ಕಣಿಪುರ ಸುದ್ದಿಜಾಲ
ತಿರುವನಂತಪುರ (ಅ.10)
ಮಲಯಾಳಂ ಚಿತ್ರರಂಗದಲ್ಲಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರೂ, ಕಟ್ಟಕಡೆಗೆ ಕುಟುಂಬವೇ ಇಲ್ಲದಂತೆ ಅನಾಥರಂತೆ ಮಡಿದ ನಟ ಟಿ.ಪಿ ಮಾಧವನ್ ಅವರ ಉಸಿರು ನಿಂತ ಪಾರ್ಥಿವ ದೇಹವನ್ನೊಮ್ಮೆ ಕೊನೆಯ ಬಾರಿಗೆ ನೋಡಲು ಸಾಕ್ಷಾತ್ ಮಗ,ಮಗಳು ಆಗಮಿಸಿದ್ದಾರೆ!
ಮುನಿಸು ಮರೆತು ಮಹಾನ್ ನಟ ಅಪ್ಪನ ಪಾರ್ಥಿವ ಶರೀರದೆಡೆಗೆ ಸೋದರಿ ಜತೆ ಓಡಿ ಬಂದವರು ಮತ್ತಾರೂ ಅಲ್ಲ ಬಾಲಿವುಡ್ ನ ಜನಪ್ರಿಯ ನಿರ್ದೇಶಕ ರಾಜಕೃಷ್ಣ ಮೆನನ್..!! ಮತ್ತು ಅಮೇರಿಕಾ ವಾಸಿ ಮಗಳು ದೇವಿಕ..
ಮಲಯಾಳದ ಖ್ಯಾತ ಸಹನಟ ಟಿ.ಪಿ. ಮಾಧವನ್ ಅ.9 ಗುರುವಾರ ವಯೋಸಹಜ ಕಾಯಿಲೆಗಳಿಂದ 88ರ ಹರೆಯದಲ್ಲಿ ಕೊಲ್ಲಂ ಪತ್ತನಾಪುರದ ಗಾಂಧಿ ಭವನದಲ್ಲಿ ಮೃತಪಟ್ಟಿದ್ದರು. ಕಳೆದ ಮೂರೂವರೆ ದಶಕದಿಂದ ಪತ್ನಿ ಮಕ್ಕಳನ್ನು ಬೇರ್ಪಟ್ಟು ನಟನೆಯನ್ನೇ ಬದುಕಾಗಿಸಿ ಅಭಿನಯ ವೃತ್ತಿಯಲ್ಲೇ ಮುಳುಗಿದ್ದ ಟಿ.ಪಿ ಜನಪ್ರಿಯ ನಟನಾದರೂ ವೃದ್ಧಾಪ್ಯದ ಕೊನೆಗಾಲದಲ್ಲಿ ಆಶ್ರಿತರಿಲ್ಲದೇ ಆಶ್ರಮವಾಸಿಯಾಗಿ ಅಸುನೀಗಿದ್ದರು. ಅವರ ಪಾರ್ಥಿವ ಶರೀರವನ್ನಿಂದು ತಿರುವನಂತಪುರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಮುನಿಸು ಮರೆತ ಮಕ್ಕಳು ಅಪ್ಪನನ್ನು ಕಟ್ಟಕಡೆಗೂ ಕಣ್ಣಾರೆ ಕಾಣಲು ಬಂದರು.
ಬಿಡುವಿಲ್ಲದ ನಟನಾಗಿ ಮೆರೆಯುವ ದಿನಗಳಲ್ಲೇ ಟಿ.ಪಿ ಮಾಧವನ್ ಅವರನ್ನು ಪತ್ನಿ ಗಿರಿಜಾ ತೊರೆದಿದ್ದರು. ಆಗ ಎಳೆಯ ಮಕ್ಕಳಾಗಿದ್ದವರು ಬಳಿಕ ಅಪ್ಪನ ಸಂಪರ್ಕಕ್ಕೇ ಬಂದಿರಲಿಲ್ಲ. ಅಮ್ಮನ ನೆರಳಲ್ಲೇ ಬೆಳೆದ ಮಗಳು ಅಮೇರಿಕಾ ಉದ್ಯೋಗಿಯಾದರೆ ಮಗ ಬಾಲಿವುಡ್ ಸಿನಿಮಾ ರಂಗದ ಹಿಟ್ ನಿರ್ದೇಶಕನಾಗಿ ರೂಪುಗೊಂಡಿದ್ದನು. ಇಂಥ ಮಗನನ್ನು ಕೊನೆಗಾಲದಲ್ಲಿ ನೋಡಬೇಕೆಂದು ಟಿ.ಪಿ.ಮಾಧವನ್ ಬಯಸಿದ್ದರು. ಆದರೆ ಮಗ ತಲುಪಿದ್ದು ಅಪ್ಪ ಕಣ್ಮುಚ್ಚಿದ ಮೇಲೆ! ಮತ್ತೊಮ್ಮೆಯೂ ನೋಡಲಾಗದ ಮೇಲೆ!!