ಕಣಿಪುರ ಸುದ್ದಿಜಾಲ. (ಅ.9)
ಕುಂಬಳೆ: ನವರಾತ್ರಿ ಆರಾಧನೆಯ ಪರ್ವಕಾಲದ ಸುಮುಹೂರ್ತದಲ್ಲಿಂದು ನಾಯ್ಕಾಪು ಸಮೀಪದ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ನೂತನ ಅನ್ನಛತ್ರಕ್ಕೆ ಶಿಲಾನ್ಯಾಸ ಮಾಡಲಾಯಿತು.
ಇತ್ತೀಚಿಗೆ ನಿರ್ಮಾಣಗೊಂಡ ಶ್ರೀ ಕ್ಷೇತ್ರದಲ್ಲಿ ನೂತನ ಅನ್ನಛತ್ರ ನಿರ್ಮಾಣಕ್ಕೆ ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರು ಶಿಲಾನ್ಯಾಸಗೈದರು.
ಈ ಸಂದರ್ಭ ಮಾತನಾಡಿದ ಅವರು “ಕ್ಷೇತ್ರಗಳಲ್ಲಿ ಅನ್ನದಾನವೇ ಪ್ರಧಾನ. ಅದರಲ್ಲೂ ಮಾತೃರೂಪಿಣಿಯಾದ ರಾಜೇಶ್ವರಿಯ ಸನ್ನಿಧಾನದಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದು ಮತ್ತು ಅದಕ್ಕಾಗಿಯೇ ಪ್ರತ್ಯೇಕ ಛತ್ರ ನಿರ್ಮಿಸುವುದು ಶ್ಲಾಘನೀಯ ಕಾಯಕ. ಅನ್ನದಾನದಿಂದ ಕ್ಷೇತ್ರಗಳ ಸಾನ್ನಿಧ್ಯ ಸಂವೃದ್ಧಿಯಾಗುತ್ತದೆ” ಎಂದರು.ದೇವಿ ದೇಗುಲಗಳಲ್ಲಿ ಅನ್ನದಾನಕ್ಕೆ ಮಹತ್ವವಿದೆ. ಏಕೆಂದರೆ ದೇವಿಯೇ ಜಗದಜನನಿ. ಭಕ್ತರಾದ ಮಕ್ಕಳ ಪಾಲಿನ ಹಸಿವು ನೀಗಿಸಲು ಅನ್ನದಾನ ಮಾಡುವುದರಿಂದ ಇಲ್ಲಿ ಮಾತೃತ್ವದ ಮಮತೆಯ ಅನಾವರಣವಾಗುತ್ತದೆ. ಭಕ್ತರು ಪ್ರಸಾದವೆಂದೇ ಸ್ವೀಕರಿಸುವ ಅನ್ನ ಪ್ರಸಾದದಿಂದ ದೇವಾಲಯದ ಕಾರಣಿಕವೂ ಸಂವರ್ಧಿಸುತ್ತದೆ ಎಂದು ಶ್ರೀಗಳವರು ನುಡಿದರು
ಮುಂಡಪ್ಪಳ್ಳ ದೇಗುಲದ ನಿರ್ಮಾತೃ, ಉದ್ಯಮಿ ಹಾಗೂ ದೇಗುಲದ ಅಧ್ಯಕ್ಷರಾದ ಕೆ.ಕೆ.ಶೆಟ್ಟಿ ಮತ್ತು ಉದ್ಯಮಿ ಕೆ.ಪಿ.ರೈ ಸಹಭಾಗಿತ್ವದಲ್ಲಿ ದೇವಾಲಯದ ನೂಚನ ಅನ್ನಛತ್ರ ನಿರ್ಮಾಣವಾಗುತ್ತಿದ್ದು, ಶಿಲಾನ್ಯಾಸದ ವೇಳೆ ಅವರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಮಂಜುನಾಥ ಆಳ್ವ ಮಡ್ವ, ಎಸ್.ಎನ್ ರಾವ್ ಮುನ್ನಿಪ್ಪಾಡಿ, ಉದ್ಯಮಿ ಜಯಪ್ರಸಾದ್ ರೈ ಮೊದಲಾದವರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಕಾರಿಂಜೆ ಹಳಮನೆ ಶಿವರಾಮ ಭಟ್ ಸ್ವಾಗತಿಸಿ, ವಂದಿಸಿದರು. ನವರಾತ್ರಿ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ದೈನಂದಿನ ವಿವಿಧ ಕಾರ್ಯಕ್ರಮಗಳು ಜರಗುತ್ತಿದ್ದು, ಇತ್ತೀಚೆಗಷ್ಟೇ ನಿರ್ಮಾಣಗೊಂಡ ದೇವಾಲಯ ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ.