ಕಣಿಪುರ ವಿಶೇಷ ವರದಿ
ಪ್ರಸಿದ್ಧವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಸಾದ ಭೋಜನವನ್ನು ವೈವಿಧ್ಯ ರುಚಿ ಸ್ವಾದಿಷ್ಟತೆಯಿಂದ ನೀಡಲು ನಿರ್ಧರಿಸಲಾಗಿದೆ. ದಿನವೂ ವೈವಿಧ್ಯಮಯವಾಗಿ ವಾರಕ್ಕೆ 10ಬಗೆ ಸವಿರುಚಿಯ ಪಾಯಸ ಮತ್ತು ಸ್ವಾದಿಷ್ಟವಾದ ಸಾಂಬಾರಿಗೆ ಪೌಷ್ಠಿಕಾಹಾರದ 15ಬಗೆ ತರಕಾರಿಗಳನ್ನು ದೈನಂದಿನ ಬಳಸಲು ತೀರ್ಮಾನಿಸಲಾಗಿದೆ. ಈ ಕುರಿತಾದ ವಿವರವಾದ ವರದಿ ಇಲ್ಲಿದೆ….
ಸುಬ್ರಹ್ಮಣ್ಯ: (ಆ.8)
ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಹಾದ ಭೋಜನ ಪ್ರಸಿದ್ಧವಾಗಿದೆ. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾಗುತ್ತಾರೆ. ಆಶ್ರಿತರ ಅನ್ನದಾತ ಸುಬ್ಬಪ್ಪ ಎಂದೇ ಪ್ರತೀತಿ ಪಡೆದ ದೇವಳದಲ್ಲಿ ಇತರ ಸೇವೆಗಳಂತೆ ಬೋಜನ ಪ್ರಸಾದ ಸ್ವೀಕಾರವು ಪವಿತ್ರವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಭೋಜನ ಪ್ರಸಾದದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ
.
ಇದರಿಂದ ಭಕ್ತರಿಗೆ ಪ್ರತಿದಿನವೂ ವಿಶೇಷ ಭೋಜನ ಪ್ರಸಾದ ಸವಿಯುವ ಅವಕಾಶ ಲಭಿಸಿದೆ.ಇದುವರೆಗೆ ವಿಶೇಷ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನ ಒಂದೇ ಬಗೆಯ ಪಾಯಸವನ್ನು ಭಕ್ತರಿಗೆ ನೀಡಲಾಗುತ್ತಿತ್ತು. ಈಗ ಹೊಸ ವ್ಯವಸ್ಥೆಯಡಿ ಪ್ರತಿದಿನವೂ ಭಿನ್ನವಾದ ಪಾಯಸದ ಸ್ವಾದವನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಕಡಲೆಬೇಳೆ, ಹೆಸರು ಬೇಳೆ, ಸಬ್ಬಕ್ಕಿ, ಗೋಧಿ ಕಡಿ, ಹಾಲು, ಅಕ್ಕಿ, ಶ್ಯಾವಿಗೆ, ರವೆ ಮತ್ತು ಸಿರಿಧಾನ್ಯ ಸೇರಿ 10 ಬಗೆಯ ಪಾಯಸವನ್ನು ತಯಾರಿಸಿ, ದಿನವೂ ಭಿನ್ನ ರುಚಿ ಉಣಬಡಿಸಲಾಗುತ್ತಿದೆ. ಸುಬ್ರಹ್ಮಣ್ಯದ ಪ್ರಸಾದ ಭೋಜನವು ಸ್ವಾದಿಷ್ಟ ಮತ್ತು ಅಷ್ಟೇ ಪೌಷ್ಟಿಕವಾಗಿರಬೇಕು ಎಂಬ ಉದ್ದೇಶದಿಂದ ಗುಣಮಟ್ಟದ 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಬಳಸುವಂತೆಯೂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
‘ಅನ್ನದಾತ ಸುಬ್ಬಪ್ಪ’ ಪ್ರತೀತಿಯ ಈ ದೇವಳದಲ್ಲಿ ಪ್ರಸಾದ ವ್ಯವಸ್ಥೆಯಲ್ಲಿ ಈ ಬದಲಾವಣೆಗಳನ್ನು ತಂದವರು ದೇವಳದ ಆಡಳಿತಾಧಿಕಾರಿ ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಮತ್ತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ.ಇವರಿಬ್ಬರ ವಿಶೇಷ ಆಸಕ್ತಿ ಫಲವಾಗಿ ಭೋಜನ ಪ್ರಸಾದವು ಮತ್ತಷ್ಟು ವಿಶೇಷವೆನಿಸಲಿದೆ.ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾರ್ಷಿಕ ಸರಾಸರಿ 55ಲಕ್ಷಕ್ಕೂ ಹೆಚ್ಚು ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ಸಂಪ್ರದಾಯದಂತೆ ಇಲ್ಲಿ ಬಾಳೆ ಎಲೆಯಲ್ಲಿ ಪ್ರಸಾದ ನೀಡಲಾಗುತ್ತದೆ. ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ನೀಡಲಾಗುತ್ತದೆ. ಜಾತ್ರೆ ಸೇರಿದಂತೆ ವಿಶೇಷ ದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸುತ್ತಾರೆ. ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.
ದೇವಸ್ಥಾನದ ಆಡಳಿತ ಮಂಡಳಿ ನಡೆಸುತ್ತಿರುವ ಎರಡು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರತಿದಿನ ದೇವಸ್ಥಾನದ ಪ್ರಸಾದ ಭೋಜನವನ್ನು ವಿತರಿಸಲಾಗುತ್ತದೆ. ಭಕ್ತರಲ್ಲದೆ ಪ್ರತಿದಿನ 3,300 ಮಂದಿ ಇಲ್ಲಿಂದ ಪ್ರಸಾದ ಭೋಜನ ಸ್ವೀಕರಿಸುತ್ತಾರೆ.