ಕಣಿಪುರ ಸುದ್ದಿಜಾಲ ವಿಶೇಷ
ಪಟ್ಟಣಂತಿಟ್ಟ( .17):ಶಬರಿಮಲೆಯಲ್ಲಿ ಅರ್ಚಕನಾಗಿ ಅಯ್ಯಪ್ಪ ಸ್ವಾಮಿ, ಮಾಳಿಗಪುರಂ ಸೇವೆ ಮಾಡಿ ಪೂಜೆಕೈಗೊಳ್ಳಬೇಕಿದ್ದರೆ ಯಾರು ನಿರ್ಣಯಿಸಿದರೂ ಅಸಾಧ್ಯ!
ಅಂತಹ ಅದೃಷ್ಟ ಶಾಲಿಗಳನ್ನು ಸಾಕ್ಷಾತ್ ಅಯ್ಯನೇ ನಿರ್ಣಯಿಸಬೇಕು!
ಪೂಜಾವಿಧಿ ಅರ್ಚಕನಿಗೆ ಹಕ್ಕಾಗದೇ, ವರ್ಷಂಪ್ರತಿ ಅದೃಷ್ಟಶಾಲಿಗೆ ಒದಗುವ ಶಬರಿಮಲೆಯ ಅರ್ಚಕರ ಆಯ್ಕಾ ವಿಧಾನವೇ ವಿಶೇಷ…
ವೃಶ್ಚಿಕ ಮಾಸ 1ಕ್ಕೆ ಆರಂಭವಾಗುವ ನೂತನ ಶಬರಿಮಲೆ ತೀರ್ಥಾಟನಾ ಹಿನ್ನೆಲೆಯಲ್ಲಿ ಶ್ರೀ ಶಬರಿಮಲೆ ಸನ್ನಿಧಾನ ಮತ್ತು ಮಾಳಿಗಪುರಂ ಸನ್ನಿಧಾನಕ್ಕೆ ನೂತನ ಅರ್ಚಕರನ್ನಿಂದು ಆಯ್ಕೆ ಮಾಡಲಾಯಿತು.
ಶಬರಿಮಲೆ ಸನ್ನಿಧಾನದಲ್ಲಿಂದು ಉಷಃ ಪೂಜೆಯ ಬಳಿಕ ನಡೆದ ಅದೃಷ್ಟ ಚೀಟಿ ಎತ್ತುವಿಕೆಯಲ್ಲಿ ನೂತನ ಪ್ರಧಾನ ಅರ್ಚಕರ ನೇಮಕವಾಯಿತು. ಇದರಂತೆ ಶಬರಿಮಲೆ ಸನ್ನಿಧಾನದ ನೂತನ ಅರ್ಚಕರಾಗಿ ಕೊಲ್ಲಂ ಶಕ್ತಿಕುಳಂಗರ ಮೂಲದ ಎಸ್. ಅರುಣ್ ಕುಮಾರ್ ನಂಬೂದಿರಿ ಆಯ್ಕೆಗೊಂಡರು. ಇವರು ಈ ಹಿಂದೆ ತಿರುವನಂತಪುರ ಆಟ್ಟುಕಾಲ್ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದರು. ಮಾಳಿಗಪುರಂ ಪ್ರಧಾನ ಅರ್ಚಕರಾಗಿ ಕಲ್ಲಿಕೋಟೆ ತಿರುಮಂಗಲಂ ಇಲ್ಲಂ ನ ಟಿ.ವಾಸುದೇವನ್ ಆಯ್ಕೆಗೊಂಡಿದ್ದಾರೆ.
ಇಂದು ಶಬರಿಮಲೆ ಸನ್ನಿಧಾನದಲ್ಲಿ ಉಷಃಪೂಜೆಯ ಬಳಿಕ ಅಯ್ಯನ ಸಮಕ್ಷಮ ಅಪೇಕ್ಷಿತರಲ್ಲಿ ಅರ್ಹರಾದವರನ್ನು ಆಯ್ದು ಚೀಟಿ ಎತ್ತುವ ಮೂಲಕ ಆಯ್ಕೆ ನಡೆಯಿತು. ಪಂದಳಂ ರಾಜಮನೆತನದ ಮಣಿಕಂಠನ ಪ್ರತಿನಿಧಿಯಾಗಿ ರುಷಿಕೇಶ್ ಚೀಟಿ ಎತ್ತಿ ಅರುಣ್ ಕುಮಾರ್ ನಂಬೂದಿರಿಯವರನ್ನು ಆಯ್ದುಕೊಂಡರು. ಈ ಸ್ಥಾನಕ್ಕಾಗಿ 25ಮಂದಿ ಅಪೇಕ್ಷಿತರಿದ್ದರು. ಮಾಳಿಗಪುರಂ ಸನ್ನಿಧಾನಕಾಗಿ ಪಂದಳಂ ರಾಜಮನೆತನದ ಕು.ವೈಷ್ಣವಿ ಚೀಟಿ ಎತ್ತಿ, ಟಿ.ವಾಸುದೇವನ್ ಅವರಾಯ್ಕೆ ನಡೆಯಿತು.
ಈ ಸಂದರ್ಭ ಶಬರಿಮಲೆ ತಂತ್ರಿ ಬ್ರಹ್ಮಶ್ರೀ ಕಂಠರರ್ ರಾಜೀವರ್, ಬ್ರಹ್ಮಶ್ರೀ ಕಂಠರರ್ ಬ್ರಹ್ಮದತ್ತನ್, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್, ಪಟ್ಟಣಂತಿಟ್ಟ ಜಿಲ್ಲಾ ಆಯುಕ್ತರಾದ ಜಿಲ್ಲಾ ನ್ಯಾಯಾಧೀಶ ಆರ್. ಜಯಕೃಷ್ಣನ್ ಹಾಗೂ ದೇವಸ್ವಂ ಮಂಡಳಿ ಸದಸ್ಯರು ಮತ್ತು ವೈದಿಕ ಪ್ರಮುಖರು ಉಪಸ್ಥಿತರಿದ್ದರು.
ಈ ಆಯ್ಕೆಯಲ್ಲೇನೂ ರಾಜಕೀಯಗಳಿಲ್ಲ. ವರ್ಷಂಪ್ರತಿ ಶಬರಿಮಲೆ ಪ್ರಧಾನ ಅರ್ಚಕರು ಬದಲಾಗುವುದು ರೂಢಿ. ಈ ಅವಕಾಶ ಪಡೆಯಬೇಕೆಂದು ಬಯಸಿ ಅನೇಕರು ಅಪೇಕ್ಷಿತರಿರುತ್ತಾರೆ. ಈ ಪೈಕಿ ಯೋಗ್ಯ ಮಾನದಂಡದಂತೆ ಅರ್ಹರನ್ನು ಆಯ್ದು ಬಳಿಕ ಅವರಲ್ಲೊಬ್ಭರನ್ನು ಅಯ್ಯಪ್ಪನ ಸಮಕ್ಷಮ ಚೀಟಿ ಎತ್ತಿ ಆಯ್ದುಕೊಳ್ಳುವುದು ವಿಧಾನ. ಯಾರಿಗೆ ಅಯ್ಯನ ಪೂಜಾ ಕೈಂಕರ್ಯ ಮಾಡಬೇಕೆಂದು ಅಯ್ಯಪ್ಪ ಸ್ವಾಮಿ ಬಯಸಿದ್ದಾರೋ ಅವರೇ ಆಯ್ಕೆಯಾಗುತ್ತಾರೆಂಬುದು ಅಪೇಕ್ಷಿತರ ನಂಬಿಕೆ.
ಇಂದು ಆಯ್ಕೆಗೊಂಡವರು ನ.15ರಂದು ಮಂಡಲಕಾಲದ ಆರಂಭದ ದಿನ ನೂತನ ಜವಾಬ್ದಾರಿ ವಹಿಸಿಕೊಳ್ಳುವರು.
ತುಲಾಮಾಸ ಪೂಜೆಯಂಗವಾಗಿ ನಿನ್ನೆ ಸನ್ನಿಧಾನದ ನಡೆ ತೆರೆಯಲಾಗಿದೆ. 21ಕ್ಕೆ ಮುಚ್ಚುವ ನಡೆಯು ಬಳಿಕ ಮಂಡಲ-ಮಕರ ಮಾಸದ ಹಿನ್ನೆಲೆಯಲ್ಲಿ ನ.15ಕ್ಕೆ ತೆರೆಯಲಿದೆ. ನೂತನ ಮಂಡಲಕಾಲದೊಂದಿಗೆ ಇಂದು ಆಯ್ಕೆಯಾದ ಅರ್ಚಕರು ಇನ್ನು ಒಂದು ವರ್ಷ ಅಯ್ಯನ ಪೂಜಾರ್ಹತೆ ಹೊಂದಿದ್ದಾರೆ.