ಕಣಿಪುರ ಸುದ್ದಿಜಾಲ( ಅ.17)
ಕಣ್ಣೂರು: ಭ್ರಷ್ಟಾಚಾರ ಆರೋಪ ಹೊರಿಸಿದ ಬೆನ್ನಲ್ಲೇ ಮನನೊಂದ ಎಡಿಎಂ(aditional dist magistrate) ಆತ್ಮಹತ್ಯೆಗೈದ ಕೇರಳದ ಕಣ್ಣೂರಿನ ಪ್ರಕರಣದಲ್ಲಿ ಜಿ.ಪಂ. ಅಧ್ಯಕ್ಷೆ ಪಿ.ಪಿ. ದಿವ್ಯ ವಿರುದ್ಧ ಕೇಸು ದಾಖಲಾಗಿದೆ.
ಆತ್ಮಹತ್ಯಾ ಪ್ರೇರಣೆಯ ಅಪರಾಧ ಹಾಗೂ ಮಾನಹಾನಿಕರ ಉಲ್ಲೇಖದ ಅಪರಾಧ ಉಲ್ಲೇಖಿಸಿ ಬಿಎನ್ ಎಸ್ 108 ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ. ಕನಿಷ್ಟ 10ವರ್ಷ ಸಜೆ ಶಿಕ್ಷೆ ಸಿಗುವ ಕಾಯ್ದೆ ಇದಾಗಿದೆ.
ಚಿತ್ರದಲ್ಲಿ ಜಿ.ಪಂ ಅಧಕ್ಷೆ ದಿವ್ಯ ಹಾಗೂ ಆತ್ಮಹತ್ಯೆಗೈದ ಎಡಿಎಂ
ಕಣ್ಣೂರು ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ (ಎಡಿಎಂ) ಆಗಿದ್ದ ಕೇರಳ ಪಟ್ಟಣಂತಿಟ್ಟ ಜಿಲ್ಲೆಯ ನವೀನ್ ಬಾಬು ನಿವೃತ್ತಿಗೆ ಇನ್ನು 7ತಿಂಗಳಷ್ಟೇ ಇರುವ ಹಿನ್ನೆಲೆಯಲ್ಲಿ ತನ್ನ ಹುಟ್ಟೂರಿಗೆ ವರ್ಗಾವಣೆ ಪಡೆದಿದ್ದರು. ಇದರಂತೆ ಜಿಲ್ಲಾಡಳಿತದ ಅಧಿಕಾರಿಗಳು ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಈ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಆಗಮಿಸಿದ ಜಿ.ಪಂ. ಅಧ್ಯಕ್ಷೆ ಜಿಲ್ಲಾಧಿಕಾರಿಗಳ ಸಮ್ಮುಖ ನವೀನ್ ಬಾಬು ಅವರ ಸೇವೆಯ ಕುರಿತು ಮಾತಾಡುತ್ತಾ ಪೆಟ್ರೋಲ್ ಬಂಕ್ ಒಂದಕ್ಕೆ ಎನ್.ಒ.ಸಿ ನೀಡುವ ವಿಚಾರದಲ್ಲಿ ಎಡಿಎಂ ಹಣ ಪಡೆದು ಭ್ರಷ್ಟಾಚಾರ ನಡೆಸಿರುವುದು ತನಗೆ ಗೊತ್ತಿದೆ, ಅವರನ್ನು ಸುಮ್ಮನೆ ಬಿಡಲಾಗುತ್ತಿದೆಯೇ..?ಎಂದು ಆರೋಪ ಹೊರಿಸಿದ್ದರು.
ಬೀಳ್ಕೊಡುಗೆ ಪಡೆದಂದೇ ರಾತ್ರಿ ತನ್ನೂರಿಗೆ ಮರಳಬೇಕಿದ್ದ ಎಡಿಎಂ ಅಂದು ರಾತ್ರಿಯೇ ತನ್ನ ಕ್ವಾರ್ಟರ್ಸಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದರು. ಪಟ್ಟಣಂತಿಟ್ಟ ಎಡಿಎಂ ಆಗಿ ಊರಿಗೆ ಮರಳಬೇಕಿದ್ದ ವ್ಯಕ್ತಿ ಬೀಳ್ಕೊಡುಗೆ ಪಡೆದು, ಮೃತರಾಗಿ ತಲುಪಿದ್ದು , ಕೇರಳ ವ್ಯಾಪಕ ಭಾರೀ ಸಂಚಲನ ಸೃಷ್ಟಿಸಿದ ಸುದ್ದಿಯಾಗಿತ್ತು. ಸರಕಾರಿ ನೌಕರರು, ಕಂದಾಯ ಇಲಾಖಾಧಿಕಾರಿಗಳು ಈ ಕುರಿತು ಪ್ರತಿಭಟನೆ ನಡೆಸಿ ಜಿಪಂ ಅಧ್ಯಕ್ಷೆ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಸ್ವತಃ ಸಚಿವ,ಶಾಸಕಾದಿ ಜನರು ಎಡಿಎಂ ಉತ್ತಮ ನಡತೆಯ ವ್ಯಕ್ತಿಯೆಂದೂ, ಭ್ರಷ್ಟಾಚಾರ ನಡೆಸುವವರಲ್ಲವೆಂದೂ ಹೇಳಿದ್ದರು.
ಜಿ.ಪಂ. ಅಧ್ಯಕ್ಷೆಯ ಪತಿಯ ಹೆಸರಲ್ಲಿ ಬೇನಾಮಿಯಾಗಿ ಪೆಟ್ರೋಲ್ ಬಂಕ್ ಸ್ಥಾಪಿಸುವುದಕ್ಕೆ ಎಡಿಎಂ ಆರಂಭದಲ್ಲಿ ಎನ್ಒಸಿ ನೀಡಿರಲಿಲ್ಲ. ಈ ವಿರೋಧದಿಂದ ಅವರು ಭ್ರಷ್ಟಾಚಾರ ಆರೋಪ ಹೊರಿಸಿದರೆಂದೂ, ಪ್ರಾಮಾಣಿಕ ಅಧಿಕಾರಿಯಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿದರೆಂದೂ ಹೇಳಲಾಗಿದೆ.