ಪೆರ್ಲ : ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಮರಾಟಿ ಬೋರ್ಡಿಂಗ್ ಹಾಲ್ ನ 6 ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ರವಿವಾರ ಜರಗಿತು.
ಬೆಳಗ್ಗೆ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ್ ಧ್ವಜಾರೋಹಣಗೈದರು. ಬಳಿಕ ವೇ.ಮೂ. ಬಾಲಕೃಷ್ಣ ಕಾರಂತ ಅಳಿಕೆ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡರು.
ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಕೆನರಾ ಬ್ಯಾಂಕ್ ಎಜಿಎಂ ರವಿ ಪ್ರಸಾದ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡುತ್ತಾ ” ಬುಡಕಟ್ಟು ಮೂಲವಾದ ಮರಾಟಿ ಜನಾಂಗವು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸದಿದ್ದು ಹತ್ತು ಶೇಕಡಾ ಮಾತ್ರ ವಿಕಸನ ಸಾಧ್ಯವಾಗಿರುವುದು ನಮ್ಮ ಹಿರಿಯರ ಹೋರಾಟದ ಫಲವಾಗಿದೆ. ಶತಮಾನದಂಚಿನ ಹೋರಾಟಗಳಿಗೆ ಸಾಕ್ಷಿಯಾಗಿರುವ ಈ ಮರಾಟಿ ಬೋರ್ಡಿಂಗ್ ಹಾಲ್ ನ್ನು ನವೀಕರಿಸಿ ಸಮಾಜಕ್ಕೆ ಸ್ಪೂರ್ತಿಯಾಗಿರಿಸಿರುವುದು ಸಮಾಜದ ಮುಂದಾಳುಗಳ ಪ್ರೇರೆಪಣೆಯಿಂದಾಗಿದೆ.ಮುಂದೆಯೂ ಇನ್ನಷ್ಟು ಸವಲತ್ತುಗಳನ್ನು ಸರಕಾರದಿಂದ ಪಡೆದುಕೊ ಳ್ಳುವಲ್ಲಿ ಸಮಾಜದ ಜನರ ಸಾಂಘಿಕ ಹೋರಾಟ ಅತೀ ಅಗತ್ಯವಾಗಿದೆ ” ಎಂದರು.
ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಹಿರಿಯ ಸಲಹೆಗಾರ ವೈದಾಧಿಕಾರಿ ಡಾ. ವಿಜಯ ಕುಮಾರ್, ಪುತ್ತೂರು ನಗರ ಠಾಣೆ ಪೋಲಿಸ್ ಉಪ ನಿರೀಕ್ಷಕ ಸೇಸಮ್ಮ ಕೆ.ಎಸ್.ಮುಖ್ಯ ಅತಿಥಿಗಳಾಗಿದ್ದರು.ಅಡ್ಯನಡ್ಕದ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ನೆಗಳಗುಳಿ, ಧಾರವಾಡ ಅಂಚೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಸುಕುಮಾರ ನಾಯ್ಕ್ ಬಾರಿಕ್ಕಾಡ್, ಎಣ್ಮಕಜೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಪುಷ್ಪ ಅಮೆಕ್ಕಳ, ಶ್ರೀಶಾರದ ಸಮಾಜ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಡಾ.ಬಿ.ಶಿವ ನಾಯ್ಕ್, ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ವೈದ್ಯಾಧಿಕಾರಿ ಡಾ.ಸಿ.ಎಚ್.ಜನಾರ್ಧನ ನಾಯ್ಕ್, ಶ್ರೀ ಶಾರದಾ ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಾರಿಜ ಅಡ್ಯನಡ್ಕ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಮೇನೆಜಿಂಗ್ ಟ್ರಸ್ಟಿ ಡಾ.ಬಿ.ನಾರಾಯಣ ನಾಯ್ಕ್ , ಮಹಿಳಾ ವೇದಿಕೆ ಕಾರ್ಯದರ್ಶಿ ರತ್ನಾವತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ಎಸ್ಸಸ್ಸೆಲ್ಸಿ ಪ್ಲಸ್ ಟು,ಪದವಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರೇವತಿ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಟ್ರಸ್ಟಿನ ಕೋಶಾಧಿಕಾರಿ ಡಾ.ಕೃಷ್ಣ ನಾಯ್ಕ್ ಸ್ವಾಗತಿಸಿ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಲಕ್ಷ್ಮಿ ಟೀಚರ್ ನಲ್ಕ ವಂದಿಸಿದರು. ಸತೀಶ್ ಕುಮಾರ್ ಕಯ್ಯಾರು,ಮಂಜುಶ್ರೀ ನಲ್ಕ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.