ಕಣಿಪುರ ಸುದ್ದಿಜಾಲ(ಅ.7)
ಏತಡ್ಕ : ” ಬದುಕಿಗೊಂದು ನೆಮ್ಮದಿಯ ತಾಣವೆಂದರೆ ನಮ್ಮ ನೆರೆಯ ದೇವಸ್ಥಾನಗಳು.ಅಂತಹ ಕೇಂದ್ರಗಳ ಸಾನ್ನಿಧ್ಯ ವೃದ್ಧಿಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮ ಕಲಶೋತ್ಸವ ದಲ್ಲಿ ಆಸ್ತಿಕ ಬಂಧುಗಳು ಸಹಕಾರ, ಸಹಭಾಗಿತ್ವ ಮತ್ತು ಸಹಯೋಗಗಳಿಂದ ಯಶಸ್ವೀಗೊಳಿಸ ಬೇಕು ” ಎಂಬುದಾಗಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಪತ್ತಡ್ಕ ಗಣಪತಿ ಭಟ್ ಅವರು ತೃತೀಯ ಅಕ್ಷತಾ ಮಹಾ ಅಭಿಯಾನವನ್ನು ದೀಪ ಜ್ವಾಲನೆಗೈದು ಉದ್ಘಾಟಿಸಿ ಕರೆಯಿತ್ತರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ಮರಣಹೊಂದಿದ ಸಮಿತಿ ಸದಸ್ಯ ರಮೇಶ್ ಟೈಲರ್ ಆನೆಪ್ಪಳ್ಳ ರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಮಿತಿಯ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರರಾದ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿ ಮಹಾ ಅಭಿಯಾನಕ್ಕೆ ಚಾಲನೆ ಇತ್ತು ಅಭಿಯಾನದ ‘ ಕಿಟ್ ‘ ವಿತರಣೆ ಮಾಡಿದರು.
” ದೇವಸ್ಥಾನಗಳು ಸಂಸ್ಕೃತಿಯ ಕೇಂದ್ರಗಳು.ಮುಂದಿನ ಪೀಳಿಗೆಗೆ ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ ನೀಡುವುದು ನಮ್ಮ ಕರ್ತವ್ಯ” ಎಂಬುದಾಗಿ ಅಭಿಯಾನದ ಮುಂಚೂಣಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಜಗದೀಶ ಚಂದ್ರ ಕುತ್ತಾಜೆ ಅಭಿಯಾನ ಸಂದೇಶ ನೀಡಿದರು.
ನಿವೃತ್ತ ಬ್ಯಾಂಕ್ ಉದ್ಯೋಗಿ ಗೋವಿಂದ ನಾಯ್ಕ ಈಳಂತೋಡಿಯವರ ನಿವಾಸದಲ್ಲಿ ಸಭೆ ನಡೆದಿದ್ದು ಮನವಿ ಪತ್ರದ ಪ್ರಥಮ ಸ್ವೀಕಾರವನ್ನು ಪಡೆದರು.
ಚಂದ್ರಶೇಖರ ಏತಡ್ಕ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಕಾರ್ಯಕರ್ತರಾದ ಸುಮಿತ್ ರಾಜ್ ಕೊನೆಯಲ್ಲಿ ಧನ್ಯವಾದಗೈದರು.