ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಮಂಜೇಶ್ವರ ಚುನಾವಣಾ ಲಂಚ ವಿವಾದ ಬಿಜೆಪಿ ಕೇರಳ ರಾಜಾಧ್ಯಕ್ಷ ಕೆ.ಸುರೇಂದ್ರನ್ ರನ್ನು ಸುತ್ತಿಕೊಂಡಿದೆ. ಈಗ ಕಾಸರಗೋಡು ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿದ ತೀರ್ಪಿಗೆ ಹೈಕೋರ್ಟಿನಿಂದ ತಡೆಯಾಜ್ಞೆಯಾಗಿದೆ.
Kanipura News Network
ಕೊಚ್ಚಿನ್(ಆ.16)
ಮಂಜೇಶ್ವರ ಚುನಾವಣಾ ಕಣದಿಂದ ಹಿಂಜರಿಯಲು ಆಮಿಷವೊಡ್ಡಿ ಲಂಚ ನೀಡಿದರೆಂಬ ಕೇಸಿನಲ್ಲಿ ಕಾಸರಗೋಡು ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿದ ಮಂಜೇಶ್ವರದ ಅಭ್ಯರ್ಥಿಯಾಗಿದ್ದ, ಈಗಿನ ಬಿಜೆಪಿ ಕೇರಳ ಘಟಕ ಅಧ್ಯಕ್ಷ ಕೆ.ಸುರೇಂದ್ರನ್ ಕುರಿತಾದ ನ್ಯಾಯಾಲಯ ತೀರ್ಪಿಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಹಿಡಿದಿದೆ. ಈ ಮೂಲಕ ಹೈಕೋರ್ಟು ಪ್ರಕರಣವನ್ನು ಚಾಲ್ತಿಯಲ್ಲಿರಿಸಿ ಕೈಗೆತ್ತಿಕೊಂಡಿದೆ.
2021ರ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ ತನ್ನ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಬಿ.ಎಸ್.ಪಿ ಯ ಕೆ.ಸುಂದರ ಅವರನ್ನು ಸ್ಪರ್ಧಾ ಕಣದಿಂದ ಹಿಂಜರಿಯಲು ಆಮಿಷ ಒಡ್ಡಿ, ಅಪಹರಣಗೈದು, ಗೃಹಬಂಧನದಲ್ಲಿರಿಸಿ ಬೆದರಿಕೆಯಿಂದ ನಾಮಪತ್ರ ಹಿಂತೆಗೆಯಲು ಪ್ರಚೋದಿಸಿದ್ದರೆಂದು ಸುಂದರ ಅವರ ಹೇಳಿಕೆಯನುಸಾರ ಸಮೀಪ ಪ್ರತಿಸ್ಪರ್ಧಿ ಎಡರಂಗದ ವಿ.ವಿ.ರಮೇಶನ್ ನ್ಯಾಯಾಲಯದ ಮೊರೆ ಹೊರೆ ಹೋಗಿದ್ದರು. ನಾಮ ಪತ್ರ ಹಿಂತೆಗೆಯಲು 2.50ಲಕ್ಷ ನಗದು, ಆಧುನಿಕ ಫೋನ್, ಮತ್ತಿತರ ಸೌಲಭ್ಯ ಒದಗಿಸುವುದಾಗಿ ಭರವಸೆ ಇತ್ತಿದ್ದರೆಂದು ಸುಂದರ ಹೇಳಿದ್ದರು. ಇದನ್ನೇ ದೂರನ್ನಾಗಿ ಉಲ್ಲೇಖಿಸಿ ಕೇಸು ದಾಖಲಿಸಲಾಗಿತ್ತು.
ಆದರೆ ಈ ಕುರಿತು ನಡೆದ ವಿಚಾರಣೆಯಲ್ಲಿ ಕೇಸು ದಾಖಲಿಸಿದ ಪೋಲೀಸರು ಸಾಕ್ಷ್ಯಾಧಾರ ಒದಗಿಸಲು ವಿಫಲರಾಗಿದ್ದರು. ಆರೋಪ ಹೊರಿಸಿದ್ದ ಅಭ್ಯರ್ಥಿ ಸುಂದರ ಬಳಿಕ ನ್ಯಾಯಾಲಯದಲ್ಲಿ ಹೇಳಿಕೆ ಬದಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಸರಗೋಡು ಸೆಷನ್ಸ್ ನ್ಯಾಯಾಲಯ ಸಾಕ್ಷಿ, ಆಧಾರಗಳ ಕೊರತೆಗಳ ಕಾರಣ ಕೆ.ಸುರೇಂದ್ರನ್ ಸಹಿತ 6ಮಂದಿ ಆಪಾದಿತ ಬಿಜೆಪಿ ನಾಯಕರನ್ನು ನಿರ್ದೋಷಿಗಳೆಂದು ಘೋಷಿಸಿ ತೀರ್ಪು ನೀಡಿತ್ತು. ತೀರ್ಪು ವಿಳಂಬವಾಗಲು ಪೋಲೀಸ್ ತನಿಖೆಯ ಸಾಕ್ಷ್ಯಾಧಾರಗಳ ಕೊರತೆ ಎಂಬ ಅಂಶವನ್ನೂ ನ್ಯಾಯಾಧೀಶರು ಉಲ್ಲೇಖಿಸಿದ್ದರು. ಇದು ಕೇರಳದಲ್ಲಿ ಬಲುದೊಡ್ಡ ರಾಜಕೀಯ ಚರ್ಚೆಯಾಗಿ ಮಾರ್ಪಟ್ಟಿತ್ತು. ಆಳುವ ಎಡರಂಗ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದಕ್ಕೆ ಇದೇ ಸಾಕ್ಷಿಯೆಂದು ವಿಪಕ್ಷಗಳು ರಾಜಕೀಯ ಪ್ರಚಾರ ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ತೀರ್ಪಿನ ಬೆನ್ನಲ್ಲೇ ಅಸಮಧಾನ ಪ್ರಕಟಿಸಿದ ದೂರುದಾತರಾದ ಸಿಪಿಐಎಂ ನಾಯಕ ವಿ.ವಿ.ರಮೇಶನ್ ಹೈಕೋರ್ಟಿನ ಮೊರೆ ಹೋಗುವುದಾಗಿ ಘೋಷಿಸಿದ್ದರು. ಅದರಂತೆ ಸುರೇಂದ್ರನ್ ಸಹಿತ 6ಮಂದಿ ವಿರುದ್ಧ ಹೈಕೋರ್ಟಿನಲ್ಲಿ ಕೇಸು ಮುಂದುವರಿಯಲಿದೆ. ಕಾಸರಗೋಡಿನ ಬಿಜೆಪಿ ನಾಯಕ, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಮಣಿಕಂಠ ರೈ, ಸುನಿಲ್ ನಾಯ್ಕ್, ಸುರೇಶ್ ಕುಮಾರ್ ಶೆಟ್ಟಿ ಸಹಿತ ಆರು ಮಂದಿಗಳ ವಿರುದ್ಧ ಕಾಸರಗೋಡು ಸೆಷನ್ಸ್ ನ್ಯಾಯಾಲಯ ದೋಷಮುಕ್ಚಗೊಳಿಸಿದ ತೀರ್ಪನ್ನು ಹೈಕೋರ್ಟು ತಡೆಹಿಡಿದಿರುವುದು ರಾಜಕೀಯ ವಲಯದಲ್ಲಿ ಚರ್ಚಿತ ವಿಷಯವಾಗಿದೆ.