ಕಣಿಪುರ ಸುದ್ದಿಜಾಲ ( ಅ 2)
ಕೊಡಗು/ ಕಾಸರಗೋಡು: ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ 3ಕೋಟಿಗೂ ಅಧಿಕ ಬೆಲೆಬಾಳುವ ಹೈಡ್ರೋ ಗಾಂಜಾ ಸಹಿತ ಒಟ್ಟು ಏಳು ಮಂದಿಯನ್ನು ಮಡಿಕೇರಿಯ ಗೋಣಿಕೊಪ್ಪಲಿನಿಂದ ಕೊಡಗು ಪೋಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಡಗು ಜಿಲ್ಲೆ ಕೇಂದ್ರೀಕರಿಸಿ ಬ್ಯಾಂಕಾಂಕ್ ಮತ್ತು ದುಬೈ ನಡುವೆ ಸಾಗಾಟವಾಗುತ್ತಿದ್ದ ಬೃಹತ್ ಮಾದಕ ವಸ್ತು ಸಾಗಾಟ ದಂಧೆಯನ್ನು ಬೇಧಿಸಿರುವುದಾಗಿ ಕೊಡಗು ಜಿಲ್ಲಾ ಪೋಲೀಸ್ ವರಿಷ್ಠ ಕೆ.ರಾಮರಾಜನ್ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯ ಹೆಗ್ಗಳ ಗ್ರಾಮದ ನಾಸಿರುದ್ದೀನ್ (26), ಏಡಪಾಲ ದ ಯಾಹಿಯಾ ಸಿ.ಎಚ್(28), ಕುಂಜಿಲ ಗ್ರಾಮದ ಅಕನಾನ್ (26), ಬೇಚೋಳಿ ಗ್ರಾಮದ ವಾಜೀದ್( 26), ಮತ್ತು ಕೇರಳದ ಕಣ್ಣೂರಿನ ರಿಯಾಜ್(44), ಕಾಸರಗೋಡಿನವರಾದ ಮೆಹರೂಫ್(37) , ರೌಫ್(26) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಕಾರು ಸಹಿತ 3ಕೋಟಿ ರೂ ಅಧಿಕ ಬೆಲೆಬಾಳುವ 3.31 ಕೆ.ಜಿ ತೂಕದ ಹೈಡ್ರೋ ಗಾಂಜಾ ವಶಪಡಿಸಲಾಗಿದೆ. ಇದೊಂದು ಬೃಹತ್ ಜಾಲವಾಗಿದ್ದು ಇದರಲ್ಲಿ ಇನ್ನನೇಕರು ಸೆರೆ ಸಿಗಲಿದ್ದಾರೆ. ತನಿಖೆಗೆ ತೊಡಕಾಗುವ ಕಾರಣದಿಂದ ಹೆಚ್ಚಿನ ಮಾಹಿತಿ ಪೋಲೀಸರು ನೀಡಿಲ್ಲ
🔷 ಕೇರಳ ನಂಟು ಬಯಲು..!
ಥಾಯ್ಲೇಂಡಿನ ಬ್ಯಾಂಕಾಂಕ್ ನಗರದಲ್ಲಿ ಕೆಫೆ ನಡೆಸುವ ಕಾಸರಗೋಡು ಮೂಲದ ವ್ಯಕ್ತಿಯೊಬ್ಬರು ಕಾಸರಗೋಡು, ಕಣ್ಣೂರಿನ ವ್ಯಕ್ತಿಗಳ ಮೂಲಕ ಕೊಡಗಿಗೆ ಈ ಮಾದಕ ವಸ್ತು ತಲುಪಿಸಿ, ದಾಸ್ತಾನಿಟ್ಟು ಬಳಿಕ ದುಬೈಗೆ ಸಾಗಿಸುವ ದಂಧೆಯಲ್ಲಿ ನಿರತನಾಗಿದ್ದನು. ಈ ಕುರಿತು ದೊರೆತ ಪೂರ್ವ ಸುಳಿವಿನಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕ ರಾಜ್ಯ ವ್ಯಾಪಕ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅನೇಕ ಕಡೆಗಳಲ್ಲಿ ಬೃಹತ್ ಮಾದಕ ಭೇಟೆ ನಡೆದಿದೆ.
ಏನಿದು..
ಹೈಡ್ರೋಪೋನಿಕ್ ಗಾಂಜಾ?
ಕೃತಕ ಬೆಳಕನ್ನು ಬಳಸಿ, ಹವಾನಿಯಂತ್ರಿಕ ಕೊಠಡಿಯಲ್ಲಿ ಬೆಳೆಯುವ ಹೈಡ್ರೋ ಗಾಂಜಾ ಬ್ಯಾಂಕಾಕ್‌ನಲ್ಲಿ ಸುಲಭವಾಗಿ ಸಿಗುತ್ತಿದೆ. ಇದನ್ನು ಶ್ರೀಮಂತರು ಮಾತ್ರವೇ ದುಬಾರಿ ಬೆಲೆ ನೀಡಿ ಬಳಸುತ್ತಾರೆ. ಸದ್ಯ, ಆರೋಪಿಗಳು ಸ್ಥಳೀಯರಿಗೆ ಮಾರಾಟ ಮಾಡುವ ವಿಷಯ ಗೊತ್ತಾಗಿಲ್ಲ. ಇವರೆಲ್ಲರೂ ಬ್ಯಾಂಕಾಕ್‌ನಿಂದ ತಂದ ಮಾದಕವಸ್ತುವನ್ನು ಇಂಡಿಯಾ ಏಪೋರ್ಟ್‌ಗಳ ಮೂಲಕ ಪ್ರವಾಸಿಗರ ಸೋಗಿನಲ್ಲಿ ದುಬೈಗೆ ಸಾಗಾಣಿಕೆ ಮಾಡುವ ಸಲುವಾಗಿ ಕೊಡಗಿನ ಗೋಣಿಕೊಪ್ಪಲಿನ ಮನೆಯೊಂದರಲ್ಲಿ ಇಟ್ಟಿದ್ದರು. ಬಳಿಕ ಗೋಣಿಕೋಪ್ಪದಿಂದ ಮಡಿಕೇರಿಗೆ ತರುವಾಗ ಮಡಿಕೇರಿ ನಗರದ ಪೋಲಿಸರು 5 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಹಾಗೂ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಕೇರಳದ ಮೆಹರೂಫ್ ಎಂಬಾತನನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.
ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕವೇ ಆರೋಪಿಗಳು ಈ ಮಾದಕ ವಸ್ತುವನ್ನು ತರುತ್ತಿದ್ದ ವಿಷಯ ತನಿಖೆಯಲ್ಲಿ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿರುವ ಕೆಲವೊಂದು ತಾಂತ್ರಿಕ ದೋಷಗಳಿಂದ ಇವರು ಅಲ್ಲಿ ಸಿಕ್ಕಿ ಬೀಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ಮಂದಿಗಳು ಭಾಗಿಯಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಥಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ ಆತಂಕ ಮೂಡಲು ಕಾರಣವಾಗಿದೆ