ಕಣಿಪುರ ಸುದ್ದಿಜಾಲ(ಅ.11)
ಕಾಸರಗೋಡು: ನಕಲಿ ನೋಟು ನೀಡಿ ಅಸಲಿ ನೋಟು ಪಡೆದು ರಿಸರ್ವ್ ಬೇಂಕಿಗೆ ಟೋಪಿ ಹಾಕುವ ಯತ್ನ ವಿಫಲಗೊಂಡಿದ್ದು, ಕಾಸರಗೋಡಿನ ಕಳ್ಳನೋಟು ಜಾಲ ಮತ್ತೊಮ್ಮೆ ಬಂಧನಕ್ಕೊಳಗಾಗಿದೆ. ಬಂಧಿತರಿಂದ 50ಲಕ್ಷ ಮುಖಬೆಲೆಯ ನಕಲಿನೋಟು ಪತ್ತೆ ಹಚ್ಚಿ ವಶಪಡಿಸಲಾಗಿದೆ.
ಚೆರ್ಕಳದಲ್ಲಿ ಕಾರ್ಯಾಚರಿಸುವ ಶ್ರೀಲಿಪಿ ಪ್ರೆಸ್ ಮಾಲಕ ಕರಿಚ್ಚೇರಿ ತೇರಳತ್ತ್ ಪ್ರಸೀದ್ ಯಾನೆ ಪ್ರಿಯೇಶ್(34), ಕಾಸರಗೋಡು ನಿವಾಸಿ ಮುಹಮ್ಮದ್ ಅಪ್ನಾಸ್ (34) ಕೇರಳ ಪುದುಶ್ಶೇರಿಯ ನೂರುದ್ದೀನ್ ಯಾನೆ ಅನ್ವರ್(30) , ಬೆಂಗಳೂರು ಸಿರಗುಪ್ಪದ ಅಪ್ಸಲ್ ಹುಸೇನ್(30) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.
ಬೆಂಗಳೂರು ಆರ್.ಬಿ.ಐ ಮೂಲಕ ಈ ವಂಚನಾ ಜಾಲ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಸಿರಗುಪ್ಪ ಪೋಲೀಸರ ನೇತೃತ್ವದಲ್ಲಿ ಮುದ್ರಣಾಲಯ ಮುಟ್ಟುಗೋಲು ಹಾಕಿ, ಮುದ್ರಿಸಿಕೊಂಡ ನಕಲಿ ನೋಟು ಸಹಿತ ಕಾಸರಗೋಡಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ.
(ಇನ್ನಷ್ಟು ವಿವರ ಈ ಕೆಳಗಿದೆ….)
ಬೆಳಕಿಗೆ ಬಂದದ್ದು ಹೀಗೆ..
ಬೆಂಗಳೂರು ಸಿರಗುಪ್ಪ ಕಡೆಯಲ್ಲಿ ಉದ್ಯಮಿಯಾಗಿರುವ ಎ.ಕೆ. ಅಪ್ಸಲ್ ಹುಸೇನ್ ಎಂಬಾತನಿಂದ 40ಲಕ್ಷದ ಗ್ರಾನೇಟ್ ವ್ಯವಹಾರ ಮಾಡಿಕೊಂಡಿದ್ದ ಕಾಸರಗೋಡಿನ ಪ್ರಸೀದ್ ಎಂಬಾತ ಹಣ ನೀಡಿರಲಿಲ್ಲ. ಆತ ಹಣಕ್ಕೆ ಒತ್ತಾಯಿಸಿದಾಗ “ತನ್ನ ಬಳಿ 2ಸಾವಿರ ಮುಖಬೆಲೆಯ ನೋಟುಗಳಿದ್ದು , 25ಲಕ್ಷ ನೀಡುತ್ತೇನೆಂದೂ, ಇದನ್ನು ರಿಸರ್ವ್ ಬೇಂಕಿಗಿತ್ತರೆ 500ರೂ ಮುಖಬೆಲೆಯ ಕರೆನ್ನಿ ನೀಡುವುದಾಗಿಯೂ ಹೇಳಿದ್ದನು. ಇದರಂತೆ ಅಪ್ಸಲ್ ಹುಸೇನ್ ಆರ್.ಬಿ.ಐಗೆ ನಗದು ಪಾವತಿಸಿದಾಗ ಕರೆನ್ಸಿಯ ಬಗ್ಗೆ ಶಂಕೆ ಹೊಂದಿ, ಮೆಷೀನ್ ನಲ್ಲಿ ಪರಿಶೋಧಿಸಿದಾಗ ನಕಲಿ ಕರೆನ್ಸಿ ಎಂಬುದು ಬಯಲಾಯಿತು. ಈ ಸಂಬಂಧ ಆರ್.ಬಿ.ಐ ಬೆಂಗಳೂರು ಅಸಿಸ್ಟೆಂಟ್ ಜನರಲ್ ಮೇನೇಜರ್ ಬೀನ್ ಚೌಧರಿ ಹುಲಸೂರು ಪೋಲೀಸ್ ಠಾಣೆಗೆ ನೀಡಿದ ದೂರಿನಂತೆ ಕೇರಳದ ಕಾಸರಗೋಡಿಗೆ ಬಂದು ಆರೋಪಿಗಳನ್ನು ಬಂಧಿಸಲಾಗಿದೆ.
ಚೆರ್ಕಳದ ಶ್ರೀಲಿಪಿ ಮುದ್ರಣಾಲಯ ಮಾಲಕ ಪ್ರಿಯೇಶ್ ಯಾನೆ ಪ್ರಸೀದ್ ತನ್ನ ಸಹಚರರೊಂದಿಗೆ ತನ್ನದೇ ಮುದ್ರಣಾಲಯದಲ್ಲಿ ಮುದ್ರಿಸಿಟ್ಟಿದ್ದ 27.72ಲಕ್ಷ ಮುಖ ಬೆಲೆಯ 2ಸಾವಿರದ ಕರೆನ್ಸಿಯನ್ನೂ ಇವರಿಂದ ವಶಪಡಿಸಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ಜಾಲವನ್ನು ಮಂಗಳೂರಲ್ಲಿ 2ಸಾವಿರದ ಕರೆನ್ಸಿ ವಿತರಣೆಯ ವೇಳೆ ಪೋಲೀಸರು ಬಂಧಿಸಿದ್ದರು. ಯುಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುವುದನ್ನು ಕರಗತ ಮಾಡಿಕೊಂಡ ಈ ತಂಡ ರಿಸರ್ವ್ ಬ್ಯಾಂಕನ್ನೇ ಮೋಸಗೊಳಿಸಲು ತೋರಿಸಿದ ಎದೆಗಾರಿಕೆ ಪೋಲೀಸರನ್ನೂ ಹುಬ್ಬೇರಿಸುವಂತೆ ಮಾಡಿದೆ.