ಕಣಿಪುರ ಸುದ್ದಿಜಾಲ( ಅ.10)
ಕುಂಬಳೆ: ಕೇಂದ್ರ, ರಾಜ್ಯ ಸರಕಾರಿ ಸ್ವಾಧೀನದ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಭರವಸೆಯಿಂದ ಹಲವರಿಂದ ಲಕ್ಷಾಂತರ ರೂ ಪಡೆದು ವಂಚಿಸಿದ ಪ್ರಕರಣದಲ್ಲಿ ಕುಂಬಳೆ ಪೋಲೀಸರು ಕೇಸು ದಾಖಲಿಸಿರುವ ಡಿವೈಎಫ್ ಐ , ಸಿಪಿಐಎಂ ನೇತಾರಳಾದ ಪುತ್ತಿಗೆ ಬಾಡೂರಿನ ಸಚಿತಾ ರೈ(27) ಬಂಧನವನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಡೆ ಹಿಡಿದು, ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಕರಣದಲ್ಲಿ ಈಕೆಯ ಬಂಧನಕ್ಕಾಗಿ ಕುಂಬಳೆ ಠಾಣಾಧಿಕಾರಿ ಜಾಮೀನು ರಹಿತ ಕೇಸು ದಾಖಲಿಸಿದ್ದರು
ಕಾಸರಗೋಡಿನ ಕೇಂದ್ರೀಯ ತೋಟಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ಉದ್ಯೋಗ ಕೊಡಿಸುವ ಭರವಸೆಯೊಡ್ಡಿ ಕಿದೂರು ನಿವಾಸಿ ನಿಶ್ಮಿತಾ ಶೆಟ್ಟಿ ಎಂಬವರಿಂದ 15ಲಕ್ಷರೂ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ ಕುಂಬಳೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇದೇ ರೀತಿಯಲ್ಲಿ ಈಕೆ ಇನ್ನೂ ಹಲವರನ್ನು ವಂಚಿಸಿರುವ ಒಂದೊಂದೇ ದೂರುಗಳು ಬೆಳಕಿಗೆ ಬರಲಾರಂಭಿಸಿವೆ. ಸುಮಾರು 16ಕ್ಕೂ ಅಧಿಕ ಮಂದಿಯಿಂದ ಲಕ್ಷ,ಲಕ್ಷ ಪಡೆದು ಉದ್ಯೋಗ ವಂಚನೆ ಮಾಡಿದ್ದಾಳೆಂಬ ಕೇಸುಗಳು ದಾಖಲಾಗುತ್ತಿವೆ. ಕರ್ನಾಟಕದ ಉಡುಪಿ ಕೇಂದ್ರೀಕೃತ ತಂಡವೊಂದು ಇದರಲ್ಲಿ ಕಾರ್ಯಾಚರಿಸಿದೆಯಾದರೂ ಕಾಸರಗೋಡು ತಾಲೂಕಿನಲ್ಲಿ ನಡೆದ ವಂಚನೆ ಈಕೆಯ ಮೂಲಕವೇ ಆಗಿರುವುದರಿಂದ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ ಅನೇಕರಿಂದ ವಂಚನೆಯ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈಕೆಯನ್ನು ಸರಕಾರಿ ಶಾಲೆಯ ಅಧ್ಯಾಪಕಿ ಹುದ್ದೆಯಿಂದ ಅಮಾನತುಗೊಳಿಸಬೇಕೆಂಬ ಆಗ್ರಹದೊಂದಿಗೆ ಮುಸ್ಲಿಂಯೂತ್ ಲೀಗ್ ಕಾರ್ಯಕರ್ತರು ಜಿಲ್ಲಾ ಶಿಕ್ಷಣ ಇಲಾಖೆಗೆ ಮೆರವಣಿಗೆ ನಡೆಸಿ ಮನವಿ ನೀಡಿದ್ದಾರೆ. ಕಾಂಗ್ರೆಸ್ ಕೂಡಾ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿರುವ ಹಿನ್ನೆಲೆಯಲ್ಲಿ ವಂಚನಾ ಪ್ರಕರಣ ರಾಜಕೀಯ ಆಯಾಮ ಪಡೆದುಕೊಂಡಿದೆ
ಕೇಸಿನಲ್ಲಿ ಕುಂಬಳೆ ಪೋಲೀಸರು ಜಾಮೀನು ರಹಿತ ಬಂಧನಕ್ಕಾಗಿ ಎಫ್ ಐ ಆರ್ ದಾಖಲಿಸಿದ ಹಿನ್ನೆಲೆಯಲ್ಲಿ ವಂಚನಾ ಆರೋಪಕ್ಕೊಳಗಾದ ಸಚಿತಾ ರೈ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಳು. ಪ್ರಕರದಲ್ಲಿ ಇನ್ನಷ್ಟು ದೂರುಗಳು ಬೆಳಕಿಗೆ ಬರುವುದನ್ನು ತಪ್ಪಿಸಲು, ವಂಚನೆಗೊಳಗಾದವರ ಮನ ಒಲಿಸುವ ಕೆಲಸಗಳು ಸಿಪಿಎಂ ನಾಯಕರಿಂದ ನಡೆಯತೊಡಗಿದೆ. ಈ ಸಂಬಂಧ ಉಡುಪಿ ಮೂಲದ ವಂಚನಾ ಜಾಲವನ್ನು ವಕೀಲರ ಸಹಿತವಾಗಿ ಪಕ್ಷದ ನಾಯಕರು ಸಂಪರ್ಕಿಸಿದ್ದಾರೆಂದೂ ತಿಳಿದುಬಂದಿದೆ. ಆದ್ದರಿಂದಲೇ ಈ ವಂಚನಾ ಜಾಲಕ್ಕೆ ಸ್ಥಾನೀಯ ಸಿಪಿಎಂ ನಾಯಕರ ಬೆಂಬಲ ಮತ್ತು ರಕ್ಷಣೆ ಇದೆಯೆಂದಾರೋಪಿಸಿ ರಾಜಕೀಯ ಪ್ರತಿಭಟನೆ ಆರಂಭಗೊಂಡಿದೆ.