ಕಣಿಪುರ ಸುದ್ದಿಜಾಲ (ಅ.9)
ಕೊಚ್ಚಿನ್ : ದೇವಾಲಯಗಳು ಸಿನಿಮಾ ಶೂಟಿಂಗ್ ಮಾಡುವ ತಾಣಗಳಲ್ಲ. ಅದು ಸನಾತನ ಆರಾಧನಾ ಪದ್ಧತಿಯ, ನಂಬುಗೆಯ ಕೇಂದ್ರ, ಆರಾಧನಾ ಸ್ಥಳ. ಅಂತಹ ಜಾಗದಲ್ಲಿ ಸಿನಿಮ ಶೂಟಿಂಗ್ ಸಲ್ಲದೆಂದು ಕೇರಳಾ ಹೈಕೋರ್ಟು ಅಭಿಪ್ರಾಯ ಪಟ್ಟಿದೆ.
ಕೇರಳದ ತ್ರಿಪುಣಿತ್ತುರ ಶ್ರೀಪೂರ್ಣತ್ರಯೇಶ್ವರ ದೇವಾಲಯದಲ್ಲಿ ನಡೆದ ಸಿನಿಮಾ ಚಿತ್ರೀಕರಣವನ್ನು ಪ್ರಶ್ನಿಸಿ ಭಕ್ತರು ಹೈಕೋರ್ಟಿಗೆ ಸಲ್ಲಿಸಿದ್ದ ಮನವಿ ಪರಿಗಣಿಸಿ ನ್ಯಾಯಾಲಯದ ವಿಭಾಗೀಯ ಪೀಠ ಈ ಉಲ್ಲೇಖದ ತೀರ್ಪಿತ್ತಿದೆ.
ಜಸ್ಟೀಸ್ ಅನಿಲ್ ಕೆ. ನರೇಂದ್ರನ್, ಜಸ್ಟೀಸ್ ಅಜಿತ್ ಕುಮಾರ್ ಎಂಬವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ದೂರನ್ನು ವಿಚಾರಣೆ ನಡೆಸಿ ತೀರ್ಪಿತ್ತಿದೆ.
ತ್ರಿಪುಣಿತ್ತುರ ನಿವಾಸಿಗಳಾದ ದಿಲೀಪ್ ಮೆನೋನ್, ಗಂಗಾ ವಿಜಯನ್ ಎಂಬಿವರು ದೇವಳದಲ್ಲಿ ನಡೆದ ಸಿನಿಮಾ ಚಿತ್ರೀಕರಣ ಪ್ರಶ್ನಿಸಿ ಹೈಕೋರ್ಟಿಗೆ ದೂರು ನೀಡಿದ್ದರು.
ಇತ್ತೀಚೆಗೆ ತ್ರಿಪುಣಿತ್ತುರ ದೇವಾಲಯದಲ್ಲಿ ಕೊಚ್ಚಿನ್ ದೇವಸ್ವಂ ಮಂಡಳಿ ಅನುಮತಿಯೊಂದಿಗೆ “ವಿಶೇಷಂ”ಎಂಬ ಸಿನಿಮ ಚಿತ್ರೀಕರಣವಾಗಿತ್ತು. ಈ ವೇಳೆ ಕ್ಷೇತ್ರಾಚಾರ ಉಲ್ಲಂಘನೆಯಾಗಿತ್ತು. ಹಿಂದೂವೇತರ ಅನ್ಯ ಮತೀಯರ ಪ್ರವೇಶ, ದೇಗುಲದೊಳಗೆ ಶೂ ಧರಿಸಿ ಓಡಾಟ, ಕ್ಷೇತ್ರ ಆಚಾರ ಸಂಪ್ರದಾಯಗಳ ನಗ್ನ ಉಲ್ಲಂಘನೆಗಳಾಗಿತ್ತು. ಇದು ಸ್ಥಾನೀಯ ಭಕ್ತರ ವಿರೋಧಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೈ ಕೋರ್ಟಿಗೆ ದೂರು ನೀಡಲಾಗಿತ್ತು.