ಕಣಿಪುರ ಸುದ್ದಿಜಾಲ (ಅ.2)
ಮಂಗಳೂರು: ನಿಷೇಧಿತ ಎಂಡಿಎಂಎ ಮಾದಕವಸ್ತು ಸಾಗಾಟ ಮತ್ತು ಮಾರಾಟದಲ್ಲಿ ನಿರತರಾದ ಮಂಜೇಶ್ವರ ಪರಿಸರದ ಐವರನ್ನು ಮಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.
ಮಂಜೇಶ್ವರದ ಬೆಂಗ್ರೆ ನಿವಾಸಿ ಅಬ್ದುಲ್ ಶಾಕೀರ್(24), ಉದ್ಯಾವರ ನಿವಾಸಿ ಹಸನ್ ಆಶೀರ್(34), ಕಣ್ಣೂರ್ ಪೆರಿಂಗಾಂ ನಿವಾಸಿ ರಿಯಾಜ್ (31), ವರ್ಕಾಡಿ ಪಾವೂರಿನ ಮೊಹಮ್ಮದ್ ನೌಷಾದ್(21), ಕುಂಜತ್ತೂರಿನ ಯಾಸೀನ್ ಇಮ್ರಾಜ್ ಯಾನೆ ಇಂಬು(35) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 70ಗ್ರಾಂ ತೂಕದ 3.50ಲಕ್ಷ ರೂ ಮೌಲ್ಯದ ಎಂಡಿಎಂಎ ಮಾದಕ ವಸ್ತು, 5 ಮೊಬೈಲ್ ಮತ್ತು 1,460ರೂ ನಗದು ಮತ್ತು ಡಿಜಿಟಲ್ ತೂಕಮಾಪಕ ವಶ ಪಡಿಸಲಾಗಿದೆ. ಒಟ್ಟು ವಶಪಡಿಸಿದ ಸೊತ್ತು 4.50ಲಕ್ಷರೂಗಳೆದ್ದೆಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಮಾದಕವಸ್ತು ಪೂರೈಸುತ್ತಿದ್ದ ಈ ಜಾಲದ ಕುರಿತು ಪೂರ್ವ ಸುಳಿವು ದೊರೆತ ಹಿನ್ನೆಲೆಯಲ್ಲಿ ಕೋಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿಂದ ಸಿಸಿಬಿ ಪೋಲೀಸ್ ದಳ ಆರೋಪಿಗಳನ್ನು ಬಂಧಿಸಿದರು.
ಉಪ್ಪಳ, ಮಂಜೇಶ್ವರ ಮತ್ತು ದ.ಕ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ,ಸಾಗಾಟ ಮಾಡುವ ಜಾಲದ ಕೊಂಡಿಗಳು ಇವರಾಗಿದ್ದು, ಇವರಿಗೆ ಮಾದಕವಸ್ತು ಪೂರೈಸುವ ಜಾಲ ಬೇರೆಯೇ ಇರುವುದಾಗಿ ಪೋಲೀಸರು ಶಂಕಿಸಿದ್ದಾರೆ. ಬಂಧಿತರು ಐಷಾರಾಮಿ ಭೋಗಜೀವನದ ಚಟದಿಂದ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರೆಂದು ಪೋಲೀಸರು ತಿಳಿಸಿದ್ದಾರೆ.