥಕ ಕಾರ್ಯ ಮಾಡಿದೆ. ತಲೆಮಾರಿನಿಂದ ತಲೆಮಾರಿಗೆ ಯಕ್ಷಗಾನದ ಪರಂಪರೆಯನ್ನು, ಸಂಸ್ಕೃತಿಯನ್ನು ದಾಟಿಸಲು ಈ ಸಂಸ್ಥೆ ಒಂದು ಜೀವಂತ ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿರುವುದು ಈ ನಾಡಿಗೆ ಹೆಮ್ಮೆಯ ವಿಷಯ ಎಂದರು.
ಅಮೂರ್ತ ಜಾನಪದ ಪರಂಪರೆಯ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಯಕ್ಷಗಾನ ಕಲೆಯ ಅಸ್ತಿತ್ವವನ್ನು ಉಳಿಸುತ್ತಾ, ಅಮೂರ್ತ ಜಾನಪದ ಪರಂಪರೆಯನ್ನು ನಾಡಿಗೆ ಗುರುತಿಸಲು ಸ್ತ್ರೀ ವೇಷಧಾರಿಗಳಾಗಿ ಶ್ರೀಮತಿ ರಾಜೇಶ್ವರಿ ಹೆಗಡೆ, ಶ್ರೀಮತಿ ಸುಹಾಸಿನಿ ಹೆಗಡೆ, ಕುಮಾರಿ ದಿವ್ಯ ನಾಯ್ಕ, ಕುಮಾರಿ ಸಚೇತ ಆಚಾರಿ,ಕುಮಾರಿ ಚೇತನ್ ನಾಯ್ಕ , ಕುಮಾರಿ ಚಂದನ ನಾಯ್ಕ ಮತ್ತು ಕುಮಾರಿ ಆದ್ಯರಾವ್ ರವರು ವೇಷಭೂಷಣ ಮತ್ತು ಯಕ್ಷಗಾನದ ಕುರಿತಾದ ಅನುಭವವನ್ನು ಸಭೆಗೆ ತಿಳಿಸುವ ಅವಕಾಶವನ್ನು ಉಪಯೋಗಿಸಿಕೊಂಡರು. ಕೆರೆಮನೆ ಶ್ರೀಧರ ಹೆಗಡೆ ವಂದಿಸಿದರು.