ಕಣಿಪುರ ಸುದ್ದಿಜಾಲ (ಅ.10)
ಕಾಸರಗೋಡು: ದೇಶದ ಉದ್ಯಮ ರಂಗದ ಅನಭಿಷಕ್ತ ದೊರೆ, ಟಾಟಾ ಸಮೂಹ ಸಂಸ್ಥೆಯನ್ನು ಎತ್ತರಿಸಿ, ವಿಸ್ತರಿಸಿದ ರತನ್ ಟಾಟಾ ಅವರನ್ನು ನೆನಪಿಸಲು ಕಾಸರಗೋಡಿನಲ್ಲೂ ಅವರ ಕರುಣೆಯ ಕಂಗಳ ಸ್ನೇಹಸ್ಪರ್ಶಗಳಿವೆ..
ಕಳೆದ ಕೋರೋನಾ ಕಾಲವನ್ನು ಯಾರೇ ಮರೆತರೂ ಕಾಸರಗೋಡಿನ ಜನತೆ ಮರೆಯಲಾರರು. ರೋಗ ವ್ಯಾಪನ ತಡೆಯುವ ಹೆಸರಲ್ಲಿ ಗಡಿನಾಡ ಗಡಿಯುದ್ದಕ್ಕೂ ತಡೆಬೇಲಿ ನಿರ್ಮಿಸಿದ ಆಗಿನ ಕರ್ನಾಟಕ ಸರಕಾರ ಕಾಸರಗೋಡನ್ನು ಅಕ್ಷರಶಃ ದಿಗ್ಬಂಧನದಲ್ಲಿಟ್ಟಿತ್ತು.
ದಿನೇ,ದಿನೇ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದಾಗ, ತುರ್ತು ಚಿಕಿತ್ಸೆಗಾಗಿ ಯಾವುದೇ ರೋಗಿಗಳನ್ನೂ ಮಂಗಳೂರಲ್ಲಿ ಉನ್ನತ ಚಿಕಿತ್ಸೆಗೆ ಕರೆದೊಯ್ಯಲಾಗದ ಸ್ಥಿತಿ ಉಂಟಾಯಿತು. ಉನ್ನತ ಚಿಕಿತ್ಸಾ ರಂಗದಲ್ಲಿ ಯಾವ ಸೌಲಭ್ಯಗಳೂ ಇಲ್ಲದ ಕಾಸರಗೋಡಿನ ಬವಣೆಯನ್ನರಿತು ಕೂಡಲೇ ಆಸ್ಪತ್ರೆ ಸೌಕರ್ಯ ಒದಗಿಸಲು ಮುಂದಾದುದೇ ಟಾಟಾ ಕಂಪೆನಿ. ಈ ಕಾಳಜಿಯ ಹಿಂದೆ ಕರುಣಾರ್ದ ಹೃದಯದ ರತನ್ ಟಾಟಾರ ಮಾನುಷಿಕ ಸ್ಪಂದನಗಳಿತ್ತು. ಅದನ್ನು ನಾಡು ಮರೆಯುವುದುಂಟೇ??
ಕಾಸರಗೋಡಿನ ತೆಕ್ಕಿಲ್ ಗ್ರಾಮದಲ್ಲಿ ರಾಜ್ಯ ಸರಕಾರ ಒದಗಿಸಿದ ಜಾಗದಲ್ಲಿ ಕೇವಲ 5ತಿಂಗಳಲ್ಲಿ ನಿರ್ಮಾಣಗೊಂಡಿತ್ತು ಸುಸಜ್ಜಿತ ಟಾಟಾ ಆಸ್ಪತ್ರೆ. ಸುಮಾರು 60ಕೋಟಿ ರೂ ವೆಚ್ಚದಲ್ಲಿ 128ಘಟಕಗಳೊಂದಿಗೆ ಯುದ್ಧೋಪಾದಿಯಲ್ಲಿ ಅಸ್ತಿತ್ವಕ್ಕೆ ಬಂದ ಆಸ್ಪತ್ರೆಯಲ್ಲಿ 551 ಹಾಸಿಗೆಗಳಿದ್ದುವು. ಕೋರೋನಾ ಕಾಲದಲ್ಲಿ ಸಾವಿರಾರು ಮಂದಿ ಚಿಕಿತ್ಸೆ ಪಡೆದ ಈ ಆಸ್ಪತ್ರೆಯನ್ನು ಬಳಿಕ ಟಾಟಾ ಸಂಸ್ಥೆ ಕೇರಳ ಸರಕಾರಕ್ಕೆ ನೀಡಿತ್ತು
ನಿರ್ಜನ, ಖಾಲಿಯಾಗಿದ್ದ ಕಾಡು ಪ್ರದೇಶಕ್ಕೆ ವಿದ್ಯುತ್, ಜಲಸೌಲಭ್ಯ ಸಹಿತ 5ತಿಂಗಳಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸಿದ ಟಾಟಾ ಮಾನವೀಯತೆಯ ಕೊಡುಗೆಯನ್ನು ಕಾಸರಗೋಡು ಮರೆಯಲಾರದು. ದೂರದೃಷ್ಟಿಯ ಯೋಜನೆಗಳಿದ್ದ ಮಾನವೀಯ ಅಂತಕರಣದ ಉದ್ಯಮಿ ರತನ್ ಟಾಟಾರ ಇಂಥ ಕೊಡುಗೆ ರಾಜ್ಯ, ಭಾಷೆಗಳನ್ನು ಮೀರಿ ದೇಶ ವ್ಯಾಪಕ ವಿಸ್ತರಿಸಿದೆ. ಆದ್ದರಿಂದಲೇ ಇಂದು ದೇಶದೆಲ್ಲಡೆ ಜನತೆ ಉದ್ಯಮಿಯೊಬ್ಬರ ಅಗಲುವಿಕೆಗೆ ಮರುಗುತ್ತಿದೆ.
ನಿನ್ನೆ ಮಧ್ಯರಾತ್ರಿ ಅಗಲಿದ 86ರ ರತನ್ ಟಾಟಾ ಅವರ ಬದುಕೇ ಸ್ಪೂರ್ತಿಯ ಪ್ರೇರಣಾಗಾಥೆ. ಉದ್ಯಮಿಯೊಳಗಿನ ಮಾನವತೆಯ ಮಮತೆಯ ಕತೆ. ಬಡ ಮಧ್ಯಮ ವರ್ಗದವರೂ ಕಾರಲ್ಲಿ ಓಡಾಡಬೇಕೆಂದು ಬಯಸಿದ ಅವರು ವ್ಯವಹಾರದಲ್ಲೂ ಮನುಷ್ಯ ಪ್ರೀತಿ ಮೆರೆದ ವ್ಯಾಪಾರಿ. ಸಮಾಜದಿಂದ ಪಡೆದ ಲಾಭವನ್ನು ಸಮಾಜಕ್ಕೆ ಧಾರೆ ಎರೆದ ಜನೋಪಕಾರಿ. ಅಂಥ ಮನಸ್ಸಿಲ್ಲದೇ ಇರುತ್ತಿದ್ದರೆ ಕೊರೋನ ಕಾಲದಲ್ಲಿ ಹೀಗೊಂದು ಆಸ್ಪತ್ರೆ ಸೌಲಭ್ಯ ಕಾಸರಗೋಡಿಗೆ ಸಿಗುತ್ತಲೇ ಇರಲಿಲ್ಲ.