ಮುಂಬೈ ಲೆಟರ್..
ದಾಮೋದರ ಶೆಟ್ಟಿ ಇರುವೈಲ್ ಅಂಕಣ ಬರಹ
ಮುಂಬಯಿ ಮಹಾನಗರದೊಳಗೂ ತುಳು ನಿಜಕ್ಕೂ ಸಾಯುತ್ತಿದೆ..!
ತುಳು ಸಂಘಟನೆಯಲ್ಲೆಲ್ಲಾ ಮುದಿ ನಾಯಕರು..!
ಬಹುಷಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಿಂತ ಮುಂಬಾಯಿಯಲ್ಲಿಯೇ ಹೆಚ್ಚು ತುಳು ಸಂಘಗಳಿವೆ. ಬಹಳಷ್ಟು ಹೆಸರಿಗೆ ಕನ್ನಡ ಸಂಘಗಳಾಗಿದ್ದರೂ ಅವು ತುಳುವರಿಂದಲೇ ನಡೆಸಲ್ಪಡುತ್ತಿವೆ. ಬೇಸರದ ವಿಷಯವೆಂದರೆ ಹೆಚ್ಚಿನ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಪದಾದಿಕಾರಿಗಳಾಗಿರುವವರು ಐವತ್ತು ಅರುವತ್ತು ವಯಸ್ಸು ದಾಟಿದವರೇ. ಮುಂದೆ ಇಂತಹ ಸಂಸ್ಥೆಗಳ ಭವಿಷ್ಯ ಅತಂತ್ರವೇ ಹೌದು!!
ಬೊಂಬಾಯಿಯ ಯುವ ಜನತೆ ತುಳು ಭಾಷೆಯಿಂದ ದೂರ ಸರಿಯುತ್ತಿದ್ದಾರೆ. ಅದರಲ್ಲೂ ಭಯ್ಯಾಣಿಯನ್ನೋ, ಮರಾಠಿ ಹೆಣ್ಣನ್ನೋ ಮದುವೆಯಾದರೆ ಮುಗಿದೇ ಹೋಯಿತು. ಮತ್ತೆ ಮನೆಯಲ್ಲಿ ಹಿಂದಿ/ಮರಾಠಿಯದ್ದೇ ಕಾರುಬಾರು. ಬೊಂಬಾಯಿಯಲ್ಲಿ ಹುಟ್ಟಿ ಬೆಳೆದ ಈಗಿನ ಹೊಸ ತಲೆಮಾರು ತುಳು ಭಾಷೆಯನ್ನು ಸ್ಪಷ್ಟವಾಗಿ ಮಾತಾಡಲಾರರು. ಸಾರ್ವಜನಿಕ ಸ್ಥಳದಲ್ಲಿ ಗಟ್ಟಿಯಾಗಿ ತುಳು ಮಾತಾಡಲು ಕೀಳರಿಮೆ ಕೂಡಾ. ಕೆಲವು ಮಕ್ಕಳಿಗಂತೂ ತುಳು ಭಾಷೆಯ ಗಂಧಗಾಳಿಯೂ ತಿಳಿದಿಲ್ಲ. ಇಂತಹ ಮಕ್ಕಳು ತುಳು ಸಂಘಗಳಿಗೆ ಹೋಗುವುದು ವಾರ್ಷಿಕೋತ್ಸವದಂದು ” ಛೋಲೀಕೆ ಪೀಛೇ ಕ್ಯಾ ಹೈ” ಅನ್ನುವ ಹಾಡಿಗೆ ಹೆಜ್ಜೆ ಹಾಕಲು ಮಾತ್ರಾ. ಕೆಲವರಿಗೆ ಅದರಲ್ಲೂ ಸ್ವಲ್ಪ ತಮ್ಮನ್ನು ತಾವು elite ಅಂತ ತಿಳ್ಕೊಂಡವರಿಗೆ ತುಳು ಬಾಷೆಯ ಬಗ್ಗೆ ತೀರಾ ಅವಜ್ಙೆ. ತುಳು ಮಾತಾಡಿದರೆ ಎಲ್ಲಿ ತಮ್ಮನ್ನು ಇತರರು “ಚೀಪ್” ಅಂತ ಭಾವಿಸುತ್ತಾರೋ ಎನ್ನುವ ಭಯ.
ಬೊಂಬಾಯಿಯಲ್ಲಿ “ಎನ್ನ ಮಗಕ್ಕ್ ತುಲು ಸಮ ಬರ್ಪುಜಿ” ಅಂತ ಕೆಲವು ಹೆಂಗಸರು ಕೊಚ್ಚಿ ಕೊಳ್ಳುವಾಗ ಅವರ ಮುಖದಲ್ಲಿ ಕಾಣುವ ಗತ್ತಿನ ಝಲಕ್ ಅನ್ನು ನಾನು ಸ್ಪಷ್ಟವಾಗಿ ಗುರುತಿಸಿದ್ದೇನೆ. ಕೆಲವು ವಿದ್ಯಾವಂತರು, ಕ್ಷಮಿಸಿ ಅಕ್ಷರಾಭ್ಯಾಸ ಇದ್ದವರು ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲಿಷ್ ಮಾತಾಡಿದರೆ, ನನ್ನ ಹಾಗೆ ಅರ್ಧ ಕಲಿತ ಹೆತ್ತವರು ಮಕ್ಕಳಲ್ಲಿ ಹಿಂದಿ ಮರಾಠಿ ಮಾತಾಡುವುದು ಇದೆ. ಆ ಮಟ್ಟಿಗೆ ನನಗೆ ಸಂತೃಪ್ತಿ ಇದೆ, ನನ್ನ ಮಗನಿಗೆ ಶುದ್ಧ ತುಳು ಮಾತಾಡಲು ಕಲಿಸಿದ್ದೇನೆ. ( ಕನ್ನಡ ಕಲಿಸಲು ಸಾಧ್ಯವಾಗಲಿಲ್ಲ, ನನ್ನ ಮನೆಯಾಕೆಗೂ ಕನ್ನಡ ಬರುವುದಿಲ್ಲ). ಮದುವೆಯಾದ ಮೇಲೆ ಮುಂಬಯಿಗೆ ಬಂದ ಕೆಲವು ನಮ್ಮ ಊರಿನ ಹೆಂಗಸರು ಮಾತಾಡುವ ಹಿಂದಿ ದೇವರಿಗೇ ಪ್ರೀತಿ. “ನುಪ್ಪು ಮಾಂಗ್ತಾ ಹೈಕ್ಯಾರೇ?” ಇದು ನನ್ನ ಸಂಬಂಧಿಯೊಬ್ಬಳು ಊಟ ಮಾಡುತ್ತಿರುವ ತನ್ನ ಮಗನಲ್ಲಿ ಮಗನಿಗೆ ಅನ್ನ ಬೇಕೇ ಅಂತ ಕೇಳುವ ಶೈಲಿ.
ಮದುವೆ ಸಮಾರಂಭ ಒಂದರಲ್ಲಿ ಊಟ ಆದ ಮೇಲೆ ತನ್ನ ಎಳೆ ಪ್ರಾಯದ ಮಗನಲ್ಲಿ
, ನೀರು ಕುಡಿಯುವಂತೆ ತಾಯಿ, ಇಂಗ್ಲಿಷ್ ನಲ್ಲಿ ಹೇಳುವುದನ್ನು ಕೇಳಿ – You water drink.
ಬೊಂಬಾಯಿಗರ ತುಳುವಿನಿಂದ ನೀರುಳ್ಳಿ, ಬೊಲ್ಲುಲ್ಲಿ, ಬಾರೆದ ಪರ್ಂದ್ ಇತ್ಯಾದಿ ಶಬ್ದಗಳು ಮರೆಯಾಗಿ, ಕಾಂದ, ಲಸೂನು, ಕೇಲ ಇತ್ಯಾದಿ ಶಬ್ದಗಳು ಬಂದಿವೆ. ಅವುಗಳ ಮೂಲ ತುಳು ಹೆಸರು ಎಂದೋ ಮರೆತು ಹೋಗಿದೆ. ಊರಿನಲ್ಲಿನ ತುಳುವರ ಮಕ್ಕಳಿಗೂ ಕೃಷಿಗೆ ಸಂಬಂಧಿಸಿದ ಉಪಕರಣಗಳಾದ ಉಜ್ಜೆರ್, ಪಲಯಿ, ಉರಬಡು, ಪನೆ ಇತ್ಯಾದಿ ಶಬ್ದಗಳ ಅರ್ಥ ತಿಳಿದೇ ಇಲ್ಲ. ತುಳು ಭಾಷೆ ನಿದಾನಕ್ಕೆ ಸಾಯುತ್ತಿದೆ. ಅದೆಷ್ಟೋ ಶಬ್ದಗಳು ಇಂದು ಬಳಕೆಯಲ್ಲಿಯೇ ಇಲ್ಲ. ‘ಅದೆ’ ಅನ್ನುವ ಪದ ಇಂದು ಎಲ್ಲಿ ಬಳಕೆಯಲ್ಲಿದೆ ಹೇಳಿ? ಮೈರ್, ನಾರಾಂಗಾಯಿ ಇಂತಹ ಶಬ್ದಗಳ ಸ್ಥಾನವನ್ನು ನವಿಲು, ಲಿಂಬೆ ಇತ್ಯಾದಿ ಶಬ್ದಗಳು ಆಕ್ರಮಿಸಿವೆ.
ಕೆಲವೊಮ್ಮೆ ಸ್ಷಷ್ಟ ತುಳು ಬಾರದವರ ಮಾತುಗಳು ಶುದ್ಧ ತುಳು ಬಲ್ಲವರಿಗೆ ಮುಜುಗರ ಉಂಟು ಮಾಡುವುದೂ ಇದೆ. ಒಮ್ಮೆ ಒಬ್ಬರು ಹಿರಿಯರು ಸಂಬಂದಿಕರ ಮನೆಗೆ ಮದುವೆ ಆಮಂತ್ರಣ ಕೊಡಲು ಹೋಗಿದ್ದರು. ಆಗ ಮನೆಯಾಕೆ ಮನೆಯಲ್ಲಿ ಇರಲಿಲ್ಲ, ಮಗ ಒಬ್ಬನೇ ಇದ್ದ. ಹಿರಿಯರು ಅಮ್ಮ ( ಮಮ್ಮಿ) ಎಲ್ಲಿ ಹೋಗಿದ್ದಾರೆ ಅಂತ ಕೇಳುದಾಗ ಮಗ ಕೊಟ್ಟ ಉತ್ತರ- ಮಮ್ಮಿ ಕೂನು ಟೆಷ್ಟ್ ಮಲ್ಪಾವರೆ ಡಾಕ್ಟರ್ ಅಂಕಲ್ ನಡೆ ಪೋತೆರ್. ನಿಜಕ್ಕಾದರೆ ಆಕೆ ರಕ್ತ ಪರೀಕ್ಷೆಗಾಗಿ ಪ್ರಯೋಗಾಲಕ್ಕೆ ಹೋಗಿದ್ದಳು.