ಕಣಿಪುರ ಸುದ್ದಿಜಾಲ( ಅ.9)
ಕಾಸರಗೋಡು: ಕೇರಳ ಸರಕಾರದ ಓಣಂ ಬಂಪರ್ ಲಾಟರಿ ಡ್ರಾ ಇಂದು ಮಧ್ಯಾಹ್ನ ನಡೆದಿದ್ದು, ಪ್ರಥಮ ಬಹುಮಾನವಾದ 25ಕೋಟಿ ರೂ TG 434222
ಎಂಬ ನಂಬ್ರದ ಟಿಕೆಟಿಗೊಲಿದಿದೆ.
ಆದರೆ ಈ ಅದೃಷ್ಟವಂತ ಯಾರೆಂಬುದು ಗೊತ್ತಾಗಲಿಲ್ಲ. ಬಹುಮಾನ ಪಡೆದ ಈ ನಂಬ್ರದ ಟಿಕೇಟ್ ಕೇರಳದ ವಯನಾಡು ಜಿಲ್ಲೆಯ ಬತ್ತೇರಿಯಲ್ಲಿ ಮಾರಾಟವಾದ ಟಿಕೇಟಾಗಿದೆ. ಇಲ್ಲಿನ ಎನ್.ಜಿ.ಆರ್. ಏಜೆನ್ಸಿಯ ಜಿನೇಶ್ ಎಂಬವರ ಸಬ್ ಏಜೆಂಟ್ ನಾಗರಾಜ್ ಎಂಬವರು ಒಂದು ತಿಂಗಳ ಹಿಂದೆ ಮಾರಾಟಗೈದ ಟಿಕೆಟ್ ಇದೆಂದು ಗುರುತಿಸಲಾಗಿದೆ.
ಕೇರಳ ರಾಜ್ಯ ಲಾಟರಿಗೆ ದಕ್ಷಿಣಭಾರತಾದ್ಯಂತ ಬೇಡಿಕೆ ಇದ್ದರೂ ಈ ಬಾರಿ ಕಳೆದ ಬಾರಿಗಿಂತ ಟಿಕೇಟುಗಳು ಕಡಿಮೆ ಪ್ರಮಾಣದಲ್ಲಿ ಮಾರಾಟವಾಗಿವೆ
ಆರಂಭ ಹಂತದಲ್ಲಿ ಭಾರೀ ಪ್ರಮಾದ ಬೇಡಿಕೆ ಕಂಡುಬಂದಿದ್ದ ಟಿಕೇಟ್ ಮಾರಾಟದಲ್ಲಿ ಕೊನೆಯ ಹಂತದಲ್ಲಿ ಡಿಮ್ಯಾಂಡ್ ಕುಸಿದಿತ್ತು. ಈ ಬಾರಿ ಒಟ್ಟು 80ಲಕ್ಷ ಟಿಕೇಟುಗಳನ್ನು ಮುದ್ರಿಸಲಾಗಿತ್ತು. ಈ ಪೈಕಿ 71, 28, 218 ಟಿಕೇಟುಗಳು ಮಾರಾಟವಾಗಿವೆ. ಎಂಟೂವರೆ ಲಕ್ಷ ಟಿಕೇಟುಗಳು ಬಾಕಿ ಉಳಿಯಿತಾದರೂ ಸರಕಾರಕ್ಕೆ ಇದರಿಂದ ನಷ್ಟವೇನಿಲ್ಲ. ಬದಲಿಗೆ ಕೋಟ್ಯಾಂತರ ಆದಾಯ ಲಾಭವಿದೆ. ಸುಮಾರು 356ಕೋಟಿಗೂ ಅಧಿಕ ಲಾಟರಿ ಮಾರಾಟದಿಂದ ಸರಕಾರದ ಬೊಕ್ಕಸಕ್ಕೆ ಆದಾಯ ಬಂದಿದೆ. ಇದರಿಂದ ಜಿ.ಎಸ್.ಟಿ ವಿಂಗಡಿಸಿದರೆ 280ಕೋಟಿ ರೂಗಳಷ್ಟು ಆದಾಯವಿದೆ. ಬಹುಮಾನ ದ ಹಣ ಮತ್ತು ಏಜೆಂಟರ ಕಮೀಷನ್ ಸೇರಿ 140ಕೋಟಿಯಷ್ಟೇ ವೆಚ್ಚ ತಗುಲುವುದರಿಂದ ಸರಕಾರಕ್ಕಿದು ಆದಾಯದ ದಾರಿಯಾಗಿದೆ.