ಬ್ರಹ್ಮಕಲಶದಲ್ಲಿ ಊರನ್ನಿಡೀ ತೊಡಗಿಸುವ “ಶಿವಾರ್ಪಣಂ” ಪುಳಕದಲ್ಲೊಂದು ಗ್ರಾಮ…

ಇದು ಏತಡ್ಕದ ವಿಶೇಷ...

by Narayan Chambaltimar

 

“ಶೀವಾರ್ಪಣಂ ಎನ್ನುವುದು ಒಂದು ವಿನೂತನ ಪರಿಕಲ್ಪನೆ.
ದೇವಸ್ಥಾನದ ಸುತ್ತ ಮುತ್ತಲಿನ ನೂರಾರು ಮನೆಗಳು ಬ್ರಹ್ಮ ಕಲಶೋತ್ಸವ ನೆವದಲ್ಲಿ ಒಟ್ಟುಗೂಡಿ ದೇವರ ಸೇವೆ ಮಾಡುವ ಪರಿಸರ ಸ್ನೇಹಿ ಯೋಜನೆ

ಭಕ್ತರಿಗೆ ಈ ಯೋಜನೆಯಲ್ಲಿ ವಿವಿಧ ಆಯ್ಕೆಗಳಿರುವುದು ವಿಶೇಷತೆ. ಏತಡ್ಕ ಶ್ರೀ ಸದಾಶಿವ ದೇವಳದ ಬ್ರಹ್ಮಕಲಶದಂಗವಾಗಿ ಆರಂಭಗೊಂಡಿರುವ ಯೋಜನೆಗೆ ಎಲ್ಲೆಡೆಯಿಂದ ಭಕ್ತರ ಉತ್ಸಾಹದ ಪ್ರತಿಸ್ಪಂದನಗಳು ಬರುತ್ತಿವೆ, ಜನರು ತಾವೇ ಕೈಜೋಡಿಸಿ ಕಾಯಕ ನಿರತರಾಗುತ್ತಿದ್ದಾರೆ” ಎಂಬುದಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಸಂಯೋಜಕರಲ್ಲೊಬ್ಬರಾದ ಡಾ.ವೈ.ವಿ.ಕೃಷ್ಣಮೂರ್ತಿ ನುಡಿದರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ 25 ಇದರ ಅಂಗವಾಗಿ ಶಿವಾರ್ಪಣಂ ಯೋಜನೆಯ ಕಾರ್ಯಾಗಾರವೊಂದು ಪಡ್ರೆ ಗ್ರಾಮದ ವಾಣೀನಗರದ ಸಮುದಾಯ ಭವನದಲ್ಲಿ ನಿನ್ನೆ ನಡೆಯಿತು.

ಬ್ರಹ್ಮ ಕಲಶೋತ್ಸವ ಸಮಿತಿ ಯ ಪದಾಧಿಕಾರಿಗಳಾದ ಡಾ. ವೈ.ವಿ . ಕೃಷ್ಣ ಮೂರ್ತಿ, ಡಾ.ಪ್ರಕಾಶ ವೈ.ಎಚ್, ಡಾ.ಅನ್ನಪೂರ್ಣೇಶ್ವರಿ , ಗೌರಿ ಕೆ.ಎಸ್. ಹಾಗೂ ಸುಧಾ ಮುರಳಿ ಮಾಣಿತ್ತೋಡಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಶಿವಾರ್ಪಣಂ ಯೋಜನೆಯ ಪಂಚಾಕ್ಷರಿ ಜಪಲಿಪಿ ಯಜ್ಞ, ಬಟ್ಟೆ ತುಣುಕಿನಿಂದ ಆಲಂಕಾರಿಕ ಮಾಲೆ ಮಾಡುವುದು , ಮಡಲು ಮೊಡೆದು ಚಪ್ಪರದ ತಟ್ಟಿ ಮಾಡುವುದರ ಬಗ್ಗೆ, ದೇಶೀ ದನದ ಸೆಗಣಿಯ ಬೆರಣಿಯಿಂದ ಶುದ್ಧ ಭಸ್ಮ ತಯಾರಿ, ಉತ್ಸವ ಸಂದರ್ಭ ಬಳಕೆಗಾಗಿ ತರಕಾರಿ ಬೆಳೆಯುವುದು, ಬಟ್ಟೆಯ ಚೀಲ ತಯಾರಿ,ಶ್ರಮದಾನ ಗಳ ಮಹತ್ವದ ಕುರಿತು ವಿವರ ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಣೀನಗರದ ಚೈತನ್ಯ ಕುಟುಂಬ ಶ್ರೀ ಕುತ್ತಾಜೆ, ಜನನೀ ಕುಟುಂಬ ಶ್ರೀ , ಶ್ರೀ ಲಕ್ಷ್ಮೀ ಕುಟುಂಬ ಶ್ರೀ ಯ ಮಾತೆಯರು ಉತ್ಸಾಹದಿಂದ ಪಾಲ್ಗೊಂಡರು ಮತ್ತು ಸಮಿತಿಯವರು ಒದಗಿಸಿದ ತರಕಾರಿ ಗಿಡ ಹಾಗೂ ಸಲಕರಣೆಗಳನ್ನು ಸ್ವೀಕರಿಸಿದರು..

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00