ಕಣಿಪುರ ಸುದ್ದಿಜಾಲ (ಅ.18)
ಕುಂಬಳೆ ಬಳಿಯ ಶ್ರೀ ಅನಂತಪುರ ಕ್ಷೇತ್ರದ ನವಾನ್ನ ಸಹಿತ ವಾರ್ಷಿಕ ಬಲಿವಾಡು ಕೂಟ ನಿಮಿತ್ತ ನಡೆದ ಪಾರ್ತಿಸುಬ್ಬನ ತವರೂರ ಬಾಲ ಪ್ರತಿಭೆಗಳ ಯಕ್ಷಗಾನ ಗಾನ-ನಾದ ವೈಭವ ಪ್ರೇಕ್ಷಕ ಮತ್ತು ಶೋತೃಗಳ ವಿಶೇಷ ಪ್ರಶಂಸೆಗೆ ಪಾತ್ರವಾಯಿತು.
- ಅನುಭವೀ ಯಕ್ಷಗಾನ ಭಾಗವತ, ಯಕ್ಷಾಂತರಂಗ ಪೆರ್ಲದ ಸಂಚಾಲಕ ಡಾ. ಸತೀಶ ಪುಣಿಂಚಿತ್ತಾಯರ ಮಾರ್ಗದರ್ಶನದಲ್ಲಿ, ಅರಳು ಪ್ರತಿಭೆಗಳಾದ ಕು. ಕೃತ್ತಿಕಾ ಖಂಡೇರಿ, ಕು. ಸ್ಮೃತಿ ಮಾಯ್ಲೆಂಗಿ ಇವರ ಹಾಡುಗಾರಿಕೆ ಮತ್ತು ಡಾ.ಸತೀಶ ಪೂಣಿಂಚಿತ್ತಾಯರ ಪದಯಾನ ಜನಮನಸೂರೆಗೊಂಡಿತು. ಪಾರ್ತಿಸುಬ್ಬನ ನೆಲದಲ್ಲಿ ಯಕ್ಷಗಾನದ ಆದಿಕಾವ್ಯದ ಆಯ್ದ ಪದಗಳನ್ನು ಹಾಡಿದ ಚಿಗುರು ಪ್ರತಿಭೆಗಳು ಭವಿಷ್ಯದ ಭರವಸೆಗಳೆಂಬಂತೆ ಕರತಾಡನಗಳ ಪ್ರಶಂಸೆ ಪಡೆದರು.
ಹಿಮ್ಮೇಳದಲ್ಲಿ ಕೂಡಾ ಬಾಲ ಪ್ರತಿಭೆಗಳಾದ ಕು.ಸಮೃದ್ಧ ಪುಣಿಂಚಿತ್ತಾಯ, ಸ್ಕಂದ ಕಾಟುಕುಕ್ಕೆ, ಹರ್ಷೇಲ್ ಮಾಯ್ಲೇಂಗಿ, ಮುರಳೀಧರ ಬಟ್ಯಮೂಲೆ ಪಾಲ್ಗೊಂಡು, ಪ್ರತಿಭೆಯಿಂದ ಪ್ರಶಂಸೆ ಪಡೆದರು.ಅನಂತಪುರ ಕ್ಷೇತ್ರದ ನವಾನ್ನ ಸಹಿತ ಬಲಿವಾಡು ಕೂಟಕ್ಕೆ ವರ್ಷಂಪ್ರತಿ ಅನೇಕ ವರ್ಷಂಗಳಿಂದ ಕಲಾವಿದ ದಿ. ಸದಾಶಿವ ಅನಂತಪುರ ಮುತುವರ್ಜಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತಿತ್ತು. ಪ್ರಸಕ್ತ ಕಲಾಪೋಷಕ ದಂಪತಿಗತಗಳಾದ ಅವರಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸವಿನೆನಪಿನ ಪ್ರಾಯೋಜಕತ್ವದಲ್ಲಿ ಮನೆಯವರು ಈ ಕಾರ್ಯಕ್ರಮ ಪ್ರಾಯೋಜಿಸಿದ್ದರು.
ತೆಂಕಣ ಯಕ್ಷತವರಿನ ಎಳೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಅವಕಾಶವಿತ್ತು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನಂತಪುರ ಕ್ಷೇತ್ರದ ಸೇವಾ ಸಮಿತಿ ಪ್ರತಿನಿಧಿ ಗೋಪಾಲಕೃಷ್ಣ ಪೆರ್ಣೆ ಸ್ವಾಗತಿಸಿದರು. ಡಾ.ಸತೀಶ ಪುಣಿಂಚಿತಾಯ ನಿರೂಪಿಸಿದರು. ಸತ್ಯಶಂಕರ ಅನಂತಪುರ ಮತ್ತು ಸೋದರಿಯರು ದೇವಳದ ವತಿಯಿಂದ ಪ್ರಸಾದ ಗೌರವಗಳನ್ನಿತ್ತರು.