ಕಣಿಪುರ ಸುದ್ದಿಜಾಲ (ಅ.15)
ಕಣ್ಣೂರು(ಕೇರಳ): ಹುಟ್ಟೂರಿಗೆ ವರ್ಗಾವಣೆ ಪಡೆದು ಹೋಗಬೇಕಿದ್ದ ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ ಜಿ ಪಂ. ಅಧ್ಯಕ್ಷೆಯ ಆರೋಪದಿಂದ ಮನನೊಂದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.
ಕಣ್ಣೂರು ಜಿಲ್ಲಾ ಎ.ಡಿಎಂ( aditional dist magistrate) ಪಟ್ಟಣಂತಿಟ್ಟ ಮೂಲದ ನವೀನ್ ಬಾಬು(56) ಎಂಬವರು ಇಂದು ಬೆಳಿಗ್ಗೆ ತಮ್ಮ ವಸತಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದರು.
ಕಣ್ಣೂರು ಜಿಲ್ಲೆಯಿಂದ ಹುಟ್ಟೂರಿಗೆ ವರ್ಗಾವಣೆ ಪಡೆದು ಮರಳುವ ನವೀನ್ ಬಾಬು ಅವರಿಗೆ ನಿನ್ನೆ ಸಂಜೆ ಕಣ್ಣೂರು ಜಿಲ್ಲಾಡಳಿತ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆದಿತ್ತು. ಇದರಲ್ಲಿ ಮಾತಾಡಿದ ಕಣ್ಣೂರು ಜಿ.ಪಂ. ಅಧ್ಯಕ್ಷೆ ಪಿ.ಪಿ.ವಿದ್ಯಾ ಅವರು ಅಭಿನಂದಿಸುವ ಬದಲಿಗೆ ಕರ್ತವ್ಯದಲ್ಲಿದ್ದಾಗ ಭ್ರಷ್ಟಾಚಾರ ನಡೆಸಿದ್ದಾರೆಂದೂ, ಶೀಘ್ರವೇ ಅದೊಂದೇ ಬೆಳಕಿಗೆ ಬರಲಿದೆಯೆಂದೂ ಆರೋಪಿಸಿದ್ದರು. ಇದರಿಂದಾಗಿ ಬೀಳ್ಕೊಡುಗೆ ಸಮಾರಂಭದಲ್ಲೇ ಎಡಿಎಂ ಖಿನ್ನರಾಗಿದ್ದರು.
ಕಣ್ಣೂರಿನಿಂದ ಹುಟ್ಟೂರು ಪಟ್ಟಣಂತಿಟ್ಟ ಜಿಲ್ಲೆಗೆ ಅವರು ತಾನಾಗಿ ಬಯಸಿ ವರ್ಗಾವಣೆ ಪಡೆದಿದ್ದರು. ನಾಳೆ ಪಟ್ಟಣಂತಿಟ್ಟ ಜಿಲ್ಲೆಯಲ್ಲವರು ಅಧಿಕಾರ ಸ್ವೀಕರಿಸಬೇಕಾಗಿತ್ತು. ಈ ಮಧ್ಯೆ ಅವರ ಆತ್ಮಹತ್ಯೆ ನಡೆದಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ನಿವೃತ್ತಿಯಾಗಲು ಇನ್ನು ಏಳು ತಿಂಗಳಷ್ಟೇ ಬಾಕಿ ಇದ್ದ ನವೀನ್ ಬಾಬು ಅವರು ತಾನು ರೈಲಿನಲ್ಲಿ ಪಟ್ಟಣಂತಿಟ್ಟ ಬರುವೆ ಎಂದು ನಿನ್ನೆ ಮನೆಯವರಿಗೆ ತಿಳಿಸಿದ್ದರು. ಹಾಗೆಂದು ಅವರನ್ನು ರೈಲು ನಿಲ್ದಾಣದಲ್ಲಿ ಕಾಯುವಾಗ ಆತ್ಮಹತ್ಯೆಯ ಸುದ್ದಿ ಬಂದಿದೆ.