ನುರಿತ ದೇವನರ್ತಕ , ತಿಡಂಬ್ ನೃತ್ತ ಕಲಾತಜ್ಞ ಡಾ.ಮಧೂರು ಧನಂಜಯರಿಗೆ ನಾಡೊಲಿದು ಮನ್ನಣೆಯ ಅಂಗೀಕಾರ

by Narayan Chambaltimar

kanipura special
✍️ಎಂ. ನಾ.ಚಂಬಲ್ತಿಮಾರ್

ಅತ್ಯುತ್ತರ ಕೇರಳದ ವೈಶಿಷ್ಠ್ಯಪೂರ್ಣ ಸಾಂಪ್ರದಾಯಿಕ ದೇವಕಲಾ ಪರಿಣತನಿಗೆ ನಾಡೊಲಿದು ಅಂಗೀಕಾರ ಗೌರವ ನೀಡಿದೆ.
ದೇವಳದ ಉತ್ಸವಾದಿ ವಿಶೇಷ ಸಂದರ್ಭಗಳಲ್ಲಿ ನಡೆಯುವ ಬ್ರಹ್ಮವಾಹಕತ್ವದಲ್ಲಿ ವಿಶಿಷ್ಟ ಪರಿಜ್ಞಾನ, ಸಾಧನೆಗಾಗಿ ಕೇರಳದಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ಮಧೂರು ನಿವಾಸಿ, ದೇವನರ್ತಕ ಡಾ. ಧನಂಜಯ ಪಿ.ಕೆ. ಅವರಿಗೀಗ ಷಷ್ಠ್ಯಬ್ದ ಸಂಭ್ರಮ. ಇದೇ ವೇಳೆಗೆ ಹುಟ್ಟೂರಿನಲ್ಲಿ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ಸನ್ಮಾನ ಪಡೆದ ಸಾರ್ಥಕ್ಯ ಅವರದು..

ಮಧೂರು ಯಕ್ಷಕಲಾ ಕೌಸ್ತುಭ ಇದರ 3ನೇ ವಾರ್ಷಿಕದಂಗವಾಗಿ ಇತ್ತೀಚಿಗೆ ಪರಕ್ಕಿಲ ದೇವಳದ ನಟರಾಜ ವೇದಿಕೆಯಲ್ಲಿ ನಡೆದ ಬಯಲಾಟದ ರಂಗಸ್ಥಳದಲ್ಲಿ ಡಾ. ಪಿ.ಕೆ.ಧನಂಜಯರ ಸಾಧನೆ ಮಾನಿಸಿ ಗೌರವಿಸಿ ಸನ್ಮಾನಿಸಲಾಯಿತು. ಇದು ಸಾಧಕ ಧನಂಜಯರಿಗೆ ಸಿಕ್ಕ ಊರ ಮನ್ನಣೆ.

ಕೇರಳದ ಸಾಂಪ್ರದಾಯಿಕ ನೃತ್ತಬಲಿ ಸೇವಾ ಕೈಂಕರ್ಯದಲ್ಲಿ ಪರಿಣಿತರಾದ ಗಡಿನಾಡು ಕಾಸರಗೋಡಿನ ಬ್ರಹ್ಮವಾಹಕರಲ್ಲಿ ಮಧೂರಿನ ಧನಂಜಯರು ತಿಡಂಬ್ ನೃತ್ತ ಪ್ರವೀಣರು. ಕ್ಷೇತ್ರ ಬಲಿಗಳ ವೈವಿಧ್ಯ ಪ್ರಾಕಾರಗಳಲ್ಲಿ ಪರಿಣಿತರಾದ ಇವರ ನಾಲ್ಕು ದಶಕದ ದೇವನರ್ತನಕ್ಕೆ ರಾಜ್ಯ, ರಾಷ್ಟ್ರೀಯ ಅಂಗೀಕಾರಗಳನೇಕ ಒಲಿದು ಬಂದಿದೆ.
ಧನಂಜಯರು ಮಧೂರು ದೇವಳದ ಉದ್ಯೋಗಿ, ಮಧೂರು ನಿವಾಸಿ. ಮಧೂರಿನ ಪಡುಕಕ್ಕೆಪ್ಪಾಡಿ ಮನೆಯ ರುಕ್ಮಿಣಿ – ರಾಮಕೃಷ್ಣ ಭಟ್ಟರ ಪುತ್ರ. ಶಾಲಾ ಶಿಕ್ಷಣದ ಬಳಿಕ ತಂದೆಯ ಜತೆ ಮಧೂರು ದೇಗುಲದ ಸಹಾಯಕ ಕೆಲಸಗಳಿಗೆ ಹೋಗುವಲ್ಲಿಂದಲೇ ದೇವಕೈಂಕರ್ಯದ ಸಹವಾಸ.
1980ರಲ್ಲಿ ಮಧೂರು ಶ್ರೀಮದನಂತೇಶ್ವರನ ಶೀವೇಲಿ ಬಿಂಬವನ್ನು ದಿ. ವೆಂಕಟ್ರಮಣ ಉಪಾಧ್ಯಾಯರು ಕೈಯ್ಯೆತ್ತಿ ನೆತ್ತಿಗೇರಿಸಿ ಹರಸಿದರು. ಅದೇ ಶುಭಾರಂಭ…

ಬಳಿಕ ಪ್ರಸಿದ್ಧವಾದ ಕೇರಳ ತ್ರಿಚ್ಚಂಬರ ಮಹೋತ್ಸವದ ಪಾರಂಪರಿಕ ನೃತ್ತ ಬಲಿ ಸೇವೆ, ಕಳ್ಳಾರು ಶ್ರಿಮಹಾವಿಷ್ಣು ಕ್ಷೇತ್ರದ ನೃತ್ತಬಲಿ ಸೇವೆಯನ್ನು ಪ್ರಪ್ರಥಮಗೈದರು. ಪರಿಣಿತರಿಂದಲೇ ಪ್ರಶಂಸೆ ಪಡೆದರು. ಈ ಪ್ರಾವೀಣ್ಯತೆ ಮಲಬಾರಿನುದ್ದಗಲ ಅನೇಕ ದೇಗುಲಗಳಲ್ಲಿ ಅವರಿಗೆ ಅವಕಾಶಗಳನ್ನೊದಗಿಸಿತು, ಕೀರ್ತಿ ತೊಡಿಸಿತು. ನೃತ್ತಬಲಿಯಲ್ಲಿ ಇವರದ್ದು ತಾದಾತ್ಮ್ಯ ಭಾವದ, ಪ್ರಸನ್ನ ಚಿತ್ತದ ಗೌರವದ ನಡೆ. ಪರಂಪರೆಯ ಹೆಜ್ಜೆಗೆ ತೊಡಕು ಬಾರದ ಹಾದಿ. ಆದ್ದರಿಂದಲೇ ಕೇರಳದ ಕಣ್ಣೂರು ಜಿಲ್ಲೆಯ ಹಲವು ದೇಗುಲಗಳಲ್ಲಿ ಮನ್ನಣೆ ದೊರೆತಿವೆ.
ತಜ್ಞರ ಪ್ರಶಂಸೆ ಸಿಕ್ಕಿದೆ.

ಅತ್ಯುತ್ತರ ಕೇರಳದ ಸನಾತನ ಬ್ರಹ್ಮವಾಹಕತ್ವದ ಅತ್ಯಂತ ವೈಶಿಷ್ಠ್ಯಪೂರ್ಣ ತಿಡಂಬ್ ನೃತ್ತವೆಂಬ ಪ್ರಾಕಾರವನ್ನು ಬೆಂಗಳೂರಿಗೂ ಪರಿಚಯಿಸಿದ ಕೀರ್ತಿ ಇವರದ್ದು. ಬೆಂಗಳೂರು ಗಿರಿನಗರದ ಮಹಾಗಣಪತಿ ಕ್ಷೇತ್ರದಲ್ಲಿ ರಥೋತ್ಸವದೊಂದಿಗೆ ಕೇರಳದ ಸಾಂಪ್ರದಾಯಿಕ ನೃತ್ತ ಬಲಿ, ದರ್ಶನ ಬಲಿ ನಡೆಸಿರುವ ಇವರೊಬ್ಬ ಕ್ರೀಡಾ ಪಟುವೂ ಹೌದು!, 1985ರ ರಾಷ್ಟ್ರೀಯ ಕ್ರೀಡೋತ್ಸವ, ಗಜಮೇಳದಲ್ಲೂ ಪಾಲ್ಗೊಂಡು ಸಾಧನೆ ಮಾಡಿದ್ದಾರೆ.

ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ ಹಿಂದೆ ನಡೆಯುತ್ತಿದ್ದ ತೆಪ್ಪೋತ್ಸವ ಸಹಿತವಾದ ದೇವರ ನೃತ್ತಬಲಿಯನ್ನು ಜಾತ್ರಾ ಸಂದರ್ಭದಲ್ಲಿ ಕಂಡುಂಡವರಿಗೆ ಅದರಲ್ಲಿ ಧನಂಜಯರ ಪ್ರತಿಭೆ ಸ್ಮರಣೀಯ ಚಿತ್ರ. ಎಡನೀರು ಮಠ, ಬೇಕಲಕೋಟೆ ಮುಖ್ಯಪ್ರಾಣ ಸನ್ನಿಧಿ, ಸೇರಿದಂತೆ ಗಡಿನಾಡಿನ 40ಕ್ಕೂ ಅಧಿಕ ದೇಗುಲಗಳಲ್ಲಿ ನಾಲ್ಕು ದಶಕಗಳಿಂದ ನೃತ್ತಬಲಿ ದರ್ಶನ ನೀಡಿರುವ ಇವರು ಬ್ರಹ್ಮವಾಹಕರಾಗಿ ಕೇರಳೀಯ ಸಂಪ್ರದಾಯದ ಪ್ರಾವೀಣ್ಯತೆ ಸಾಧಿಸಿರುವುದು ನಾಡಿಗೆ ಹೆಮ್ಮೆ.

🟢 ಗಡಿನಾಡ ಸಾಧಕನಿಗೆ ಕೇರಳದ ಪುರಸ್ಕಾರ

ಇವರ ಕೊಡುಗೆ ಮಾನಿಸಿ ಕೇರಳದ ಪರಂಪರೆಯ “ಪೈತೃಕೋತ್ಸವಂ” ಪುರಸ್ಕಾರ, ಕೇರಳ ಜಾನಪದ ಅಕಾಡೆಮಿ ಪುರಸ್ಕಾರ, ಕ್ಷೇತ್ರಕಲಾ ಪುರಸ್ಕಾರ, ಅಖಿಲ ಕೇರಳ ವರ್ತಕರ ಸಂಘದ ನಟನಾರತ್ನ ಬಿರುದು, ಅಖಿಲ ಕೇರಳ ಶಿವಳ್ಳಿ ಬ್ರಾಹ್ಮಣ ಸಭಾದ ‘ದೇವನರ್ತಕ’ ಬಿರುದು ಪಡೆದಿರುವ ಇವರಿಗೆ ಕಲ್ಕತ್ತಾ ವಿಶ್ವವಿದ್ಯಾನಿಲಯ ಮಹಾನ್ ಸಾಧಕ ಬಿರುದಿತ್ತಿದೆ. ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಓರಿಯೆಂಟಲ್ ಹೆರಿಟೇಜ್ ಗೌರವ ಡಾಕ್ಟರೇಟ್ ನೀಡಿದೆ. ಕ್ಷೇತ್ರ ಆರಾಧನಾ ಕಲೆಯಾದ ನೃತ್ತಬಲಿ ಯೊಂದಿಗೆ ಅಂಗೀಕಾರ,ಮನ್ನಣೆಗಳ ಸಾಧನಾಪರ್ವತ ಏರಿರುವ ಧನಂಜಯರು ಗಡಿನಾಡಿನ ಮಧೂರಿನವರಷ್ಟೇ ಅಲ್ಲ, ಕೇರಳದ ಕ್ಷೇತ್ರಕಲಾ ತಜ್ಞತೆ ಪಡೆದ ಗಡಿನಾಡ ಕನ್ನಡಿಗ.

🟣 ಬಹುಮುಖೀ ಪ್ರತಿಭೆ
ಧನಂಜಯರು ಬಹುಮುಖೀ ಸಾಧಕರು. ಯಕ್ಷಗಾನ ಪ್ರೇಮಿ. ಆಟ,ಕೂಟಗಳ ಪ್ರವೀಣರು. ಯಕ್ಷಗಾನದಲ್ಲವರು ಕೂಡ್ಳು ನಾರಾಯಣ ಬಲ್ಯಾಯ, ದಿವಾಣ ಶಿವಶಂಕರ ಭಟ್ಟರ ಶಿಷ್ಯ. ಜತೆಗೆ ನಾಟಕ, ಕಬಡಿ, , ಚದುರಂಗದ ಕಲಾ,ಕ್ರೀಡಾ ಪಟು.
ಕೇರಳದ ತಿಡಂಬ್ ನೃತ್ತ, ಕಾಸರಗೋಡು ಭಾಗದ ದರ್ಶನಬಲಿ, ರಥೋತ್ಸವ ಬಲಿ, ಪಾರಂಪರಿಕ ಕಾಳೀಯಮರ್ದನ ನೃತ್ತ, ದೇವರ ಮೂರ್ತಿ ಅಲಂಕಾರಗಳಲ್ಲಿ ಸಿದ್ಧಿಯಿಂದಲೇ ಪ್ರಸಿದ್ದರಾದ ಇವರೊಬ್ಬರು ತಜ್ಞ, ಸಂಪನ್ಮೂಲ ವ್ಯಕ್ತಿ.

ತಿಡಂಬ್ ಎಂದರೇನು?
ದೇವರ ಬಲಿಮೂರ್ತಿಯನ್ನು ಕೇರಳದಲ್ಲಿ ತಿಡಂಬ್ ಎನ್ನುತ್ತಾರೆ. ಕ್ಷೇತ್ರೋತ್ಸವ ಸಂದರ್ಭಗಳಲ್ಲಿ ಭಕ್ತಜನ ದರ್ಶನಕ್ಕಾಗಿ ನಡೆಯುವ ಬಲಿಉತ್ಸವದಲ್ಲಿ ದೇವ ದರ್ಶನ ನೀಡುವುದೇ ಇದರ ವೈಶಿಷ್ಟ್ಯ. ಇದು ಬೇರೆ, ಬೇರೆ ಪ್ರದೇಶಕ್ಕೆ ಬೇರೆ, ಬೇರೆ ಸಾಂಪ್ರದಾಯಿಕ ಶೈಲಿಯನ್ನು ಹೊಂದಿದೆ.
ಕೇರಳದ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ ಈ ದೇವನರ್ತನ ಸಂಪ್ರದಾಯಕ್ಕೆ ಸುಮಾರು 600ವರ್ಷಗಳ ಹಿನ್ನೆಲೆ ಅಂದಾಜಿಸಲಾಗಿದೆ. ದೇವರ ಬಲಿಬಿಂಬವನ್ನು ತಲೆಗೇರಿಸಿ ಒಂದು ಕೈಯ್ಯಲ್ಲಿ ಮುದ್ರೆಗಳನ್ನು ಅಭಿವ್ಯಕ್ತಿಸುತ್ತಾ ಸಾಗುವ ಬ್ರಹ್ಮವಾಹಕತ್ವದಲ್ಲಿ ನಡೆದು ಸಾಗುವಂತೆಯೇ ಓಡುವ ಬಲಿಯೂ ಇದೆ, ಕುಣಿದು ನರ್ತಿಸುವ ಬಲಿಯೂ ಇದೆ. ಕಾಲಾನುಕಾಲಕ್ಕೆ ಪರಿಷ್ಕಾರಗೊಂಡ ಈ ಕ್ಷೇತ್ರಕಲಾ ವೈಶಿಷ್ಟ್ಯ ನಮ್ಮ ಪರಂಪರೆಯ ಧ್ಯೋತಕ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00