ಕಣಿಪುರ ಸುದ್ದಿಜಾಲ (ಅ.9)
ತಿರುವನಂತಪುರ: ಕೇರಳದ ಮಾಜಿ ಡಿಜಿಪಿ ಆರ್.ಶ್ರೀಲೇಖಾ ಬಿಜೆಪಿಗೆ ಸೇರ್ಪಡೆಗೊಂಡರು. ತಿರುವನಂತಪುರದ ಅವರ ನಿವಾಸ “ಈಶ್ವರ ವಿಲಾಸಂ”ನಲ್ಲಿಂದು ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಬಿಜೆಪಿ ತಿರುವನಂತಪುರಂ ಜಿಲ್ಲಾಧ್ಯಕ್ಷ ವಿ.ವಿ.ರಾಜೇಶ್ ಸಹಿತ ಕಾರ್ಯಕರ್ತರಿದ್ದರು.
ಈ ಸಂದರ್ಭ ಸಿಹಿ ಹಂಚಿ, ಮಾಧ್ಯಮಗಳೊಂದಿಗೆ ಮಾತಾಡಿದ ನಿವೃತ್ತ ಡಿಜಿಪಿ ಶ್ರೀಲೇಖಾ ಅವರು
” ತಾನು 33ವರ್ಷ ನಿಷ್ಪಕ್ಷವಾಗಿ ಪೋಲೀಸ್ ಇಲಾಖೆಯ ನಿರ್ಣಾಯಕ ಹುದ್ದೆಗಳಲ್ಲಿ ಕಳಂಕವಿಲದೇ ಸೇವೆ ಸಲ್ಲಿಸಿದ್ದೇನೆ. ನನ್ನ ಅನುಭವ, ಅರಿವುಗಳ ಹಿನ್ನೆಲೆಯಲ್ಲಿ ನಾನು ಬಿಜೆಪಿಯ ಸೈದ್ಧಾಂತಿಕ ಧೋರಣೆಯನ್ನು ಒಪ್ಪಿ, ಅದರ ಜತೆ ಸೇರಿಕೊಂಡು ಮುನ್ನಡೆಯಲು ಬಯಸಿದ್ದೇನೆ. ನಿವೃತ್ತಿಯ ಬಳಿಕ ವಿಶ್ರಾಂತಿ ಪಡೆಯದೇ ಸಮಾಜಮುಖಿಯಾಗಿ ಕರ್ತವ್ಯ ನಿರತಳಾಗಬೇಕೆಂಬುದೇ ನನ್ನ ಬಯಕೆ. ನಾನು ಯಾವುದೇ ಗುರಿ ಇರಿಸಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ ಮತ್ತು ಹೆಚ್ಚಿನದ್ದೇನನ್ನೂ ಈಗ ಹೇಳಲಾಗಲ್ಲ ಎಂದವರು ನುಡಿದರು.
ಕೇರಳದ ಮಾಜಿ ಡಿಜಿಪಿ ಟಿ.ಪಿ ಸೆನ್ ಕುಮಾರ್ ಹಾಗೂ ಮತ್ತೋರ್ವ ನಿವೃತ್ತ ಡಿಜಿಪಿ ಜೇಕಬ್ ಥಾಮಸ್ ಐಸಾಕ್ ಅವರು ಈಗಾಗಲೇ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಮತ್ತು ಬಿಜೆಪಿ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸಾಲಲ್ಲಿ ಕೇರಳದ ಜನಪ್ರಿಯ ಪೋಲೀಸ್ ಅಧಿಕಾರಿಯಾಗಿದ್ದ ಶ್ರೀಲೇಖಾ ಅವರ ಆಗಮನ ಬಿಜೆಪಿಯ ನೇತೃತ್ವ ವಲಯವನ್ನು ಕೇರಳದಲ್ಲಿ ಬಲಪಡಿಸುತ್ತಿದೆ. ಆರ್.ಶ್ರೀಲೇಖಾ ಅವರನ್ನು ಪಕ್ಷದ ರಾಷ್ಟ್ರೀಯ ನಾಯಕರು ಇತ್ತೀಚಿನ ದಿನಗಳಲ್ಲಿ ಸಂಪರ್ಕಿಸಿದ್ದರೆಂದೂ, ಈ ಹಿನ್ನೆಲೆಯಲ್ಲಿ ಅವರು ಔದ್ಯೋಗಿಕವಾಗಿ ಪಕ್ಷದ ಸದಸ್ಯತ್ವ ಪಡೆದರೆಂದೂ ಹೇಳಲಾಗಿದೆ.
ಸದಸ್ಯತ್ವ ನೀಡುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇರಳಧ ಪಕ್ಷಾಧ್ಯಕ್ಷ ಕೆ.ಸುರೇಂದ್ರನ್ “ಆರ್. ಶ್ರೀಲೇಖಾ ಅವರಂತಹ ನಿವೃತ್ತ ಪೋಲೀಸ್ ಅಧಿಕಾರಿಗಳು ನಮ್ಮ ಪಕ್ಷಕ್ಕೆ ಅತ್ಯಗತ್ಯ, ಅವರ ಸೇವೆಯನ್ನು ಪಕ್ಷ ಬಯಸುತ್ತಿದೆ. ಲೇಖಕಿ, ಕಾದಂಬರಿಗಾರ್ತಿ, ಸಮಾಜಮುಖೀ ಚಿಂತಕಿಯಾದ ಅವರು ಕಳಂಕರಹಿತ ಪೋಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಅವರ ಮಾರ್ಗದರ್ಶನ ನಮಗೆ ಬೇಕಾಗಿದೆ. ನಮ್ಮ ಗುರಿ ಕೇರಳದಲ್ಲೂ ಪಕ್ಷ ಸಂಘಟಿಸಿ, ಅಧಿಕಾರ ಪಡೆಯುವುದೇ ಆಗಿದೆ” ಎಂದರು.