ಹಿಮ್ಮೇಳ ಗುರುವಿಗೆ ಸ್ಮೃತಿ ಕಾಣಿಕೆಯಿತ್ತು ನಮಿಸಿದ ಪಡ್ರೆ ಚಂದು ಯಕ್ಷಗಾನ ಕೇಂದ್ರ..

ತೆಂಕಬೈಲು ಸ್ಮರಣೆಗೆ ಪುಟ್ಟಸೌಧ: ಯಕ್ಷಗಾನದಲ್ಲೇ ವಿಶಿಷ್ಟ ಗುರುನಮನ..

by Narayan Chambaltimar

ಕಣಿಪುರ ವಿಶೇಷ ಅ.14)

ಕಲಾಗುರುವೊಬ್ಬನಿಗೆ ತಾನು ಕಲಾಶಿಕ್ಷಣವಿತ್ತ ಕೇಂದ್ರದಲ್ಲೇ ಸ್ಮೃತಿ ಮಂದಿರವೊಂದು ಮೈದಾಳುವುದೆಂದರೆ ನಿಜಕ್ಕೂ ಅದೃಷ್ಟ ಮತ್ತು ಅಪರೂಪದ ವಿದ್ಯಮಾನ..
ಹೌದು.., ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಕಾರ್ಯಾಚರಿಸುವ ಪಡ್ರೆ ಚಂದು ಸ್ಮಾರಕ ಯಕ್ಷಶಿಕ್ಷಣ ಕೇಂದ್ರದಲ್ಲೀಗ ಇಂಥದೊಂದು ಸ್ಮೃತಿ ಮಂದಿರ ಅಸ್ತಿತ್ವಕ್ಕೆ ಬಂದಿದೆ. ಅದುವೇ ಕೀರ್ತಿಶೇಷ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಹೆಸರಲ್ಲಿ ಅಸ್ತಿತ್ವಕ್ಕೆ ಬಂದ ಪುಟ್ಟ ಸ್ಮೃತಿಭವನ.
ಇದು ನೋಡಲೇನೋ ಚಿಕ್ಕದು, ಆದರೆ ಇಲ್ಲಿನ ಮಮತೆಯ ಸ್ಪರ್ಷದ ಅಗಾಧತೆ ದೊಡ್ಡದು..

ಭಾಗವತ ತೆಂಕಬೈಲು ಶಾಸ್ತ್ರಿಗಳು ಪ್ರಸಿದ್ಧ ಚಕ್ರಕೋಡಿ ಮನೆತನದ ಕುಡಿ. ಸಂಗೀತದ ಬಾಲಪಾಠದೊಂದಿಗೆ ತೆಂಕಿನ ಭಾಗವತಿಕೆ, ಹಿಮ್ಮೇಳ ಅರಿತವರು, ಅದರಲ್ಲಿ ನುರಿತವರು. ತೆಂಕಣ ಭಾಗವತಿಕೆಯಲ್ಲಿ ತನ್ನದೇ ಹಾದಿ ನಿರ್ಮಿಸಿದ ಅವರು ವ್ಯವಸಾಯಿ ಮೇಳ ತಿರುಗಾಟ ಮಾಡದೇ, ಮೇಳದ ಭಾಗವತರಷ್ಟೇ ಕೀರ್ತಿ ಪಡೆದವರು. ಒಂದು ಕಾಲದ ಬಯಲಾಟದ ರಂಗಸ್ಥಳದ ನಿರ್ದೇಶಕನಾಗಿ ಪ್ರಸಂಗವನ್ನು ಆಡಿಸುತ್ತಿದ್ದ ಪರಿ ಮತ್ತು ಹವ್ಯಾಸಿಗಳನ್ನು ರೂಪಿಸುತ್ತಿದ್ದ ಅವರ ತಜ್ಞತೆ ಅನನ್ಯ. ಮೇಳದ ಭಾಗವತರೊಂದಿಗೆ ಪದ್ಯಕ್ಕೆ ಕುಳಿತರೆ ಸರ್ಕಸ್ಸುಗಳ ಗಿಮಿಕ್ ಇಲ್ಲದೇ ಸ್ವಚ್ಛತೆಯ ಸುಭಗತೆಯಿಂದ ಎದ್ದೆದ್ದು ಕಾಣುತ್ತಾ ಮಿಂಚುತ್ತಿದ್ದ ಅವರು ಕೊನೆಗಾಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದಲ್ಲಿ ಹಿಮ್ಮೇಳ ಗುರುಗಳಾಗಿದ್ದರು. ಈಗ ರಂಗದಲ್ಲಿ ಉದಯೋನ್ಮುಖರಾಗಿ ಮಿಂಚತೊಡಗಿದ ಹಿಂಡು,ಹಿಂಡು ಯುವ ಪ್ರತಿಭೆಗಳನ್ನು ಕಲಾರಂಗಕ್ಕೆ ಧಾರೆ ಎರೆದದ್ದು ಅವರ ಅನುಭವಗಳ ಕೊಡುಗೆ..

1944ರಲ್ಲಿ ಜನಿಸಿದ್ದ ಅವರು ಕಳೆದ ಕೊರೋನ ಕಾಲದಲ್ಲಿ ಅಸ್ವಸ್ಥರಾಗಿ ಅಸುನೀಗಿದ್ದರು. ಬದುಕಿರುತ್ತಿದ್ದರೆ ಅವರಿಗೀಗ ಭರ್ತಿ 80ರ ಹರೆಯ. ಆದರೆ 80ರ ಈ ಹೊತ್ತು ಅವರಿಲ್ಲದ ವೇಳೆ ಅವರ ನೆಚ್ಚಿನ ಯಕ್ಷಗಾನ ಕೇಂದ್ರದಲ್ಲಿ ಅವರ ಸ್ಮೃತಿಭವನ ಮೈದಾಳಿದೆ. ಅಲ್ಲಿ ಅವರ ಶಿಷ್ಯರ ಗುರುನಮನದೊಂದಿಗೆ ಯಕ್ಷಶಿಕ್ಷಣಕ್ಕೂ ನಾಂದಿಯಾಗಿದೆ.
ಒಂದು ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರವಾದರೆ ಅದನ್ನೇ ತದ್ರೂಪು ಹೋಲುವ ಇನ್ನೊಂದು ತೆಂಕಬೈಲು ಸ್ಮೃತಿಭವನ. ಇದು ನಾಟ್ಯಾಚಾರ್ಯ ಸಬ್ಬಣಕೋಡಿ ರಾಮಭಟ್ಟರು ಸಮರ್ಪಯಾಮಿ ಎಂಬಂತೆ ಯಕ್ಷಗಾನಕ್ಕಿತ್ತ ಕೊಡುಗೆಯೂ ಹೌದು!

ಈ ಬಾರಿಯ ನವರಾತ್ರಿಯ ಮಹಾನವಮಿಯಂದು ಎಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದರು ನೂತನ ಕಟ್ಟಡ ಉದ್ಘಾಟಿಸಿದರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ.ಶಾಂಭಟ್ ಅಧ್ಯಕ್ಷತೆ ವಹಿಸಿದರು.

ಎಲ್ಲರಂತಲ್ಲ ನನ್ನಪ್ಪ…

ಈ ಹೊತ್ತು ಉಪಸ್ಥಿತರಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಪುತ್ರ, ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ ಮಾತನಾಡುತ್ತಾ “ಎಲ್ಲರಂತಲ್ಲ ನನ್ನಪ್ಪ. ಉಳಿದೆಲ್ಲ ಭಾಗವತರು ತನ್ನ ಮಕ್ಕಳು ಈ ರಂಗಕ್ಕೆ ಬರುವುದೇ ಬೇಡ ಎಂದು ಬಯಸಿದ್ದರೆ ನನ್ನಪ್ಪ ನನಗೂ ಹೇಳಿಕೊಟ್ಟು ನನ್ನನ್ನೂ ಭಾಗವತನಾಗಿ ಕಾಣಬೇಕೆಂದೇ ಬಯಸಿದ್ದರು. ನೂರಾರು ಶಿಷ್ಯರಿದ್ದರೂ ಕೊನೆಗಾಲದಲ್ಲಿ ಕಟ್ಟಕಡೆಯದಾಗಿ ಅವರು ನನ್ನ ಮಗನಿಗೂ (ಮೊಮ್ಮಗ) ಭಾಗವತಿಕೆಯ ಬಾಲಪಾಠ ಷಹೇಳಿಕೊಟ್ಟಿದ್ದರು. ಬಹುಶಃ ತೆಂಕಬೈಲು ಮನೆತನದ ಪರಂಪರೆಯಲ್ಲಿ ಭಾಗವತರು ವಂಶವಾಹಿನಿಯಾಗಿ ಹರಿಯಬೇಕೆಂಬ ಆಸೆ ಅವರಿಗಿತ್ತೇನೋ ಎಂದರು.

ಕಲಾಪೋಷಕ, ದಾನಿಗಳ ನೆರವಿನ ಸಹಾಯದಿಂದ ಈ ಸ್ಮೃತಿಭವನ ನಿರ್ಮಿಸಲಾಗಿದೆ. ತೆಂಕುತಿಟ್ಟು ಯಕ್ಷಗಾನಕ್ಕೊಂದು ಕೇಂದ್ರ ಇದಲ್ಲದೇ ಬೇರೆ ಇಲ್ಲ. ಬೇರೆಲ್ಲೂ ಕಲೆಯನ್ನು ಕಲಿಸಿ ಕೈದಾಟಿಸಿದ ಗುರುವಿಗೊಂದು ಪುಟ್ಟ ಸ್ಮೃತಿಭವನ ಅನಾವರಣಗೊಂಡದ್ದೂ ಇಲ್ಲ. ತೆಂಕಬೈಲು ಶಾಸ್ರಿಗಳು ಅಗಲಿದ ಹಿನ್ನೆಲೆಯಲ್ಲಿ ಪೆರ್ಲ ಕೇಂದ್ರಕ್ಕೆ ಅವರ ಪುತ್ರ ಮುರಳೀಕೃಷ್ಣ ಶಾಸ್ತ್ರಿ ಗುರುವಾಗಿ ಅಪ್ಪನ ಶಿಷ್ಯ ಪರಂಪರೆ ಮುಂದುವರಿಸುತ್ತಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00