ಕಣಿಪುರ ಸುದ್ದಿಜಾಲ (ಅ.7)
ಕಾಸರಗೋಡು: ರಸ್ತೆ ಸಂಚಾರ ನಿಯಮ ಉಲ್ಲಂಘನೆಯ ಹೆಸರಲ್ಲಿ ಪೋಲೀಸರು ವಶಪಡಿಸಿ ಠಾಣೆಯಲ್ಲಿರಿಸಿದ
ಆಟೋ ರಿಕ್ಷಾವನ್ನು ಚಾಲಕನಿಗೆ ಮರಳಿ ನೀಡದಿದ್ದ ಕಾರಣದಿಂದ ಮನನೊಂದ ರಿಕ್ಷಾ ಚಾಲಕರೊಬ್ಬರು ಆತ್ಮಹತ್ಯೆಗೈದ ಬೆಳವಣಿಗೆ ಕಾಸರಗೋಡು ನಗರದಲ್ಲಿ ವರದಿಯಾಗಿದೆ.
ಮೂಲತಃ ಕರ್ನಾಟಕ ನಿವಾಸಿ, ಹಾಗೂ ಕಾಸರಗೋಡು ಪೇಟೆಯಲ್ಲಿ ಆಟೋರಿಕ್ಷಾ ಚಾಲಕನಾಗಿ ಬದುಕುತಿದ್ದ ಅಬ್ದುಲ್ ಸತ್ತಾರ್(46)ಎಂಬವರು ಆತ್ಮಹತ್ಯೆಗೈದ ವ್ಯಕ್ತಿಯಾಗಿದ್ದು, ಇವರು ತಳಂಗರೆ ಮಾರ್ಗದ ರೈಲ್ವೇ ಸ್ಟೇಷನ್ ಸಮೀಪದ ಬಾಡಿಗೆ ಕ್ವಾರ್ಟರ್ಸಿನಲ್ಲಿ ವಾಸಿಸುತ್ತಿದ್ದರು.
ಇವರು ಚಲಾಯಿಸುತ್ತಿದ್ದ ಆಟೋರಿಕ್ಷಾವನ್ನು ನಾಲ್ಕು ದಿನಗಳ ಹಿಂದೆ ಕಾಸರಗೋಡು ಪೇಟೆಯ ಬೀಚ್ ರಸ್ತೆಯ ಗೀತಾ ಟಾಕೀಸ್ ಮುಂಭಾಗದಿಂದ ಪೋಲೀಸರು ವಶಪಡಿಸಿದ್ದರು. ರಸ್ತೆ ಸಂಚಾರ ನಿಯಮ ಉಲ್ಲಂಘನೆಯ ಹೆಸರಲ್ಲಿ ರಿಕ್ಷಾ ವಶಪಡಿಸಿ ಠಾಣೆಗೆ ಕೊಂಡೊಯ್ದಿರಿಸಿದ್ದರು. ಬಳಿಕ ವೈಯ್ಯಕ್ತಿಕವಾಗಿ ಮತ್ತು ರಿಕ್ಷಾ ಚಾಲಕರ ಸಂಘಟನಾ ಪದಾಧಿಕಾರಿಗಳ ಮುಖೇನ ಠಾಣೆಗೆ ತೆರಳಿ ಡ
ಗೋಗರೆದು ಒತ್ತಾಯಿಸಿದರೂ ಠಾಣಾಧಿಕಾರಿ ರಿಕ್ಷಾ ಬಿಡುಗಡೆ ಮಾಡಿ ಕೊಟ್ಟಿರಲಿಲ್ಲ. ಇದರಿಂದಾಗಿ ಮನನೊಂದು, ಖಿನ್ನತೆಯಿಂದ ಆಟೋ ಚಾಲಕ ಸೋಮವಾರ ಸಂಜೆ ರೈಲ್ವೇ ನಿಲ್ದಾಣ ರಸ್ತೆಯ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಂಘಟಿತರಾದ ಆಟೋ ಚಾಲಕರು, ಬಾಡಿಗೆ ಬದಿಗಿಟ್ಟರು. ಬಳಿಕ ನಗರ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಡ ರಿಕ್ಷಾ ಚಾಲಕನ ಆತ್ಮಹತ್ಯೆಗೆ ಪೋಲೀಸರೇ ಕಾರಣರೆಂದು ಧಿಕ್ಕಾರ ಕೂಗಿ, ಪ್ರತಿಭಟಿಸಿದರು. ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ರಿಕ್ಷಾ ಚಾಲಕರ ಪ್ರತಿಭಟನೆ ನಗರ ಠಾಣಾ ಮುಂಭಾಗದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಿಸಿತ್ತು. ರಿಕ್ಷಾ ಚಾಲಕನ ಆತ್ಮಹತ್ಯೆಗೆ ಪೋಲೀಸ್ ದೌರ್ಜನ್ಯದ ವರ್ತನೆಯೇ ಕಾರಣವೆಂಬ ಆರೋಪದ ಹಿನ್ನೆಲೆಯಲ್ಲಿ ತಕ್ಷಣವೇ ಮಾಹಿತಿ ಪಡೆದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಅವರು ತನಿಖಾ ವಿಧೇಯವಾಗಿ ನಗರ ಠಾಣಾಧಿಕಾರಿ ಪಿ. ಅನೂಪ್ ಅವರನ್ನು ಚಂದೇರ ಠಾಣೆಗೆ ವರ್ಗಾಯಿಸಿದ್ದಾರೆ ಮತ್ತು ತನಿಖೆಗೆ ಆದೇಶಿಸಿದ್ದಾರೆ.
ಮೃತ ರಿಕ್ಷಾ ಚಾಲಕ ಸಾಲಕ್ಕೆ ರಿಕ್ಷಾ ಖರೀದಿಸಿ ನಗರದಲ್ಲಿ ಬಾಡಿಗೆ ಮಾಡುತ್ತಾ, ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದರು. ತಾನು ದುಡಿದರೆ ಮಾತ್ರವೇ ಮನೆ ಬಾಡಿಗೆ, ವಾಹನ ಸಾಲ ಸಹಿತ ಊಟೋಪಚಾರ ಒದಗುವ ಹಿನ್ನೆಲೆ ಅವರದ್ದು. ಈ ಮಧ್ಯೆ ರಿಕ್ಷಾ ವಶಪಡಿಸಿದ ಪೋಲೀಸರಿಂದ ರಿಕ್ಷಾ ಬಿಡುಗಡೆಯಾಗಿ ಸಿಗದೇ ಇದ್ದುದರಿಂದ ಅವರು ಮನನೊಂದು ಆತ್ಮಹತ್ಯೆಗೆ ಶರಣಾದರು. ಈ ಕುರಿತು ಪೋಲೀಸರ ವಿರುದ್ಧ ಕೇಸು ದಾಖಲಿಸಬೇಕೆಂದು ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ.