ತಿರುವನಂತಪುರ: ಶಬರಿಮಲೆ ಭಕ್ತರು ಮತ್ತು ವಿವಿಧ ಹಿಂದೂ ಸಂಘಟನೆಗಳ ಪ್ರತಿಭಟನೆ ಹಾಗೂ ರಾಜಕೀಯ ಒತ್ತಡಕ್ಕೆ ಮಣಿದು ಶಬರಿಮಲೆ ದರ್ಶನ ವಿಷಯದಲ್ಲಿ ಕೇರಳ ಸರಕಾರ ಕೈಗೊಂಡ ನಿರ್ಧಾರವನ್ನು ಪರಿಷ್ಕರಿಸಿದೆ.
ವರ್ಚ್ಯುಲ್ ಕ್ಯೂ ಹೊರತಾಗಿ ಶಬರಿಮಲೆಗೆ ಬರುವ ಭಕ್ತಾದಿಗಳೆಲ್ಲರಿಗೆ ಸ್ಪಾಟ್ ಬುಕ್ಕಿಂಗ್ ಮೂಲಕ ಈ ಹಿಂದಿನಂತೆಯೇ ದರ್ಶನ ಸೌಲಭ್ಯ ಒದಗಲಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿಂದು ತಿಳಿಸಿದರು.
ವಿಧಾನ ಸಭೆಯಲ್ಲಿಂದು ವಿಪಕ್ಷ ಸದಸ್ಯ ವಿ. ಜೋಯ್ ಅವರ ಪ್ರಶ್ನೆಗೆ ಉತ್ತರಿಸಿದ ಸಿ.ಎಂ. ಶಬರಿಮಲೆಯಲ್ಲಿ ವರ್ಚ್ಯುಲ್ ಕ್ಯೂ ಹೊರತಾಗಿಯೂ ಎಲ್ಲರಿಗೂ ದರ್ಶನ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಹೆಚ್ಚುವ ಭಕ್ತಜನ ದಟ್ಟಣೆ ನಿಯಂತ್ರಣಕ್ಕಾಗಿ ಈ ಬಾರಿ ಶಬರಿಮಲೆಯಲ್ಲಿ ವರ್ಚ್ಯುಲ್ ಕ್ಯೂ ಮೂಲಕ ಬುಕ್ಕಿಂಗ್ ಮಾಡಿದವರಿಗಷ್ಟೇ ದರ್ಶನ ಸೌಲಭ್ಯ ಎಂದು ದೇವಸ್ವಂ ಮಂಡಳಿ ನಡೆಸಿದ ಸಭೆಯಲ್ಲಿ ಸಿ.ಎಂ.ಸಮಕ್ಷಮ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿರ್ಣಯ ಭಾರೀ ವಿವಾದ, ಪ್ರತಿಭಟನೆಗೆ ಕಾರಣವಾಗಿ ಹಿಂದೂ ಸಂಘಟನೆಗಳು ಹೋರಾಟದ ಮುನ್ನೆಚ್ಚರಿಕೆ ನೀಡಿತ್ತು.
ಸರಕಾರದ ನಿರ್ಣಯ ಪರಿಷ್ಕರಿಸಬೇಕೆಂದೂ , ಇದು ಬಿಜೆಪಿಗೆ ಅನುಕೂಲ ವಾತಾವರಣ ಸೃಷ್ಟಿಸಿಕೊಡುವುದೆಂದೂ ವಿಪಕ್ಷ ಸಹಿತ ಘಟಕ ಪಕ್ಷ ಸಿಪಿಐ ಆರೋಪಿಸಿತ್ತು. ಎಲ್ಲಾ ಕಡೆಯಿಂದಲೂ ಸರಕಾರಿ ನಿರ್ಣಯಕ್ಕೆ ವಿರೋಧಗಳುಂಟಾದ ಒತ್ತಡದ ಹಿನ್ನೆಲೆಯಲ್ಲಿ ಇದೀಗ ನಿರ್ಧಾರ ಪರಿಷ್ಕರಿಸಿರುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
ಸರಕಾರದ ನಿರ್ಣಯದ ವಿರುದ್ದ ನಿನ್ನೆ ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಹಿಂದೂ ಸಂಘಟನೆಗಳ ಬೆಂಬಲದಲ್ಲಿ ಅಯ್ಯಪ್ಪ ಭಕ್ತರು ಸತ್ಯಾಗ್ರಹ ನಡೆಸಿದ್ದರು.