ಕಣಿಪುರ ಸುದ್ದಿಜಾಲ( ಅ.7)
ತಿರುವನಂತಪುರ: ಮುಂಬರುವ ಮಂಡಲ-ಮಕರ ಮಾಸದ ಶಬರಿಮಲೆ ತೀರ್ಥಾಟನೆಯನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಸಿ ವರ್ಚ್ಯುಲ್ ಕ್ಯೂ ಪಾಲಿಸಿದವರಿಗಷ್ಟೇ ಮಿತಿಗೊಳಿಸಲು ತೀರ್ಮಾನಿಸಿದ ಕೇರಳ ಸರಕಾರದ ಧೋರಣೆಯನ್ನು ವಿ.ಹಿಂ.ಪ ಖಂಡಿಸಿದೆ. ಇದು ತಪ್ಪಾದ ನಿರ್ಧಾರವಾಗಿದ್ದು, ಭಕ್ತಜನ ದಟ್ಟಣೆಯ ಹೆಸರಲ್ಲಿ ವ್ರತಾನುಷ್ಠಾನ ಕೈಗೊಂಡು ದೇಶದ ವಿವಿದೆಡೆಗಳಿಂದ ಬರುವವರ ದರ್ಶನ ಸೌಭಾಗ್ಯವನ್ನೇ ನಿಷೇಧಿಸುವಂತ ಈ ನಿರ್ಧಾರವನ್ನು ಕೂಡಲೇ ರದ್ದುಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕೇರಳ ರಾಜ್ಯ ಕಾರ್ಯದರ್ಶಿ ವಿ.ಆರ್. ರಾಜಶೇಖರನ್ ಒತ್ತಾಯಿಸಿದ್ದಾರೆ.
ಆನ್ಲೈನ್ ವರ್ಚ್ಯುವಲ್ ಕ್ಯೂ ನೋಂದಣಿ ಮಾಡಿದವರಿಗಷ್ಟೇ ದರ್ಶನ ಎಂಬುದು ಅಶಾಸ್ತ್ರೀಯ ವಿಧಾನ. ದೇಶದ ವಿವಿಧ ಕಡೆಗಳಿಂದ ಕಠಿಣ ವ್ರತಾನುಷ್ಠಾನ ಪಾಲಿಸಿ ಬರುವವರೆಲ್ಲ ಆನ್ಲೈನ್ ಬುಕ್ಕಿಂಗ್ ಮಾಡಬಲ್ಲವರೇನಲ್ಲ. ಧರ್ಮಾನುಷ್ಠಾನ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ಆದ್ದರಿಂದ ವ್ರತಾನುಷ್ಠಾನ ಕೈಗೊಂಡವರಿಗೆಲ್ಲಾ ದರ್ಶನ ನೀಡುವಂತೆ ತೀರ್ಮಾನ ಪರಿಷ್ಕರಿಸಲೇಬೇಕು. ಅದಲ್ಲದಿದ್ದರೆ ಹಿಂದೂಗಳ ಪ್ರತಿಭಟನೆ, ಪ್ರತ್ಯಾಘಾತ ಎದುರಿಸಬೇಕಾಗಬಹುದೆಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ
ಸರಕಾರದ ನಿರ್ಧಾರ ಏಕಮುಖಿಯಾಗಿದೆ. ಶಬರಿಮಲೆಯ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ವಿ.ಹಿಂ.ಪ ಸಹಿತ ಹಿಂದೂ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದು ಸಮಾಲೋಚನೆ ನಡೆಸಿಲ್ಲ. ಇಷ್ಟಕ್ಕೂ ಶಬರಿಮಲೆಯನ್ನು ತಿರುಪತಿ ಮೋಡೆಲ್ ಮಾಡಲಾಗದು. ತಿರುಪತಿಯಲ್ಲಿ ಭಕ್ತರಿಗೆ ವರ್ಷವಿಡೀ ದರ್ಶನ ಸೌಲಭ್ಯಗಳಿವೆ. ಆದರೆ ಶಬರಿಮಲೆಯಲ್ಲಿ ವರ್ಷದ ತೀರ್ಥಾಟನಾ ರುತುವಿನಲ್ಲಷ್ಟೇ ಭಕ್ತರಿಗೆ ದರ್ಶನ ಸಿಗುವುದರಿಂದ ಜನದಟ್ಟಣೆಯ ಹೆಸರಲ್ಲಿ ನಿಯಂತ್ರಣ ನಿರ್ಧಾರ ಕೈಗೊಂಡಿರುವುದನ್ನು ಕೂಡಲೇ ಪರಿಷ್ಕರಿಸಬೇಕೆಂದು ವಿಹಿಂಪ ಒತ್ತಾಯಿಸಿದೆ.