ಕಣಿಪುರ ಸುದ್ದಿಜಾಲ( ಅ.17)
ಕುಂಬಳೆ: ಕಾವೇರಿ(ತುಲಾ) ಸಂಕ್ರಮಣದಂಗವಾಗಿ ಕುಂಬ್ಳೆ ಸಮೀಪದ ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಾಲಯದಲ್ಲಿಂದು ಸಾವಿರಾರು ಭಕ್ತರು ಕಾವೇರಿ ತೀರ್ಥಸ್ನಾನಗೈದು ಪುನೀತರಾದರು. ಭಾಗಮಂಡಲದ ಕಾವೇರಿ ತೀರ್ಥೋದ್ಭವಕ್ಕೆ ತತ್ಸಮಾನವಾಗಿ ಕುಂಬಳೆ ಸೀಮೆಯಲ್ಲಿ ನಡೆಯುವ ತೀರ್ಥಸ್ನಾನ ಇದಾಗಿದ್ದು, ವರ್ಷಂಪ್ರತಿ ವಾಡಿಕೆಯಂತೆ (ತುಲಾ) ಕಾವೇರಿ ಸಂಕ್ರಮಣದ ದಿನ ಅಸಂಖ್ಯರು ನೆರೆಯುತ್ತಾರೆ.
ಚಿತ್ರಗಳು: ಶರತ್ ಕುಮಾರ್ ಜೆ.ಕೆ.
ಈ ಬಾರಿ ಮಳೆಯ ಆತಂಕವಿದ್ದರೂ ಇಂದು ಮಳೆಯ ತೊಂದರೆಗಳೇನೂ ಇಲ್ಲದೇ ತೀರ್ಥಸ್ನಾನ ಪ್ರಕ್ರಿಯೆಗಳು ಸಾಂಗವಾಗಿ ನಡೆಯಿತು.
ಮುಂಜಾನೆ 4ಗಂಟೆಯ ವೇಳೆಗೆ ತೀರ್ಥಸ್ನಾನ ಪ್ರಕ್ರಿಯೆ ಆರಂಭಗೊಂಡರೆ ಮಧ್ಯಾಹ್ನ ಮಹಾಪೂಜೆಯ ತನಕ ಸ್ನಾನ ನಡೆಯಿತು. ಸ್ತ್ರೀ ಪುರುಷ ಬೇಧವಿಲ್ಲದೇ ಅಬಾಲವೃದ್ಧರಾದಿ ಜನತೆ ತೀರ್ಥಸ್ನಾನಕ್ಕಾಗಮಿಸುವುದು ಇಲ್ಲಿನ ವಾಡಿಕೆ.
ಮಜುಂಗಾವು ಕ್ಷೇತ್ರ ಮುಂಭಾಗದ ಮುರ ಪಾರೆಯ ನಡುವೆ ಇರುವ ಅಕ್ಷಯ ಕೆರೆಯಲ್ಲಿ ವರ್ಷಕ್ಕೊಮ್ಮೆ ಕಾವೇರಿ ಸಂಕ್ರಮಣ(ತುಲಾ) ದಿನದಂದು ಮಾತ್ರವೇ ತೀರ್ಥಸ್ನಾನ ನಡೆಯುತ್ತದೆ. ಈ ಹಿನ್ನೆಲೆಯಲ್ಲಿದನ್ನು ಮುಚುಕುಂದ ತೀರ್ಥ ಎನ್ನುತ್ತಾರೆ. ತಲಕಾವೇರಿಯ ತೀರ್ಥಸ್ನಾನಕ್ಕೆ ಇದು ಸಮಾನವೆಂಬ ನಂಬಿಕೆಯಿದ್ದು, ಈ ಕಾರಣದಿಂದಲೇ ತುಲಾ ಸಂಕ್ರಮಣವನ್ನು ಕುಂಬಳೆ ಸೀಮೆಯಲ್ಲಿ ಕಾವೇರಿ ಸಂಕ್ರಮಣವೆಂದು ಆರಾಧಿಸುತ್ತಾರೆ.
ತೀರ್ಥ ಕೆರೆಗೆ ಪ್ರದಕ್ಷಿಣೆ ಬರುತ್ತಿರುವಾಗಲೇ ನವಧಾನ್ಯಗಳನ್ನು ಜಲಸಮರ್ಪಿಸಿ ಬಳಿಕ ತೀರ್ಥಕೆರೆಯಲ್ಲಿ ಮುಳುಗೇಳುವುದು ಸ್ನಾನದ ರೂಢಿ. ಈ ರೀತಿಯ ಸ್ನಾನದಿಂದ ಶರೀರದಲ್ಲಿ ಕಂಡುಬರುವ ಉಣ್ಣಿ(wart) ಕಾಣೆಯಾಗುತ್ತವೆಂದು ಜನನಂಬಿಕೆ. ಸ್ನಾನದ ಬಳಿಕ ದೇವಳಕ್ಕೆ ತೆರಳಿ ಪ್ರಸಾದ ಸ್ವೀಕರಿಸಿ,ಅನಂತರ ಅನ್ನಪ್ರಸಾದ ಸ್ವೀಕರಿಸುವ ಈ ಸಂಭ್ರಮ ಮುಜುಂಗಾವು ದೇವಾಲಯದಲ್ಲಿ ವರ್ಷಕ್ಕೊಮ್ಮೆ ಅತ್ಯಧಿಕ ಜನರು ಸೇರುವ ಕಾರ್ಯಕ್ರಮವಾಗಿದೆ.
ಪಾರ್ಥಸಾರಥಿ ಶ್ರೀಕೃಷ್ಣ ದೇವರ ಪ್ರತಿಷ್ಠೆ ಇರುವ ದೇವಾಲಯದಲ್ಲಿ ಮುಳ್ಳುಸೌತೆಯ ನೈವೇದ್ಯ ದೇವರಿಗೆ ಅತ್ಯಂತ ಪ್ರಿಯವೆಂದು ಪ್ರಾಚೀನ ಕಾಲದಿಂದಲೇ ಜನರು ನಂಬುತ್ತಾರೆ. ಜಾನುವಾರು ರೋಗಗಳ ನಿವಾರಣೆಗೆ, ಕೃಷಿ ಧಾನ್ಯ ಬೆಳೆಗೆ ಒದಗುವ ಉಪದ್ರವಕಾರೀ ಕ್ರಿಮಿಕೀಟಗಳ ನಾಶಕ್ಕೆ ಜನರು ಈ ದೇವಾಲಯಕ್ಕೆ ಮುಳ್ಳುಸೌತೆಯ ಕಾಣಿಕೆ ನೀಡುವ ವಾಡಿಕೆ ಇದೆ. ಶ್ರೀ ಕ್ಷೇತ್ರವು ಮುಚುಕುಂದ ಮುನಿಗಳ ಪ್ರತಿಷ್ಠೆಯೆಂದೂ ಈ ಕಾರಣದಿಂದ ಇದು ಮುಜುಂಗಾವು ಎಂದೆನಿಸಿಕೊಂಡಿದೆಯೆಂದೂ ಹೇಳಲಾಗುತ್ತದೆ.