ಕಣಿಪುರ ಸುದ್ದಿಜಾಲ( ಅ.11)
ಕಾಸರಗೋಡು: ವಶಪಡಿಹಿಕೊಂಡ ಆಟೋ ರಿಕ್ಷಾವನ್ನು ಪೋಲೀಸ್ ಠಾಣಾಧಿಕಾರಿ ಬಿಟ್ಟು ಕೊಡದೇ ಇದ್ದ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಫೇ.ಬು ಪೋಸ್ಟ್ ಹಾಕಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಕಾಸರಗೋಡು ನಗರ ಪೋಲೀಸ್ ಠಾಣಾ ಎಸ್.ಐ.ಆಗಿದ್ದ ಪಿ. ಅನೂಬ್ ಅವರನ್ನು ಪೋಲೀಸ್ ಹುದ್ದೆಯಿಂದ ಅಮಾನತು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಆದೇಶಾನುಸಾರ ತನಿಖೆ ನಡೆಸಿದ ಅಡಿಷನಲ್ ಎಸ್.ಐ. ಪಿ. ಬಾಲಕೃಷ್ಣನ್ ನಾಯರ್ ಸಲ್ಲಿಸಿದ ಪ್ರಾಥಮಿಕ ತನಿಖಾವರದಿ ಪರಿಗಣಿಸಿ ಎಸ್ ಐಯನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಕುಂಬಳೆ ಠಾಣೆಗೆ ಶಿಕ್ಷಾ ವಿಧೇಯ ವರ್ಗಾವಣೆ ಮಾಡಲಾದ ಹೋಂ ಗಾರ್ಡ್ ಕೃಷ್ಣನ್ ಅವರನ್ನು ಹೋಂ ಗಾರ್ಡ್ ಹುದ್ದೆಯಿಂದ ಪದಮುಕ್ತಿಗೊಳಿಸಲಾಗಿದ್ದು, ಅವರನ್ನು ಮರಳಿ ಅಗ್ನಿ ಶಾಮಕ ದಳಕ್ಕೆ ನೇಮಿಸಲಾಗಿದೆ.
ಕಾಸರಗೋಡು ನಗರದ ಬೀಚ್ ರಸ್ತೆಯಲ್ಲಿ ಆಟೋ ರಿಕ್ಷಾ ಟ್ರಾಫಿಕ್ ಕಾನೂನು ಉಲ್ಲಂಘಿಸಿದೆಯೆಂದು ಹೋಂ ಗಾರ್ಡ್ ತಿಳಿಸಿದ ಹಿನ್ನೆಲೆಯಲ್ಲಿ ಆಗಮಿಸಿದ ಎಸ್.ಐ. ರಿಕ್ಷಾವನ್ನು ಠಾಣೆಗೆ ಕೊಂಡೊಯ್ದಿರಿಸಿದ್ದರು. ಬಳಿಕ ಪರಿಪರಿ ಬೇಡಿಕೊಂಡರೂ ರಿಕ್ಷಾ ಬಿಡುಗಡೆ ಮಾಡಿರಲಿಲ್ಲ. ಈ ಕುರಿತು ರಿಕ್ಷಾ ಚಾಲಕರ ಸಂಘಟನೆ ಕೂಡಾ ಎಸ್.ಐ ಬಳಿ ಮಾತಾಡಿದರೂ ರಿಕ್ಷಾ ಒದಗಿಸಲು ಅವರು ಮುಂದಾಗಿರಲಿಲ್ಲ. ಈ ಕಾರಣದಿಂದ ಮನನೊಂದ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್(60) ಫೇ.ಬು. ಪೋಸ್ಟ್ ಹಾಕಿ ತನ್ನ ಬವಣೆ ತಿಳಿಸಿ ರೈಲು ನಿಲ್ದಾಣ ಬಳಿಯ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದಿದ್ದರು. ಕಳೆದ ಸೋಮವಾರ ಸಂಜೆ ಈ ಘಟನೆ ನಡೆದಿತ್ತು. ಸಾಲ ತೆಗೆದು ರಿಕ್ಷಾ ಚಲಾಯಿಸಿ, ಬಾಡಿಗೆ ಮನೆಯಲ್ಲಿ ವಾಸಿಸುವಾತ ಅಂಥಾ ದೊಡ್ಡ ಟ್ರಾಫಿಕ್ ಕಾನೂನು ಉಲ್ಲಂಘನೆಯೇನೂ ಮಾಡಿರಲಿಲ್ಲ. ಕನಿಷ್ಟ 250ರೂ ದಂಡ ಹಾಕುವಂತ ಕೇಸಿನಲ್ಲಿ ಎಸ್.ಐ ತೋರಿದ ದರ್ಪವೇ ಆತ್ಮಹತ್ಯೆಗೆ ಪ್ರೇರಣೆಯೆಂದು ರಿಕ್ಷಾ ಚಾಲಕರು ಆರೋಪಿಸಿದ್ದಾರೆ. ತಿಂಗಳ ಹಿಂದೆಯೂ ಇನ್ನೊಬ್ಬ ರಿಕ್ಷಾ ಚಾಲಕನ ಕೊರಳು ಹಿಡಿದು ಸಾರ್ವಜನಿಕ ಜಾಗದಲ್ಲಿ ವಿನಾ ಕಾರಣ ಇದೇ ಎಸ್.ಐ.ಕ್ರೌರ್ಯ ನಡೆಸಿರುವುದಾಗಿ ರಿಕ್ಷಾ ಚಾಲಕರು ವೀಡಿಯೋ ಸಾಕ್ಷ್ಯ ಸಹಿತ ದೂರಿದ್ದಾರೆ .ಈ ಹಿನ್ನೆಲೆಯಲ್ಲಿ ಎಸ್.ಐ ಮೇಲೆ ಆತ್ಮಹತ್ಯಾ ಪ್ರೇರಣೆ, ಕೊಲೆಯತ್ನದ ಕೇಸು ದಾಖಲಿಸುವಂತೆ ರಿಕ್ಷಾಚಾಲಕರು ಒತ್ತಾಯಿಸಿದ್ದಾರೆ.