Kanipura news network
ಕುಂಬಳೆ ಪೇಟೆ ಪರಿಸರದಲ್ಲಿ ಪಿಕಪ್ ವ್ಯಾನ್ ನಲ್ಲಿ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಕ್ರಿಮಿನಲ್ ಗ್ಯಾಂಗ್ ಗೆ ಸೇರಿದ ಮೂವರನ್ನು ವಾಹನ ಸಹಿತ ಬಂಧಿಸಲಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪ ಅವರ ನಿರ್ದೇಶನದಂತೆ ಮಾದಕವಸ್ತು ದಂಧೆ ವಿರುದ್ಧ ನಡೆಯುವ ಕಾರ್ಯಾಚರಣೆಯಂಗವಾಗಿ ಕುಂಬಳೆ ಪೋಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕುಂಬಳೆ ಠಾಣಾ ಪೋಲೀಸರು ಗಸ್ತು ತಿರುಗಾಟ ನಡೆಸುವಾಗ ನಿನ್ನೆ ಸಂಜೆ ಮಾಟಂಗುಯಿ ಎಂಬಲ್ಲಿ ಶಂಕಿತ ಪಿಕಪ್ ವ್ಯಾನ್ ಕಂಡುಬಂದಿದ್ದು, ಇದರಲ್ಲಿದ್ದವರನ್ನು ವಿಚಾರಿಸಿದಾಗ ಎಂಡಿಎಂಎ ಮಾರಾಟ ಸುಳಿವು ದೊರೆಯಿತು. ಇದರಂತೆ ಮಾಟಂಗುಯಿಯಲ್ಲಿ ವಾಸಿಸುವ ತಮಿಳ್ನಾಡು ಮೂಲದ ಮೋಹನನ್(35), ಶಾಂತಿಪಳ್ಳ ವಾಸಿಸುವ ತಮಿಳುನಾಡು ದಿಂಡಿಗಲ್ ಮೂಲದ ಸೆಲ್ವನ್ ಯಾನೆ ಸೆಲ್ವರಾಜ್ (24), ಕುಂಬಳೆ ಕೊಯ್ಪಾಡಿ ಕಡಲತೀರದ ಸಾದಿಖ್(33) ಎಂಬಿವರನ್ನು 2.2ಗ್ರಾಂ ತೂಕದ ಎಂಡಿಎಂಎ ಸಹಿತ ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಓರ್ವನ ವಿರುದ್ಧ ಪೋಕ್ಸೋ ಕೇಸು, ಇನ್ನೋರ್ವನ ಮೇಲೆ ಕಾಪ ಕಾಯ್ದೆಯ ಕೇಸಿರುವುದಾಗಿ ಪೋಲೀಸರು ತಿಳಿಸಿದ್ದಾರೆ.