ಕಣಿಪುರ ಸುದ್ದಿಜಾಲ( ಅ.5)
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಲಂಚನೀಡಿ, ಬೆದರಿಸಿ ನಾಮಪತ್ರಿಕೆ ಹಿಂತೆಗೆಸಿದ್ದಾರೆಂಬ ಆರೋಪದ ಕೇಸಿನಲ್ಲಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸಹಿತ ಆರು ಮಂದಿ ಬಿಜೆಪಿ ನಾಯಕರನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.
ಕಾಸರಗೋಡು ಸೆಷನ್ಸ್ ನ್ಯಾಯಾಲಯ ಇಂದು ಕೇಸು ಪರಿಗಣಿಸಿ, ಪೋಲೀಸರು ಮತ್ತು ದೂರುದಾತರು ಒದಗಿಸಿದ ಸಾಕ್ಷ್ಯಗಳಲ್ಲಿ ಹುರುಳಿಲ್ಲವೆಂದು ತಿಳಿಸಿ ಆರೋಪಿಗಳನ್ನು ದೋಷಮುಕ್ತರೆಂದು ಘೋಷಿಸಿದರು
ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಇದು ಚುನಾವಣಾ ಸಂದರ್ಭದ ಕಟ್ಟುಕತೆಯಾಗಿದ್ದು, ರಾಜಕೀಯ ಪ್ರೇರಿತವಾಗಿ ಕೇಸು ನೀಡಲಾಗಿತ್ತು. ಈಗ ಸತ್ಯ ಬಯಲಾಗಿದೆ, ಸತ್ಯವೇ ಗೆದ್ದಿದೆ ಎಂದರು.
2021ನೇ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸುರೇಂದ್ರನ್ ಬಿ.ಎಸ್.ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಎಂಬವರನ್ನು ಅಪಹರಿಸಿ, ಒತ್ತೆಯಾಳಾಗಿಟ್ಟು ಬೆದರಿಸಿ ನಾಮಪತ್ರ ಹಿಂತೆಗಿಸಿದ್ದಾರೆಂದೂ, ಇದಕ್ಕಾಗಿ ಎರಡೂವರೆ ಲಕ್ಷ ರೂ ನಗದು ಮತ್ತು ಮೊಬೈಲ್ ಫೋನ್ ಲಂಚ ನೀಡಿದ್ದಾರೆಂದೂ ಎಡರಂಗದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ವಿ. ರಮೇಶನ್ ದೂರು ನೀಡಿದ್ದರು. ಕೆ.ಸುಂದರನ ಹೇಳಿಕೆಯ ಆಧಾರದಲ್ಲಿ ದೂರು ದಾಖಲಾಗಿತ್ತು. ಈ ಕುರಿತು ನ್ಯಾಯಾಲಯಕ್ಕೆ ಹಾಜರಾದ ಕೆ.ಸುಂದರ ಈ ಬೆಳವಣಿಗೆ ಚುನಾವಣಾ ಸಂದರ್ಭದ ಹೇಳಿಕೆಯಾಗಿತ್ತೆಂದು ಹೇಳಿಕೆ ಇತ್ತಿದ್ದರು.
ಬಿಜೆಪಿ ಅಧ್ಯಕ್ಷರ ಹೊರತಾಗಿ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಮಣಿಕಂಠ ರೈ,ಸುರೇಶ್ ಕುಮಾರ್ ಶೆಟ್ಟಿ ಸಹಿತ ಆರು ಮಂದಿ ಬಿಜೆಪಿಗರನ್ನು ಕೇಸಿನಿಂದ ಆರೋಪಮುಕ್ತ ಮಾಡಲಾಗಿದೆ.