ಬದುಕಿದೆಷ್ಟು ವಿಚಿತ್ರ..? ಮಗ ಬಾಲಿವುಡ್ ನಿರ್ದೇಶಕ: 600 ಸಿನಿಮಾಗಳ ನಟ ಅಪ್ಪ ಅನಾಥನಾಗಿ ಮಡಿದ..!!

ಇದು ವಿಧಿಯೋ..ಬೆಳ್ಳಿತೆರೆಯ ಮಾಯೆಯೋ??

by Narayan Chambaltimar

ಲೇಖನ/ ಎಂ. ನಾ. ಚಂಬಲ್ತಿಮಾರ್

ಚಿನ್ನದ ಚಮಚ ಬಾಯಲ್ಲಿಟ್ಟೇ ಹುಟ್ಟಿದರೂ ಕಡೆಗಾಲದಲ್ಲಿ ತನ್ನವರಾರೂ ತನಗಿಲ್ಲದ ದುರ್ಗತಿ ಎಂಥೆಂಥ ಶ್ರೀಮಂತರಿಗೂ ಬಂದೇ ಬರುತ್ತದೆ!
ಅದಕ್ಕೆ ಈ ನಟನ ಬದುಕೇ ನಿದರ್ಶನ..!
ಸುಮಾರು 600 ಮಲಯಾಳಂ ಸಿನಿಮಾಗಳಲ್ಲಿ ನಟಿಸಿ, ಎಣಿಸಲಾಗದಷ್ಟು ದುಡ್ಡು ಬಾಚಿದರೂ ಕೊನೆಗಾಲದಲ್ಲಿ ಯಾರಿಗೆ ಯಾರೂ ಇಲ್ಲ ಎಂಬಂಥೆ ಅನಾಥವಾಗಿ ಅಗಲಿದವರು ನಿನ್ನೆ(ಅ.9) ಮೃತರಾದ ಮಲಯಾಳದ ಒಂದು ಕಾಲದ ಬೇಡಿಕೆಯ ನಟ ಟಿ ಪಿ.ಮಾಧವನ್.!
ಕೇರಳದ ಕೊಲ್ಲಂ ಪತ್ತನಾಪುರದ ಗಾಂಧಿಭವನದಲ್ಲಿ ನಿನ್ನೆ ಅಸುನೀಗುವಾಗ ಅವರಿಗೆ ಭರ್ತಿ 88ವರ್ಷ. ಅನನ್ಯ ಅನುಭವಗಳ ಪಯಣವೇ ಅವರ ಬದುಕಿನ ರೋಚಕ ಗಾಥೆ..
ಶ್ರೀಮಂತ ಮನೆತನದಲ್ಲಿ ಹುಟ್ಟಿ ಶ್ರೀಮಂತಿಕೆಯಲ್ಲೇ ಈಜಾಡಿದರೂ ಕಟ್ಟಕಡೆಗೆ ಹೀಗೇಕಾಯಿತು…?
ನಟನೆಯೇ ಬದುಕಾಗಿಸಿ 600ಸಿನಿಮಾಗಳಲ್ಲಿ ನಟಿಸಿ ಮೆರೆದವರು ನಿಜ ಜೀವನದಲ್ಲಿ ಬದುಕಲು ಮರೆತದ್ದು ಯಾಕೋ…?
ಇದಕ್ಕೆ ವಿಧಿ ಎನ್ನೋಣವೇ..?ಬೆಳ್ಳಿ ತೆರೆಯ ಮಾಯೆ ಎನ್ನಲೇ?

 

ದೇಶಕ್ಕೆ ದೇಶವೇ ಬಡತನದ ತಾಂಡವವನ್ನು ಅನುಭವಿಸುತ್ತಿದ್ದ 1935ರಲ್ಲಿ ಲೇಖಕ, ವಿದೇಶಿ ವಿ.ವಿಗಳ ಡೀನ್ ಆಗಿದ್ದ ಡಾ. ಎನ್.ಪರಮೇಶ್ವರನ್ ಪಿಳ್ಳೆ ಮತ್ತು ಮೀನಾಕ್ಷಿ ಕುಟ್ಟಿಯಮ್ಮ ದಂಪತಿಗೆ ಮಗನಾಗಿ ಜನಿಸಿದ್ದ ಟಿ.ಪಿ. ಮಾಧವನ್ ಆ ಕಾಲದಲ್ಲೇ ಸಮಾಜಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಡಿಫ್ಲೊಮಾ ಪಡೆದವರು. 1960ರಲ್ಲಿ ಕೋಲ್ಕತ್ತಾದ ಪಬ್ಲಿಸಿಟಿ ಸೊಸೈಟಿ ಆಫ್ ಇಂಡಿಯಾದ ಬ್ಯೂರೋ ಮುಖ್ಯಸ್ಥರಾದರು. ಬಿಟ್ಸ್ ಫ್ರೀ ಪ್ರೆಸ್ ಜರ್ನಲ್ , ಇಂಡಿಯನ್ ಎಕ್ಸ್ ಪ್ರೆಸ್, ಕೇರಳಾ ಕೌಮುದಿಯಲ್ಲಿ ದುಡಿದರು. ಬಳಿಕ ಬೆಂಗಳೂರಲ್ಲಿ ಜಾಹೀರಾತು ಕಂಪೆನಿ ಆರಂಭಿಸಿದ್ದರು. ಉನ್ನತ ಶಿಕ್ಷಣ, ಅಪಾರ ಅರಿವಿನ ಪ್ರೌಢತೆ ಇದ್ದರೂ ಮಾಧ್ಯಮ ರಂಗದ ಅವಕಾಶಗಳನ್ನೆಲ್ಲ ತೊರೆದು ಅವರು ಕಾಲಿಟ್ಟದ್ದೇ ಸಿನಿಮಾ ಎಂಬ ಮಾಯಾ ಲೋಕಕ್ಕೆ..

ಬಿಡುವಿಲ್ಲದ ನಟನೆಯ ಪಯಣದಲ್ಲಿ ಬದುಕಲು ಮರೆತೇ ಬಿಟ್ಟರೇ..??

1975ರಲ್ಲಿ ತೆರೆಕಂಡ ರಾಗಂ ಅವರ ನಟನೆಯ ಚೊಚ್ಚಲ ಚಿತ್ರ. ಅನಂತರ ಕಳೆದ ನಾಲ್ಕೂವರೆ ದಶಕದಲ್ಲಿ ಸತತ 600ಚಿತ್ರಗಳಲ್ಲಿ ನಟಿಸುತ್ತಲೇ ಬಂದರು. ಅವರಿಲ್ಲದ ಚಿತ್ರಗಳೇ ಮಲಯಾಳದಲ್ಲಿ ಇಲ್ಲ ಎಂಬಂತಿತ್ತು ವಾತಾವರಣ!
ನಾಯಕನಟ ನಲ್ಲದೇ ಇದ್ದರೂ ಪೋಷಕ ನಟ, ವಿಲನ್, ಹಾಸ್ಯಪಾತ್ರಗಳಲ್ಲಿ ಅವರು ಮಾಡಿದ್ದು ವೈವಿಧ್ಯ ನೂರಾರು ಸ್ವಭಾವಗಳ ವೇಷ!! ಅದೆಲ್ಲವೂ ಜನಪ್ರಿಯ.
ನಟಿಸುವುದನ್ನೇ ಕಾಯಕವಾಗಿಸಿದ ಇಂಥಾ ನಟ ಜೀವನದಲ್ಲಿ ಸೋತದ್ದು ಹೇಗೆ??
ಇದು ಉತ್ತರಗಳೇ ಕಾಣದ ಯಕ್ಷಪ್ರಶ್ನೆ. ಅವರು ಗಳಿಸಿದ ಸಂಪಾದನೆಗಳೆಲ್ಲ ಏನಾಯಿತು ಎಂಬುದು ಉತ್ತರ ಸಿಗಬಹುದಾದ ಸಿನಿಮಜಗತ್ತಿನ ವರ್ಣರಂಜಿತ ಕಥೆ..!

ಮಗ ಬಾಲಿವುಡ್ ನಿರ್ದೇಶಕ!
ನಟನಾಗಿ ಮೆರೆದ ಅಪ್ಪ ಅನಾಥ..!!

ಅಭಿನಯದಲ್ಲಿ ಬ್ಯುಸಿಯಾಗಿದ್ದಾಗ ದಾಂಪತ್ಯದಲ್ಲಿ ಸಮಸ್ಯೆಗಳು ಉದ್ಭವಿಸಿತು. ಒಬ್ಬಾಕೆ ಮಗಳು, ಮಗನೊಂದಿಗೆ ಪತ್ನಿ ಗಿರಿಜಾ ಟಿ.ಪಿ ಜತೆಗಿನ ಸಂಸಾರಕ್ಕೆ ಗುಡ್ ಬೈ ಹೇಳಿದರು. ಅವರು ಚೆನ್ನೈಗೆ ತೆರಳಿ ಪ್ರತ್ಯೇಕ ನೆಲೆಸಿದರು. ಆಗ ಕೈ ತುಂಬಾ ಸಿನಿಮಾಗಳಿದ್ದ ಟಿ.ಪಿಗೆ ಸಿನಿಮಾ ಜಗತ್ತೇ ಮನೆಯಾಯಿತು…ಬದುಕು ಮರೆತೇ ಹೋಯಿತು. ಆ ಬಳಿಕದ ಸುಮಾರು 35ವರ್ಷಗಳಲ್ಲಿ ಇವರದ್ದು ಏಕಾಂಗಿ ಜೀವನ..

ಅಭಿನಯದ ಪಯಣದ ನಡುವೆ ಆರೋಗ್ಯ ಕೈ ಕೊಟ್ಟಿತು. 2015ರಲ್ಲಿ ಹರಿದ್ವಾರಕ್ಕೆ ತೆರಳಿದ್ದ ವೇಳೆ ಪಾರ್ಶ್ವವಾಯು ಗೆ ತುತ್ತಾದರು. ಹರಿದ್ವಾರದ ಸನ್ಯಾಸಿಗಳು ಚಿಕಿತ್ಸೆ ಕೊಡಿಸಿದ್ದರು. ಬಳಿಕ ತಿರುವನಂತಪುರಕ್ಕೆ ಬಂದು ಲಾಡ್ಜೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅವರನ್ನು ಟಿ.ವಿ.ಸೀರಿಯಲ್ ನಿರ್ದೇಶಕ ಪ್ರಸಾದ್ ಅವರು ಕೊಲ್ಲಂ ಪತ್ತನಾಪುರದ ಗಾಂಧಿಭವನ್ ಆಶ್ರಮಕ್ಕೆ ಸೇರಿಸಿದರು. ಕಲಾವಿದರಿಂದ ಸಹಾಯ ಕೊಡಿಸಿದರು. ಚೇತರಿಸಿದ ಟಿ.ಪಿ ಅಲ್ಲಿಂದಲೇ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದರು. ಆದರೆ ವಯಸ್ಸೇರುತ್ತಾ ಬಂದಾಗ ಮರೆವು ಸಹಿತ ಹಲವು ಕಾಯಿಲೆಗಳು ಕಾಡಿತು. ಅಶಕ್ತತೆಯಿಂದ ನಟಿಸದಾದರು.

ಮಲಯಾಳಂ ಸಿನಿಮಾ ಕಲಾವಿದರ ಸಂಘಟನೆಗೆ 2000ದಿಂದ 2006ರ ತನಕ ಕಾರ್ಯದರ್ಶಿಯಾಗಿದ್ದ ಟಿ.ಪಿ. ಅಪಾರ ಜ್ಞಾನದ ಅರಿವುಳ್ಳ ಮನುಷ್ಯ. ಸಿನಿಮಾ ರಂಗದಲ್ಲೆಲ್ಲಾ ಅಪಾರ ಬಾಂಧವ್ಯ. ಆದರೆ ಬದುಕಿನಲ್ಲಿ ಏಕಾಂತ ಪಥಿಕ..
ಇವರ ಮಗಳು ಅಮೇರಿಕಾದಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕುಟುಂಬ ಸಹಿತ ಅಲ್ಲೇ ನೆಲೆಸಿದ್ದಾರೆ. ಮಗ ಬಾಲಿವುಡ್ ನ ಜನಪ್ರಿಯ ನಿರ್ದೇಶಕ..!
ಅಕ್ಷಯ್ ಕುಮಾರ್ ನಟಿಸಿದ ಏರ್ ಲಿಫ್ಟ್ ಸಿನಿಮ ನಿರ್ದೇಶಿಸಿದ ರಾಜಕೃಷ್ಣ ಮೆನನ್ ಇವರ ಏಕೈಕ ಪುತ್ರ. ಆದರೆ ಅಮ್ಮ ಬೇರ್ಪಟ್ಟಲ್ಲಿಂದ ಅಪ್ಪನನ್ನು ಮಗ ಕಂಡ ನೆನಪೇ ಇಲ್ಲ!

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00