ಕಾಸರಗೋಡು: ಕೇರಳ ರಾಜ್ಯ ಸರಕಾರದ ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನ 25 ಕೋಟಿರೂ ಒಲಿದ ಭಾಗ್ಯದಾತ ಮತ್ಯಾರೂ ಅಲ್ಲ, ಕನ್ನಡಿಗ!
ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರದ ಅಲ್ತಾಫ್ ಎಂಬವರೇ ಈ ಅದೃಷ್ಟಶಾಲಿಯೆಂದು ಗುರುತಿಸಲಾಗಿದೆ.
ಕೇರಳದ ವಯನಾಡಿಗೆ ತಿಂಗಳ ಹಿಂದೆ ಬಂದಿದ್ದ ಅಲ್ತಾಫ್ ಇಲ್ಲಿನ ನಾಗರಾಜು ಎಂಬವರ ಸ್ಟಾಲ್ ನಿಂದ ಖರೀದಿಸಿದ TG 434222 ಟಿಕೇಟಿಗೆ ಪ್ರಥಮ ಬಹುಮಾನ 25ಕೋಟಿ ರೂ ಒಲಿದಿದೆ.
ಅದೃಷ್ಟ ಒಲಿದ ಅಲ್ತಾಫ್ ಮಂಡ್ಯ ದ ಪಾಂಡವಪುರದ ಮೆಕಾನಿಕ್ ಎನ್ನಲಾಗಿದೆ. ವೈಶಿಷ್ಟ್ಯ ಎಂದರೆ ಕೇರಳ ಲಾಟರಿಯ ಈ ಅದೃಷ್ಟ ಕನ್ನಡಿಗನ ಮೂಲಕವೇ ಕರ್ನಾಟಕದ ಕನ್ನಡಿಗನಿಗೆ ದೊರಕಿದೆ.
ವಯನಾಡಿನ ಬತ್ತೇರಿಯಲ್ಲಿ ಲಾಟರಿ ಸಬ್ ಏಜೆಂಟಾಗಿರುವ ನಾಗರಾಜು ಕೂಡಾ ಮೂಲತಃ ಕನ್ನಡಿಗರೇ ಆಗಿದ್ದು ವರ್ಷಗಳ ಹಿಂದೆ ಕೂಲಿಕೆಲಸಕ್ಕಾಗಿ ವಯನಾಡ್ ಬಂದಿದ್ದರು. ಬಳಿಕ ಲಾಟರಿ ಚಿಲ್ಲರೆ ಟಿಕೇಟ್ ಮಾರಲಾರಂಭಿಸಿ ಅಂಗಡಿ ಇಟ್ಟು ಸಬ್ ಏಜೆನ್ಸಿ ಹೊಂದಿದರು. ಇವರಲ್ಲಿಂದ ತಿಂಗಳ ಹಿಂದೆ ಮಾರಾಟವಾದ ಟಿಕೇಟು ಈಗ ಪ್ರಥಮ ಬಹುಮಾನಕ್ಕೆ ಅರ್ಹವಾಗಿದೆ. ಅದೃಷ್ಟ ಕನ್ನಡಿಗರಿಬ್ಬರನ್ನು ಒಟ್ಟಿಗೆ ಅರಸಿ ಬಂದಿದೆ. ಇಬ್ಬರೂ ಇದರಿಂದ ಕೋಟಿಪತಿಗಳಾಗಲಿದ್ದಾರೆ.