ಕಣಿಪುರ ಸುದ್ದಿಜಾಲ (ಅ.15)
ಕುಂದಾಪುರ:
ಬಡಗುತಿಟ್ಟಿನ ಗಂಡು ದನಿಯ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯರು ತನ್ನ ಜನ್ಮದಿನದಂಗವಾಗಿ ಮೆಚ್ಚಿನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟರನ್ನು ಅವರ ನಿವಾಸಕ್ಕೆ ತೆರಳಿ ಗೌರವ ಸನ್ಮಾನ ಸಲ್ಲಿಸಿದರು.
ವರ್ಷಂಪ್ರತಿ ತನ್ನ ಜನ್ಮದಿನಾಚರಣೆಯ ವೇಳೆ ತಾನು ನಡೆದು ಬಂದ, ಬೆಳೆದು ಬಂದ ಹಾದಿಗೆ ಊರುಗೋಲಾದವರನ್ನು ಸ್ಮರಿಸಿ, ಅವರಿಗೆ ಸನ್ಮಾನ ಗೌರವ ನೀಡುವುದನ್ನು ರೂಢಿ ಮಾಡಿಕೊಂಡ ಭಾಗವತರು ಈ ಬಾರಿ ತಾನು ಹಾಡಿ ಮೆರೆದ ಪದ್ಯಗಳನ್ನು ಬರೆದ ಕವಿ ಕಂದಾವರ ರಘುರಾಮ ಶೆಟ್ಟರ ನಿವಾಸಕ್ಕೆ ತೆರಳಿ, ಅವರ ಕುಟುಂಬ ಸಮ್ಮುಖ ಗೌರವಾರ್ಪಣೆ ಮಾಡಿದರು.
ಸ್ವರ ಮಾಂತ್ರಿಕ ಕಾಳಿಂಗ ನಾವಡರು ಚೆಲುವೆ ಚಿತ್ರಾವತಿ ಪದ್ಯಗಳನ್ನು ಹಾಡಿ ಮೆರೆಯುವಾಗ ರಾಘವೇಂದ್ರ ಮಯ್ಯರು ಎಳೆಯ ಹುಡುಗ. ಆ ಪದ್ಯಗಳಿಂದ ಪ್ರಭಾವಿತರಾಗಿ ತಾನೂ ಭಾಗವತನಾಗಬೇಕೆಂದು
ಬಯಸಿದರು. ಕಾಕತಾಳೀಯ ಎಂದರೆ ಭವಿಷ್ಯದಲ್ಲಿ ಮಯ್ಯರೂ ಭಾಗವತರಾದರು. ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರು ಕುಳಿತು ಹಾಡುತ್ತಿದ್ದ ಅದೇ ರಂಗಸ್ಥಳದ ಪಡಿಮಂಚದಲ್ಲಿ ತಾನೂ ಹಾಡುವ ಸುಯೋಗ ಪಡೆದರು. ಯಾವ ಪದ್ಯಗಳಿಂದ ಎಳವೆಯಲ್ಲಿ ಭಾಗವತಿಕೆಗೆ ಮನಸೋತು, ಆಕೃಷ್ಠನಾಗಿದ್ದನೋ ಅದೇ ಪ್ರಸಂಗ ನೂರಾರು ಸಲ ಆಡಿಸಿ, ಹಾಡಿ ಮೈಮರೆದರು. ಆ ಪದ್ಯಗಳನ್ನು ಬರೆದ ಕವಿಯೇ ಕಂದಾವರ ರಘುರಾಮ ಶೆಟ್ಟರು. ಜೀವನ ಸಂಧ್ಯೆಯಲ್ಲಿರುವ ಕವಿಮನೆಗೆ ತೆರಳಿದ ಭಾಗವತರು ಅದೇ ಹಾಡುಗಳ ಮೆಲುಕುಗಳೊಂದಿಗೆ ಕವಿನಮನ ಸಲ್ಲಿಸಿದಾಗ ಅವರು ಆನಂದಭಾಷ್ಪದೊಂದಿಗೆ ಆಶೀರ್ವದಿಸಿದರು.
ರಾಘವೇಂದ್ರ ಮಯ್ಯರ ಜತೆ ಪ್ರಸಂಗಕರ್ತ ಬೇಲೂರು ವಿಷ್ಣುಮೂರ್ತಿ ನಾಯಕ್, ಮಯ್ಯರ ಪತ್ನಿ ಪಲ್ಲವಿ ರಾಘವೇಂದ್ರ ಮಯ್ಯ ಮೊದಲಾದವರಿದ್ದರು.
ಕಳೆದ ಹಲವು ವರ್ಷಗಳಿಂದ ಜನ್ಮದಿನಾಚರಣೆಯಂದು ತನ್ನ ಬದುಕಿನ ಮರೆಯಲಾಗದ ಮಂದಿಯನ್ನು ಹುಡುಕಿ ಮಾನಿಸುವ ಭಾಗವತ ರಾಘವೇಂದ್ರ ಮಯ್ಯರ ಈ ನಡೆ ಆದರ್ಶನೀಯ, ಪ್ರಶಂಸನೀಯ.