ಕಣಿಪುರ ಸುದ್ದಿಜಾಲ
ನೂರು ಗ್ರಾಂ ತೂಕದ ಹೆಸರಲ್ಲಿ ಒಲಿಂಪಿಕ್ ಸ್ಪರ್ಧೆ ಮತ್ತು ಪದಕದ ಕನಸೇ ಭಗ್ನಗೊಂಡ ಕುಸ್ತಿಪಟು ವಿನೇಶ್ ಪೋಗಟ್ ರನ್ನು ಹರಿಯಾಣದ ಜುಲಾನಾ ಜನತೆ ಕೈ ಬಿಡಲಿಲ್ಲ..
ಕುಸ್ತಿಗೆ ವಿದಾಯ ಹೇಳಿ ರಾಜಕೀಯ ಅಖಾಡಕ್ಕಿಳಿದು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಅವರು ಗೆಲುನಗೆ ಬೀರಿದ್ದಾರೆ. ಇದು ಕೇವಲ ವಿನೇಶ್ ಪೋಗಟ್ ಎಂಬ ಅಭ್ಯರ್ಥಿಯ ಗೆಲುವಲ್ಲ, ಆಕೆಯೊಳಗಿನ ಕೆಚ್ಚೆದೆಯ ಹೋರಾಟದ ಗೆಲುವು.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ನಿರೀಕ್ಷೆಗಳನ್ನೂ ಬುಡಮೇಲಾಗಿಸಿ ಮೂರನೇ ಬಾರಿಗೆ ಬಿಜೆಪಿ ಪ್ರಚಂಡ ಗೆಲುವಿನಿಂದ ಅಧಿಕ್ಕಾರಕ್ಕೆ ಸಾಗಿದೆ. ಗೆಲುವಿನ ಆಶಾಭಾವನೆಯಲ್ಲಿದ್ದ ಕಾಂಗೈ ಪತನ ಕಂಡಿದೆ. ಆದರೆ ಹರಿಯಾಣ ವಿಧಾನಸಭೆಯಲ್ಲಿ ವಿನೇಶ್ ಪೋಗಟ್ ಎಂಬ ಹೋರಾಟಗಾರ್ತಿ ಕಾಂಗ್ರೆಸ್ ಧ್ವನಿಯಾಗುವುದು ರಾಜಕೀಯವಾಗಿ ಗಮನೀಯ ಅಂಶ..
ಮತ ಎಣಿಕೆಯ ಆರಂಭದಿಂದಲೇ ದೇಶದ ಗಮನ ಈ ಫಲಿತಾಂಶದ ಮೇಲಿತ್ತು. ಆರಂಭದಲ್ಲಿ ಬಿಜೆಪಿಯ ಯೋಗೇಶ್ ಕುಮಾರ್ ಮುನ್ನಡೆ ಸಾಧಿಸಿದ್ದರಾದರೂ ಅಂತಿಮ ಹಂತದಲ್ಲಿ ವಿನೇಶ್ ಪೋಗಟ್ 5ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಒಲಿಂಪಿಕ್ ನಲ್ಲಿ ಸುರಿಸಿದ್ದ ಕಣ್ಣೀರು ಇಲ್ಲೀಗ ನಗುವಾಗಿ ಮಾರ್ಪಟ್ಟದ್ದೇ ವಿಶೇಷ..
ಹರಿಯಾಣ ಚುನಾವಣೆ ಕಾಂಗೈ – ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿತ್ತು. ಕೃಷಿಕರ ಸತ್ಯಾಗ್ರಹ ಸಹಿತ ಕೇಂದ್ರ ವಿರುದ್ಧ ಆಂದೋಲನಗಳು ಹುಟ್ಟಿದ ನೆಲದಲ್ಲಿ ಬಿಜೆಪಿಗೆ ಗೆಲುವು ಅನಿವಾರ್ಯವಾಗಿತ್ತು. ಆದರೆ ಕಾಂಗೈ ರಣತಂತ್ರ ಕಂಡು ಈ ಚುನಾವಣೆಯಲ್ಲಿ ಮೋದಿ ಪ್ರಭೆ ಮಸುಕಾಗಿದೆಯೆಂದೂ, ಕಾಂಗೈಗೆ ಪುನಶ್ಚೇತನದ ಗೆಲುವು ಒದಗಲಿದೆಯೆಂದೂ ಚುನಾವಣಾ ಪೂರ್ವ ಸಮೀಕ್ಷೆಗಳೇ ನುಡಿದಿತ್ತು. ಆದರೆ ಫಲಿತಾಂಶದಲ್ಲಿ ಕಂಡದ್ದೇ ಬೇರೆ. ಇಂಥ ಗೆಲುವಿನ ನಡುವೆ ಬಿಜೆಪಿ ಪಾಲಿಗೆ ಸೋಲಲೇ ಬೇಕಾಗಿದ್ದ ಅಭ್ಯರ್ಥಿಯಾಗಿದ್ದವರು ಕುಸ್ತಿತಾರೆ ವಿನೇಶ್ ಪೋಗಟ್. ಆದರೆ ಚೊಚ್ಚಲ ಕದನಕಣದಲ್ಲವರು ಬಿಜೆಪಿಗೆ ಸೋಲುಣಿಸಿದ್ದಾರೆ. ಒಂದು ದಶಕದ ಬಳಿಕ ಜುಲಾನಾ ಕ್ಷೇತ್ರವನ್ನು ಮರಳಿ ಕಾಂಗೈ ಗೆದ್ದುಕೊಂಡಿದೆ. ಇನ್ನೇನಿದ್ದರೂ ವಿನೇಶ್ ಪೋಗಟ್ ರ ಕುಸ್ತಿಯಾಟ ಹರಿಯಾಣದ ವಿಧಾನಸಭೆಯಲ್ಲಿ ನೋಡಬೇಕು..ಆದ್ದರಿಂದಲೇ ಇದು ಅಂತಿಂಥ ಗೆಲುವಲ್ಲೋ ಅಣ್ಣಾ, ಇದು ತಿರುಗೇಟಿನ ಮುಷ್ಠಿ ಹೊಡೆತ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.