ಪೊಳಲಿ: ಯಕ್ಷಕಲಾ ಪೊಳಲಿ ನೇತೃತ್ವದಲ್ಲಿ ವರ್ಷಂಪ್ರತಿ ನವರಾತ್ರಿ ಸಂದರ್ಭ ಪೊಳಲಿ ರಾಜರಾಜೇಶ್ವರಿ ದೇವಳದಲ್ಲಿ ಜರಗುವ ಪೊಳಲಿ ಯಕ್ಷೋತ್ಸವ 30ನೇ ವರ್ಷಕ್ಕೆ ಕಾಲೂರಿದೆ. ತ್ರಿಂಶತಿ ವರ್ಷಾಚರಣೆಯನ್ನು ಸಂಭ್ರಮಾಚರಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆಗಳು ಆರಂಭಗೊಂಡಿವೆ.
ಈ ಬಾರಿಯ ನವರಾತ್ರಿ ವೇಳೆ ಅ.5ರಂದು ನಡೆದ 29ನೇ ವರ್ಷದ ಪೊಳಲಿ ಯಕ್ಷೋತ್ಸವ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಷಿ ದಂಪತಿಯರಿಗೆ ಪೊಳಲಿ ಯಕ್ಷೋತ್ಸವದ ವಿದ್ವತ್ ಗೌರವ ಪ್ರಶಸ್ತಿ ನೀಡಲಾಯಿತು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಕಟೀಲು ದೇವಳದ ಪ್ರಧಾನ ಅರ್ಚಕ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣ ಆಶೀರ್ವಚನ ಇತ್ತರು. ಪೊಳಲಿ ದೇವಳದ ಅನುವಂಶಿಕ ಮೊಕ್ತೇಸರ ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅಧ್ಯಕ್ಷತೆ ವಹಿಸಿದರು.
ಪೊಳಲಿ ದೇವಳದ ಪ್ರ.ಅರ್ಚಕ ನಾರಾಯಣ ಭಟ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಪ್ರಭಾಕರ ಡಿ. ಸುವರ್ಣ ಅತಿಥಿಗಳಾಗಿ ಪಾಲ್ಗೊಂಡರು.
ಈ ಸಂದರ್ಭ ಯಕ್ಷಗಾನ ರಂಗದಲ್ಲಿ ಸೇವೆಗೈದ ಸಾಧಕ ಕಲಾವಿದರಾದ ಶಂಭು ಶರ್ಮ ವಿಟ್ಲ, ಕೆ.ಎಚ್.ದಾಸಪ್ಪ ರೈ, ಪಣಂಬೂರು ಶ್ರೀಧರ ಐತಾಳ್, ಹಳುವಳ್ಳಿ ಗಣೇಶ ಭಟ್, ಗುರುಪ್ರಸಾದ ಬೊಳಿಂಜಡ್ಕ, ಸುರೇಂದ್ರ ಮಲ್ಲಿ, ಸದಾಶಿವ ಕುಲಾಲ್ ವೇಣೂರು, ದಿನೇಶ ಶೆಟ್ಟಿ ಕಾವಳಕಟ್ಟೆ, ಮಾಧವ ಬಂಗೇರ ಕೊಳ್ತಮಜಲು, ಪನೆಯಾಲ ರವಿರಾಜ ಭಟ್, ರವಿಶಂಕರ ವಳಕುಂಜ ಇವರಿಗೆ ಯಕ್ಷಕಲಾ ಪೊಳಲಿಯ ಸನ್ಮಾನ ಗೌರವ ನೀಡಲಾಯಿತು.
ಕಟೀಲು ದುರ್ಗಾ ಮಕ್ಕಳ ಮೇಳ ಮತ್ತು ವಿನಾಯಕ ಯಕ್ಷಕಲಾ ಫೌಂಢೇಷನ್ ಕೆರೆಕಾಡು ಇವರಿಗೆ ಯಕ್ಷೋತ್ಸವ ಗೌರವ ನೀಡಲಾಯಿತು.
ಪೊಳಲಿ ಯಕ್ಷೋತ್ಸವ ಸಾರಥಿಗಳಾದ ವೆಂಕಟೇಶ ನಾವಡ ಸ್ವಾಗತಿಸಿ, ಜನಾರ್ಧನ ಅಮ್ಮುಂಜೆ ನಿರೂಪಿಸಿದರು.