ಕಣಿಪುರ ಸುದ್ದಿಜಾಲ( .12)
ನಮ್ಮ ಯಕ್ಷಗಾನ ನೋಡಿ ವಿದೇಶಿಯನೊಬ್ಬ excelent ಅನ್ನೋದರಲ್ಲಿ ವಿಶೇಷವೇನಿಲ್ಲ. ಆ ಮಾತಿಗೆ ಬೆಲೆ ಕಟ್ಟಬೇಡಿ. ನಮ್ಮ ಊರಿನವರು ನಮ್ಮ ಯಕ್ಷಗಾನ ನೋಡಿ excellent ಎನ್ನಬೇಕು. ಏಕೆಂದರೆ ನಮ್ಮೂರಿನವರಿಗೆ ಯಕ್ಷಗಾನ ಎಂದರೆ ಏನು? ಹೇಗೆ? ಗೊತ್ತಿದೆ. ಆದರೆ ವಿದೇಶಿಯರಿಗೆ, ವಿದೇಶದಲ್ಲಿರುವವರಿಗೆ ಯಕ್ಷಗಾನದ ಬಗ್ಗೆ ಎಷ್ಟು ಗೊತ್ತಿದೆ? ಅವರು ಯಾವುದಕ್ಕೂ excellent
ಹೇಳಬಲ್ಲರು…!
ಇದು ಹಿಂದೊಮ್ಮೆ ದಿ. ಶೇಣಿ ಹೇಳಿದ ಮಾತು, ಇಂದಿಗೂ ಅನ್ವರ್ಥ ಮಾತೆಂದು ಮನದ ಮಾತು ಹಂಚಿಕೊಂಡವರು ಸುಳ್ಯ ಸ್ನೇಹ ಶಾಲೆಯ ಸಂಸ್ಥಾಪಕ, ಕಲಾ,ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆ. ನಿನ್ನೆ (ಅ.11) ಅವರು ತೆಂಕಣದ ಏಕೈಕ ಯಕ್ಷಗಾನ ಕೇಂದ್ರವಾದ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಶಿಕ್ಷಣ ಕೇಂದ್ರಕ್ಕೆ ಬಂದಿದ್ದರು. ಅಲ್ಲಿ ಭಾಗವತ ದಿ.ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಸ್ಮೃತಿ ಭವನದ ಉದ್ಘಾಟನೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅವರಾಡಿದ ಕಲಾ ಕಾಳಜಿಯ ಮನದ ಮಾತುಗಳು ಮಹತ್ವದ್ದಾಗಿತ್ತು…
ನಮ್ಮೂರಲ್ಲಿ ನಾವು ಹೇಗೆ ಮಾಡಿದರೂ ನಮ್ಮ ಯಕ್ಷಗಾನ ನಮಗೆ ಚಂದ ಕಾಣ್ತದೆ. ಹೇಗೇ ಕುಣಿಯಲಿ, ಏನೇ ಕಸರತ್ತು ಮಾಡಲಿ ನಮಗೆ ಅದೆಲ್ಲ ಚಂದವೇ..!
ಆದರೆ ಕಲೆಯಲ್ಲಿ ಹೇಗೆ..ಏನೇನೋ ಮಾಡಿದರದು ಚಂದ ಅಲ್ಲ. ರಂಗಪ್ರಜ್ಞೆಯಿಂದ ಶಿಸ್ತುಬದ್ಧವಾಗಿ, ತಾಳನಾಟ್ಯ ಶುದ್ಧವಾಗಿ, ಪಾರಂಪರಿಕ ಕಲಾ ಲಕ್ಷಣಗಳನ್ನು ಪಾಲಿಸುತ್ತಲೇ ಸಾಂಘಿಕ ಪ್ರದರ್ಶನ ನೀಡುವುದಷ್ಟೇ ಚಂದ. ಪ್ರದರ್ಶನದಲ್ಲಿ ಈ ಎಚ್ಚರ ಬೇಕು. ಇಂಥಾ ಕಾಳಜಿಯ ಅಪರೂಪದ ಸಂಸ್ಥೆಯೇ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಎಂದರು ಚಂದ್ರಶೇಖರ ದಾಮ್ಲೆ.
ಬೇಕು ಯಕ್ಷಗಾನಕ್ಕೂ ಬುನಾದಿ ಶಿಕ್ಷಣ..
ಯಕ್ಷಗಾನ ಶಿಕ್ಷಣದಲ್ಲಿ ಹಿಮ್ಮೇಳ,ಮುಮ್ಮೇಳ ಶಿಕ್ಷಣದಂತೆಯೇ ಅರ್ಥಗಾರಿಕೆಯ ವಾಞ್ಮಯ ಶಿಕ್ಷಣವೂ ಅಗತ್ಯ. ಅದಿಲ್ಲದ ಕೊರತೆ ಕಲೆಯನ್ನು ಕಾಡುತ್ತಿದೆ. ಯಕ್ಷಗಾನ ಶಿಕ್ಷಣ ಎಂದರೆ ಕೇವಲ ನಾಟ್ಯ ಮತ್ತು ಹಿಮ್ಮೇಳ ಶಿಕ್ಷಣವಲ್ಲ. ಅದರ ಜತೆಯಲ್ಲೇ ಪ್ರಸಂಗ ಪಠ್ಯ ಮತ್ತು ಅರ್ಥಗಾರಿಕೆಯ ಶಿಕ್ಷಣವೂ ಹೌದು. ಹಿಂದೆ ಶೇಣಿ,ಸಾಮಗ,ಪೆರ್ಲ ರಂಥವರಿದ್ದಾಗ ಅವರ ಬಾಯಿಂದ ಎಂಥೆಂಥಾ ವೈಚಾರಿಕ ಮಾತುಗಳು ಬೀಳುತ್ತವೆ ಎಂಬುದನ್ನು ಕಾತರದಿಂದ ಕೇಳಲು ಪ್ರೇಕ್ಷಕರು ಬರುತ್ತಿದ್ದರು. ಅಂಥ ವಾಞ್ಮಯ ಪರಂಪರೆಯನ್ನು ಎಳೆಯರಲ್ಲಿ ಬೆಳೆಸಬೇಕು, ಅಂಥಾ ಯಕ್ಷ ಶಿಕ್ಷಣ ನೀಡಬೇಕು. ಈ ದೃಷ್ಟಿಯಲ್ಲಿ ಯಕ್ಷಗಾನಕ್ಕೂ ಬುನಾದಿ ಶಿಕ್ಷಣ(foundation education) ಬೇಕು ಎಂದು ದಾಮ್ಲೆ ಹೇಳಿದರು.
ಈಗ ಉನ್ನತ ಶಿಕ್ಷಣ ಪಡೆದವರನೇಕರಿದ್ದಾರೆ. ಆದರೆ ಅವರಿಗೆಲ್ಲ ಭಾಷಾ,ವ್ಯಾಕರಣ ಸಹಿತ ಮೂಲಭೂತ ಜ್ಞಾನ, ಸಂವಹನಾ ಕೌಶಲ್ಯದ ಕೊರತೆ ಇದೆ. ಏಕೆಂದರೆ ಅವರಿಗೆ ಸಮರ್ಪಕವಾದ ಬುನಾದಿ ಶಿಕ್ಷಣ ಸಿಗಲಿಲ್ಲ. ಇದೇ ಕೊರತೆ ಮುಂದೆ ಯಕ್ಷಗಾನವನ್ನೂ ಕಾಡಲಿದೆ. ಹಿಂದೆ ಕಲಾವಿದರು ಮೇಳ ಸೇರಿ ಗುರುಪರಂಪರೆಯಿಂದ ರೂಪುಗೊಂಡರೆ ಈಗ ನಾಟ್ಯ ಕಲಿಕೆಯಿಂದ ರೂಪುಗೊಳ್ಳುತ್ತಾರೆ. ಆದರೆ ಸಮಗ್ರ ಶಿಕ್ಷಣದಿಂದ ರೂಪುಗೊಂಡರೆ ಮಾತ್ರವೇ ಸಮರ್ಥ ಕಲಾವಿದ ಎಂದೆನಿಸಿಕೊಳ್ಳಬಲ್ಲ. ಈ ರೀತಿಯ ಸರ್ವಾಂಗೀಣ ಶಿಕ್ಷಣ ವ್ಯವಸ್ಥೆ ರೂಪಿಸಬೇಕಿದ್ದರೆ ನಾಡಿನ, ಸಮಾಜದ ಬೆಂಬಲ ಶಿಕ್ಷಣ ಕೇಂದ್ರಕ್ಕೆ ಬೇಕು ಎಂದವರು ಅಭಿಪ್ರಾಯಪಟ್ಟರು.
ಪೆರ್ಲದಲ್ಲಿ ಸಬ್ಬಣಕೋಡಿ ರಾಮಭಟ್ಟರ ಸಾರಥ್ಯದಲ್ಲೀಗ ಯಕ್ಷಗಾನ ಕೇಂದ್ರ, ತೆಂಕಬೈಲು ಸ್ಮೃತಿಭವನ ಅಸ್ತಿತ್ವಕ್ಕೆ ಬಂದಿದೆ ಎಂದರೆ ಇದು ಏಕಾಏಕಿ ಉದ್ಭವಿಸಿದ್ದೇನಲ್ಲ. ಇದರ ಹಿಂದೆ ದಶಕಗಳ ಓಡಾಟದ ಪರಿಶ್ರಮವಿದೆ. ಇಲ್ಲಿ ಕಲೆಯ ಬುನಾದಿ ಶಿಕ್ಷಣವೇ ಸಿಗಬೇಕಾದರೆ ರಚನಾತ್ಮಕ ಚಟುವಟಿಕೆಗಳು ಅಗತ್ಯ. ಅಂಥವು ನಡೆಯಬೇಕಾದರೆ ಅವರ ಓಡಾಟಗಳು ನಿಲ್ಲಬೇಕು. ಅದಕ್ಕೆ ಕಲಾಪೋಷಕರ ಬೆಂಬಲಗಳು ಬೇಕು. ನಾನೂ ಕೂಡಾ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯಡಿ 25ವರ್ಷ ಯಕ್ಷಗಾನ ಕೈಂಕರ್ಯ ಮಾಡಿದ್ದೇನೆ. ಕೊನೆಗೆ ಪೋಷಕರ, ಹೆತ್ತವರ ಪ್ರೋತ್ಸಾಹ ಕೊರತೆಯಿಂದ ಕೈಬಿಟ್ಟೆ. ರಚನಾತ್ಮಕ ಚಟುವಟಿಕೆ ನಡೆಯಬೇಕಿದ್ದರೆ ಸಾಮಾಜಿಕ ಬೆಂಬಲಗಳು ಅಗತ್ಯ ಎಂದು ದಾಮ್ಲೆ ನುಡಿದರು.