ಕಣಿಪುರ ಸುದ್ದಿಜಾಲ( ಅ.11)
ಪೆರ್ಲ: ತೆಂಕುತಿಟ್ಟು ಯಕ್ಷಗಾನದ ಗುರುವರೇಣ್ಯ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರ ಪೆರ್ಲ ಇಲ್ಲಿ ನೂತನವಾಗಿ ನಿರ್ಮಾಣಗೊಂಡ, ಹಿಮ್ಮೇಳ ಗುರು, ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಸ್ಮೃತಿ ಭವನವನ್ನು ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ನಾಡಿಗೆ ಸಮರ್ಪಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದಲ್ಲಿ ನಡೆದ 24ನೇ ವರ್ಷದ ಶಾರದೋತ್ಸವದ ಸಂದರ್ಭ ನೂತನ ಕಟ್ಟಡದ ಉದ್ಘಾಟನೆ ಜರುಗಿತು. ಇನ್ನು ಕೇಂದ್ರವು ಉಭಯ ಗುರುಗಳ ಸ್ಮೃತಿಮಂದಿರವಾಗಿ ಒಂದೇ ರೀತಿಯಲ್ಲಿ ಜೋಡಿಸಿದ ಉಭಯ ಕಟ್ಟಡದಲ್ಲಿ ಕಾರ್ಯವೆಸಗಲಿದೆ.
ಯಕ್ಷಸೀಮೆಗೆ ಹೆಮ್ಮೆಯ ಕೇಂದ್ರ
ಯಕ್ಷಗಾನದಲ್ಲೀಗ ಸಮಗ್ರ ಶಿಕ್ಷಣದ ತರಬೇತಿ ಕೇಂದ್ರಗಳೇ ವಿರಳ. ಕಳೆದ 25ವರ್ಷಗಳಿಂದ ತೆಂಕುತಿಟ್ಟಿನ ತವರು ಸೀಮೆಯಲ್ಲಿ ಅನನ್ಯ ಶ್ರದ್ಧೆಯಿಂದ ಕೇಂದ್ರ ನಡೆಸಿ, ನೂರಾರು ಕಲಾವಿದರ ಹುಟ್ಟಿಗೆ ಕಾರಣರಾದ ಸಬ್ಬಣಕೋಡಿ ರಾಮಭಟ್ಟರು ಕೇಂದ್ರದಲ್ಲಿ ಗುರುಗಳಾಗಿದ್ದ ದಿ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಹೆಸರಲ್ಲಿ ಸ್ಮೃತಿಮಂದಿರ ನಿರ್ಮಿಸಿರುವುದು ಶ್ಲಾಘ್ಯ ವಿಚಾರ. ಇದು ಯಕ್ಷ ಸೀಮೆಗೆ ಹೆಮ್ಮೆಯ ಸಂಗತಿ ಎಂದು ಸ್ಮೃತಿ ಮಂದಿರ ಉದ್ಘಾಟಿಸಿ ಆಶೀರ್ವಚನ ಇತ್ತ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರು ಹೇಳಿದರು.
ಕೇಂದ್ರದಲ್ಲಿ ಕಲಿತರೆ ಪೂರ್ಣಕಲಾವಿದ
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶಾಮಭಟ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಮಾತನಾಡಿದ ಅವರು “ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದಲ್ಲಿ ಸಬ್ಬಣಕೋಡಿ ಮೂಲಕ ಕಲಿತವರೆಲ್ಲ ಮೇಳದಲ್ಲಿ ಯಶಸ್ವಿ ಕಲಾವಿದರಾಗಿದ್ದಾರೆ. ಅನೇಕ ಪುಂಡುವೇಷಧಾರಿಗಳ ಕೊಡುಗೆ ಅವರ ಮೂಲಕ ನಡೆದಿದೆ. ಈಗ ಎಲ್ಲೂ ಕೇಂದ್ರಗಳಿಲ್ಲ. ಕೇಂದ್ರದಲ್ಲಿ ಕಲಿತರೆ ಮಾತ್ರವೇ ಪೂರ್ಣಕಾಲಿಕ ಕಲಾವಿದನಾಗಲು ಸಾಧ್ಯ”ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಸುಳ್ಯದ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಸಂಚಾಲಕ, ಶಿಕ್ಷಣ ತಜ್ಞ ಚಂದ್ರಶೇಖರ ದಾಮ್ಲೆ, ಹಿರಿಯ ನ್ಯಾಯವಾದಿ ಎಂ.ನಾರಾಯಣ ಭಟ್, ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಅಶೋಕ ಪಂಡಿತ್ ಬೈರಿಕಟ್ಟೆ ಅತಿಥಿಗಳಾಗಿ ಪಾಲ್ಗೊಂಡರು.
ಎನ್.ಕೆ. ರಾಮಚಂದ್ರ ಭಟ್ ಪನೆಯಾಲ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಗೌರವಾಧ್ಯಕ್ಷ ಡಾ.ಎಸ್.ಎನ್.ಭಟ್ ಉಪಸ್ಥಿತರಿದ್ದರು. ಕೇಂದ್ರದ ಪ್ರಾಚಾರ್ಯ, ನಾಟ್ಯಗುರು ಸಬ್ಬಕೋಡಿ ರಾಮಭಟ್ಟರು ಸ್ವಾಗತಿಸಿದರು. ಬಳಿಕ ಕೇಂದ್ರದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ನಡೆಯಿತು