ಕಣಿಪುರ ಸುದ್ದಿಜಾಲ( ಆ.3)
ಬದಿಯಡ್ಕ : ದಶಮಾನೋತ್ಸವ ಸಂಭ್ರಮದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆ ನವರಾತ್ರಿ ನಾಡಹಬ್ಬದ ಪರ್ವಕಾಲದಲ್ಲಿ ಗಡಿನಾಡು ಕಾಸರಗೋಡು ತಾಲೂಕಿನ ಹತ್ತೆಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಾ ಯಕ್ಷಪಯಣ ನಡೆಸುತ್ತಿದೆ. ರಂಗಸಿರಿಯ ದಸರಾ ಯಕ್ಷಪಯಣಕ್ಕಿಂದು ಸಂಜೆ (ಅ.3) 6.30ಕ್ಕೆ ಕೇರಳ- ಕರ್ನಾಟಕ ಗಡಿಯ ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಸದನದಲ್ಲಿ ನಾಂದಿಯಾಗಲಿದೆ. ಈ ಮೂಲಕ ರಂಗಸಿರಿಯ ಎಳೆಯ ಪ್ರತಿಭೆಗಳು ಸದ್ದಿಲ್ಲದೇ ಕಾಸರಗೋಡಿನಲ್ಲಿ ಯಕ್ಷಪಯಣದ ಯಕ್ಷೋತ್ಸವ ನಡೆಸುತ್ತಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬ್ಳೆ ಸೀಮೆ ತೆಂಕಣ ಯಕ್ಷಗಾನದ ತವರೂರು ಎಂದೇ ಕರೆಸಿಕೊಂಡರೂ ಈ ನೆಲದಲ್ಲೀಗ ಮಣ್ಣಿನ ಕಲೆ ಯಕ್ಷಗಾನಕ್ಕೆ ಪೋಷಣೆ, ಪ್ರೋತ್ಸಾಹದ ಕೊರತೆ ಎದುರಿಸುತ್ತಿದೆ. ಈ ಸವಾಲಿನ ನಡುವೆ ಗಡಿನಾಡಿನ ನೆಲದಲ್ಲಿ ಸತತ 10ದಿನ ವಿವಿದೆಡೆ ಯಕ್ಷಗಾನ ಪ್ರದರ್ಶಿಸಿ, ನೆಲಮೂಲದ ಕಲೆಯನ್ನು ಎಳೆ ಪೀಳಿಗೆಗೆ ಕೈದಾಟಿಸುತ್ತಾ, ಎಳೆಯರನ್ನು ರೂಪಿಸಿ ವೇದಿಕೆ ನೀಡುತ್ತಾ ಕಲಾಪಯಣ ಕೈಗೊಂಡಿರುವುದು ಶ್ಲಾಘನೀಯವೆಂದು ‘ರಂಗಸಿರಿ’ ನಾಗರಿಕ ಪ್ರಶಂಸೆ ಪಡೆಯುತ್ತಿದೆ.
ಆ.3ರಂದು ಸಂಜೆ 6.30ಕ್ಕೆ ಶುಳುವಾಲಮೂಲೆ ಶ್ರೀಸದನದಲ್ಲಿ ಸುಂದೋಪಸುಂದ-ವಾಲಿಮೋಕ್ಷ ಪ್ರಸಂಗ ಪ್ರದರ್ಶನವಾಗಲಿದೆ. 4ರಂದು ಸಂಜೆ ನಾಯ್ಕಾಪು ಮುಂಡಪಳ್ಳದ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಬ್ರುವಾಹನ – ವೀರವರ್ಮ ಕಾಳಗ ಪ್ರದರ್ಶನವಾಗಲಿದೆ.
5ರಂದು ಸಂಜೆ ಜೋಡುಕಲ್ಲು ದುರ್ಗಾಲಯದಲ್ಲಿ ಲವಣಾಸುರ-ವೀರಮಣಿ ಕಾಳಗ ಪ್ರಸ್ತುತಗೊಂಡರೆ, 6ರಂದು ಬಾಯಾರು ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಅಂಧಕ ಮೋಕ್ಷ-ಸುಧನ್ವ ಮೋಕ್ಷ , 7ರಂದು ಸಂಜೆ ಶುಳುವಾಲಮೂಲೆ ಶ್ರೀಸದನದಲ್ಲಿ ಪಾರಿಜಾತಾಪಹಾರ-ಹಂಸಡಿಬಿಕ ಕಾಳಗ ಪ್ರದರ್ಶನವಾಗಲಿದೆ.
8ರಂದು ಸಂಜೆ ಅಗಲ್ಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶಕಟಾಸುರ,ಕಂಸವಧೆ ಪ್ರಸಂಗ ಪ್ರದರ್ಶನವಾಗಲಿದೆ.
9ರಂದು ಸಂಜೆ 4ರಿಂದ ಬದಿಯಡ್ಕ ರಾಮಲೀಲಾ ಯೋಗಕೇಂದ್ರದಲ್ಲಿ ತಾಳಮದ್ದಳೆ, 10ರಂದು ಮಧ್ಯಾಹ್ನ 12.30ರಿಂದ ಮಧೂರು ಕಾಳಿಕಾಂಬಾ ಮಠದಲ್ಲಿ ಮೀನಾಕ್ಷಿ ಕಲ್ಯಾಣ,
11ರಂದು ಕುಂಜರಕಾನ ದುರ್ಗಾಪರಮೇಶ್ವರಿ ದೇಗುಲದಲ್ಲಿ ಮಧ್ಯಾಹ್ನ 12ರಿಂದ ಏಕಾದಶಿ ದೇವಿ ಮಹಾತ್ಮೆ, 12ರಂದು ಅಗಲ್ಪಾಡಿ ದೇವಳದಲ್ಲಿ ರಾತ್ರಿ 7.30ರಿಂದ ಲವಣಾಸುರ-ವೀರಮಣಿಕಾಳಗ ಪ್ರದರ್ಶನವಾಗಲಿದೆ.
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯರ ಶಿಕ್ಷಣ ಮತ್ತು ನಿರ್ದೇಶನದಲ್ಲಿ ರೂಪುಗೊಂಡ ರಂಗಸಿರಿಯ ಕಲಾಪ್ರತಿಭೆಗಳು ದಿನವೂ ವೈವಿಧ್ಯ ಪ್ರಸಂಗಗಳನ್ನು ಪ್ರದರ್ಶಿಸುವುದು ವೈಶಿಷ್ಠ್ಯ. ಅಧ್ಯಾಪಕ ಶ್ರೀಶ ಪಂಜಿತ್ತಡ್ಕ ಅವರ ಸಂಚಾಲಕತ್ವದಲ್ಲಿ ರಂಗಸಿರಿ ಯಕ್ಷಗಾನ ಸಹಿತ ಸಾಂಸ್ಕೃತಿಕ ಶಿಕ್ಷಣ ನೀಡುತ್ತಿದ್ದು ಒಂದು ತಲೆಮಾರನ್ನು ಗಡಿನಾಡಿನ ಸಾಂಸ್ಕೃತಿಕ ಹಿನ್ನೆಲೆಯಿಂದ ರೂಪಿಸಿದೆ.