ಅತಿ ವಿಶಿಷ್ಟ, ಸಾಹಸಮಯ ಕೌಡಿಂಕಾನ ಯಾತ್ರೆ ಗೆ ಸಿದ್ಧತೆ: ಅಡೂರು ದೇಗುಲದಲ್ಲಿ ಮಹಾಸಭೆ

by Narayan Chambaltimar

 

ಕಣಿಪುರ ಸುದ್ದಿಜಾಲ( ಅ.13)

ಆಡೂರು: ಕುಂಬ್ಳೆ ಸೀಮೆಯ ಪ್ರಥಮ ವಂದನೀಯ ಕ್ಷೇತ್ರ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಮೂಲಸ್ಥಾನವಾದ ಕೌಡಿಂಕಾನ ವನಕ್ಕೆ ವಾಡಿಕೆಯಂತೆ ಅತ್ಯಪೂರ್ವವಾಗಿ ನಡೆಯುವ ಯಾತ್ರೆಯು 2025 ಜನವರಿ 14ರ ಮಕರ ಸಂಕ್ರಮಣದಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡೂರು ದೇಗುಲದ ಎರಡನೇ ಹಂತದ ಜೀರ್ಣೋದ್ಧಾರ ಪ್ರಗತಿಯಲ್ಲಿದ್ದು, ಜನವರಿ 6ರಿಂದ ಪುನರ್ ಪ್ರತಿಷ್ಠಾ ಕಾರ್ಯಗಳು ನಡೆದು, ಬಳಿಕ ಕೌಡಿಂಕಾನ ಯಾತ್ರೆ ನಡೆಯಲಿದೆ.

ತನ್ನಿಮ್ಮಿತ್ತ ಇಂದು ಅಡೂರು ದೇಗುಲದಲ್ಲಿ ಯಾತ್ರೆಯ ಪೂರ್ವಸಿದ್ಧತಾ ಸಭೆ ನಡೆಯಿತು. ಅಡೂರು ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಅಧ್ಯಕ್ಷತೆ ವಹಿಸಿದರು. ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ಇತ್ತು ಶುಭ ಹಾರೈಸಿದರು. ವೇ.ಮೂ.ಕುಂಟಾರು ವಾಸುದೇವ ತಂತ್ರಿ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಕೃಷ್ಣಪ್ರಸಾದ್ ರೈ, ಮಂಜುನಾಥ ಆಳ್ವ ಮಡ್ವ, ಉದ್ಯಮಿ ಸುರೇಶ್ ಕಾಸರಗೋಡು, ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್.ಟಿ ಮೊದಲಾದವರಿದ್ದರು.
ಮಹಾಸಭೆಯ ಪ್ರಯುಕ್ತ ಬಲಿವಾಡು ಕೂಟ ಜರುಗಿತು.

ಕೌಂಡಿಕಾನ ಎಂಬ ನಿಬಿಡಾರಣ್ಯದ ಕುರಿತು ಮಾಹಿತಿ ಈ ಕೆಳಗಿದೆ..

ಕವಡಿಂಕಾನ ಎಂದು ಪೂರ್ವ ನಾಮ ಹೊಂದಿದ್ದ ಕೌಂಡಿಕಾನ ವನವು ನಿಬಿಡಾರಣ್ಯ ಪ್ರದೇಶವಾಗಿದೆ. ಹನ್ನೆರಡು ವರ್ಷಗಳಿಗೊಮ್ಮೆ ಮೇರ ಜನಾಂಗಕ್ಕೆ ಸೇರಿದ ಬುಡಕಟ್ಟು ಮೂಲದ ಜನರು ಹಲವು ದಿನಗಳ ದೀಕ್ಷಾ ವಿಧಿಯ ನಂತರ ಅಭೇಧ್ಯ ವನದ ಗರ್ಭಕ್ಕೆ ಅರಣ್ಯ ದಾರಿ ಸೃಷ್ಟಿಸುತ್ತಾ ಸಾಗುತ್ತಿದ್ದರು. ಅವರು ಮರಳಿ ಬಂದ ಬಳಿಕ ನಿಯಮಿತ ದೀಕ್ಷಾವಿಧಿ ಪೂರೈಸಿದ ಕುಂಟಾರು ತಂತ್ರಿ ಕುಟುಂಬದ ಈರ್ವರು ದೇವಸ್ಥಾನದಲ್ಲಿ ಅರ್ಚಿಸಿಟ್ಟ ಕಲಶ ಸಹಿತ ಪೂಜಾ ಕೈಂಕರ್ಯಗಳೊಂದಿಗೆ ಕೈ ದೀಪ ಹಿಡಿದು, ಆಳು,ಪರಿವಾರ ಸಹಿತ ಕೌಂಡಿಕಾನ ವನಕ್ಕೆ ಪ್ರವೇಶಿಸುತ್ತಿದ್ದರು. ಕೌಡಿಂಕಾನ ಮೂಲಸ್ಥಾನದಲ್ಲಿ ಪೂಜೆಗಳನ್ನು ಸಲ್ಲಿಸಿದ ಬಳಿಕ ಈ ಪಂಗಡ ಮರಳಲಿದೆ. ದಟ್ಟ ಕಾನನದ ಮೂಲಸ್ಥಾನದಲ್ಲಿ ಕಂಡದ್ದನ್ನಾಗಲೀ, ಕೇಳಿದ್ದನ್ನಾಗಲೀ,ಮಾಡಿದ್ದನ್ನಾಗಲೀ ಇತರರಿಗೆ ತಿಳಿಸಕೂಡದೆಂಬ ದೇವಿ ಆಜ್ಞೆ ಇರುವುದರಿಂದ ಪ್ರಾಚೀನ ಕಾಲದಿಂದಲೇ ಕೌಂಡಿಕಾನದೊಳಗೇನಾಯಿತು ಎಂದು ತಿಳಿಯುವ, ಶೋಧಿಸುವ ದುಸ್ಸಾಹಸಕ್ಕೆ ಯಾರೂ ಮುಂದಾಗುವ ವಾಡಿಕೆ ಇಲ್ಲ. ಇದು ಅತ್ಯುತ್ತರ ಕೇರಳದಲ್ಲೇ ಅತಿ ಕಾರಣಿಕದ ರಕ್ತೇಶ್ವರಿ ಸಾನ್ನಿಧ್ಯ ಹೊಂದಿರುವ ಕಾನನ ಗರ್ಭ.
ಇಲ್ಲಿಗೆ ಪ್ರಾಚೀನ ವಾಡಿಕೆಯಂತೆ ಅಡೂರು ದೇಗುಲದಿಂದ ನಡೆಯುವ ಯಾತ್ರೆಯ ಸಿದ್ಧತೆ ಮತ್ತು ಕಾರ್ಯಕ್ರಮಗಳ ಸಮಾಲೋಚನೆ ಭಕ್ತ ಜನರ ಅಭಿಪ್ರಾಯಗಳೊಂದಿಗೆ ನಡೆಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00