ಕಣಿಪುರ ಸುದ್ದಿಜಾಲ( ಅ.17)
ಉಪ್ಪಳ: ಯಾವುದೇ ಅರ್ಹತೆ ಮತ್ತು ಅಧಿಕೃತ ಯೋಗ್ಯತೆಗಳಿಲ್ಲದೇ ಗ್ರಾಮೀಣ ಮುಗ್ಧ ರೋಗಿಗಳಿಗೆ ಔಷಧಿಯಿತ್ತು ಚಿಕಿತ್ಸೆ ಮಾಡುತ್ತಿದ್ದ ನಕಲಿ ವೈದ್ಯನನ್ನು ಉಪ್ಪಳ ಪಚ್ಚಿಲಂಪಾರೆಯಿಂದ ಬಂಧಿಸಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ ಕಾಡ್, ಕಳರಿಕಲ್ ಹೌಸ್ ನಿವಾಸಿ ಸಿ.ಎಂ. ಜಮಾಲುದ್ದೀನ್ (56) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಉಪ್ಪಳ ಪಚ್ಲಂಪಾರೆಯ ಕ್ಲಬ್ ಕಟ್ಟಡವೊಂದರಲ್ಲಿ ಮೆಡಿಕಲ್ ಕ್ಯಾಂಪ್ ಏರ್ಪಡಿಸಿ, ರೋಗಿಗಳನ್ನು ಬರಮಾಡಿಸಿ ಚಿಕಿತ್ಸೆ ನೀಡುತ್ತಿದ್ದ ಈತನ ವಿರುದ್ಧ ಜಿಲ್ಲಾ ಮೆಡಿಕಲ್ ಆಫೀಸರಿಗೆ ದೊರೆತ ಸುಳಿವಿನ ಹಿನ್ನೆಲೆಯಲ್ಲಿ ಅವರು ನಡೆಸಿದ ಗೌಪ್ಯ ತನಿಖೆಯಲ್ಲಿ ಈತನಿಗೆ ಯಾವುದೇ ವೈದ್ಯಕೀಯ ಅರ್ಹತೆ, ಯೋಗ್ಯತೆಗಳಿಲ್ಲದಿರುವುದು ಬಯಲಾಯಿತು. ಇದರಂತೆ ಜಿಲ್ಲಾ ಮೆಡಿಕಲ್ ಆಫಿಸರ್ ನೀಡಿದ ದೂರಿನಂತೆ ಕೂಡಲೇ ಮಂಜೇಶ್ವರ ಎಸ್.ಐ ನೇತೃತ್ವದಲ್ಲಿ ಪೋಲೀಸರು ಈತನನ್ನು ಬಂಧಿಸಿದ್ದಾರೆ. ಈತ ನಕಲಿ ವೈದ್ಯನ ಸೋಗಿನಲ್ಲಿ ಕೇರಳ ವ್ಯಾಪಕ ಗ್ರಾಮೀಣ ಮುಗ್ಧರನ್ನು ನಕಲಿ ಚಿಕಿತ್ಸೆ ನೀಡಿ ವಂಚಿಸಿದ್ದಾನೆಂದು ಹೇಳಲಾಗಿದೆ. ಈ ಕುರಿತು ಮಾಹಿತಿಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.