ಎಲ್ಲಾ ವೈದ್ಯರನ್ನು ಜತೆ ಸೇರಿಸಿ ಸಂಘಟನೆ ಬಲಪಡಿಸುವುದೇ ಮೊದಲ ಗುರಿ :ಡಾ.ಹರಿಕಿರಣ್ ಬಂಗೇರ

ಕಾಸರಗೋಡು ಐಎಂಎ ಘಟಕದ ನೂತನ ಅಧ್ಯಕ್ಷರನ್ನು ಕಾದಿದೆ ಸಂಘಟನಾ ಸವಾಲು..!

by Narayan Chambaltimar

ಕಣಿಪುರ ಸುದ್ದಿಜಾಲ

🟩 ವೈದ್ಯರುಗಳಿಗೆ ವರ್ತಮಾನ ಜಗತ್ತಲ್ಲಿ ಸಾಮಾಜಿಕ ಸುರಕ್ಷೆಯೊಂದಿಗೆ ಸಮಾಜದ ಬೆಂಬಲ ಮತ್ತು ಸಂಘಟಿತ ಶಕ್ತಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಐ.ಎಂ.ಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ಘಟಕವನ್ನು ಬಲಿಷ್ಠ ಪಡಿಸುವುದೇ ನನ್ನ ಮೊದಲ ಗುರಿ. ಸದಸ್ಯತ್ವ ಪಡೆದ ಎಲ್ಲಾ ವೈದ್ಯರುಗಳನ್ನು ಐಎಂಎ ಘಟಕದಲ್ಲಿ ಸಕ್ರಿಯರಾಗಿಸುತ್ತಾ, ಹೊಸ ಸದಸ್ಯರನ್ನು ಜೋಡಿಸುತ್ತಾ, ವೈದ್ಯರ ಉದ್ಯೋಗ ಸಮಸ್ಯೆಗಳಿಗೆ ಸಂಘಟನಾತ್ಮಕ ಪರಿಹಾರ ಕಾಣುವುದೇ ಮುಖ್ಯ ಗುರಿ ಎಂದು ಕಾಸರಗೋಡು ಐಎಂಎ ನಗರ ಘಟಕದ ನೂತನ ಅಧ್ಯಕ್ಷರಾಗಿ ನಿಯುಕ್ತರಾದ ಡಾ. ಹರಿಕಿರಣ್ ಬಂಗೇರ ನುಡಿದರು.

ಐಎಂಎ ಕಾಸರಗೋಡು ಘಟಕ ಅಧ್ಯಕ್ಷರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ “ಕಣಿಪುರ ಡಿಜಿಟಲ್ ಮೀಡಿಯ” ಜತೆ ಮಾತಾಡಿದ ಅವರು ವೈದ್ಯರ ಸಂಘಟನೆಯಾದ ಐಎಂಎ ಕ್ರಿಯಾತ್ಮಕವಾಗಿ ಬಲಿಷ್ಠತೆ ಹೊಂದಿರುವುದು ಕೇರಳದಲ್ಲಿ. ಇಲ್ಲಿ ಎಲ್ಲರಿಗೂ ಸಂಘಟನೆಯ ಅಗತ್ಯ, ಅನಿವಾರ್ಯತೆಯ ಮಹತ್ವ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದ ಐಎಂಎ ಘಟಕಗಳಿಗೆ ರಾಷ್ಟ್ರೀಯ ಮನ್ನಣೆ ಇದೆ. ಇಂಥ ಸಂಘಟನೆಯ ಘಟಕದ ಸಾರಥ್ಯ ವಹಿಸುವುದು ನನಗೆ ಸಂಭ್ರಮವೇ ಹೌದು ಎಂದರು ಡಾ. ಹರಿಕಿರಣ್ ಬಂಗೇರ.

🔴 ಜನ್ಮಜಾತ ಕಲಾವಿದ. ಡಾ. ಬಂಗೇರ

🟦 ನೂತನ ಅಧ್ಯಕ್ಷ ಪದವಿಗೇರಿದ ಡಾ. ಹರಿಕಿರಣ ಬಂಗೇರರು ಕೇರಳ-ಕರ್ನಾಟಕ ಗಡಿಯ ವರ್ಕಾಡಿಯವರು. ಕೈರಂಗಳದ ಪ್ರಾಥಮಿಕ ಶಾಲೆಯಲ್ಲಿ ಓದಿದವರು. ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲೆ, ಕಾಲೇಜಲ್ಲಿ ಉನ್ನತ ಶಿಕ್ಷಣ ಪಡೆದವರು. ತದನಂತರ ಮಂಗಳೂರು ಕೆ.ಎಂ.ಸಿಯಿಂದ ವೈದ್ಯಕೀಯ ಶಿಕ್ಷಣ ಪಡೆದವರು.
ಬಳಿಕ 2ಸಾವಿರದ ಇಸವಿಯಿಂದ ಆರರ ತನಕ ಕಾಸರಗೋಡಿನ ತಳಂಗರೆ ಮಾಲಿಕ್ ದೀನಾರ್ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಸೇವೆ ಆರಂಭಿಸಿದರು.
ಆ ಬಳಿಕ 2006ರಿಂದ 2024ರ ಈ ವರೆಗೂ ಚೆಂಗಳ ಇ.ಕೆ.ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಇವರು ನಾಡಿನ ಜನಮನ ಗೆದ್ದ, ರೋಗಿಗಳ ಪಾಲಿಗೆ ದೀನಬಂಧುವಾದ ಮಮತಾಮಯಿ ವೈದ್ಯರೆಂದೇ ಜನಾದರಣೀಯರು

ಬಂಗೇರ ಡಾಕ್ಟ್ರು ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಕೈರಂಗಳ ಪರಿಸರ ಎಂದರೆ ಅದು ಯಕ್ಷಗಾನವೇ ಉಸಿರಾದ ಮಣ್ಣು. ಅಲ್ಲಿ ಗ್ರಾಮೀಣರೊಂದಿಗೆ ನಾಟಕ, ಬಯಲಾಟ ನೋಡಿ ಬೆಳೆದರು, ರೂಪುಗೊಂಡರು. ಸಹಜವಾಗಿಯೇ ಶಾಲಾ ದಿನಗಳಲ್ಲೇ ಅವರೂ ರಂಗ ನಟರಾದರು. ಯಕ್ಷಗಾನದ ಆರಾಧಕರಾದರು. ನೆಲಮೂಲದ ಕಲೆ,ಸಂಸ್ಕೃತಿ ಪ್ರೀತಿಸಿ,ಪೋಷಿಸಿದರು. ಈ ಕಾರಣದಿಂದಲೇ ಐಎಂಎ ಘಟಕದ ವತಿಯಿಂದ ವರ್ಷದ ಹಿಂದೆ ನಡೆದ ವೈದ್ಯರ ಯಕ್ಷಗಾನಕ್ಕೆ ಇವರು ಮುಂಚೂಣಿಯ ಬೆಂಬಲ ನೀಡಿದರು, ತಾನೂ ಪಾತ್ರ ವಹಿಸಿದರು.
ಹಾಡುವುದು ಅವರ ಪ್ರೀತಿಯ ಹವ್ಯಾಸ. ಐಎಂಎ ಕಾರ್ಯಕ್ರಮಗಳಲ್ಲಿ ಹದಾ ಹಾಡುತ್ತಾ ವೈದ್ಯ ಕುಟುಂಬಗಳಿಗೆ ಮುದನೀಡುವ ಅವರು ಗಾನಪ್ರಿಯ.
ಕಾಸರಗೋಡಿನ ವೈದ್ಯರ ಸಂಘಟನೆಯಲ್ಲಿ ಸರ್ವಾಂಗೀಣ ತೊಡಗಿಸಿಕೊಂಡ ಅವರೀಗ ಸಂಘಟನಾ ನಾಯಕ ಹುದ್ದೆಗೇರಿದ್ದಾರೆ. ಅವರ ಪಾಲಿಗೆ ಇನ್ನು ಸಂಘಟನೆಯನ್ನು ಸಕ್ರಿಯವಾಗಿಸಿ, ಬಲಪಡಿಸುವುದೇ ಸವಾಲು..

✳️ ನಗರ ಸೀಮಿತವಲ್ಲ..

ಕಾಸರಗೋಡುವ ಐಎಂಎ ಘಟಕ ಎಂದರೆ ಅದು ನಗರದ ಕೆಲವೇ ವೈದ್ಯರಿಗೆ ಸೀಮಿತವಲ್ಲ. ಘಟಕವು ಕಾಸರಗೋಡು ಪೇಟೆ ಸಹಿತ ಸಮೀಪದ ಸಮೀಪದ ಚೆಮ್ನಾಡು, ಮಧೂರು, ಚೆಂಗಳ, ಬದಿಯಡ್ಕ, ಕುಂಬ್ಡಾಜೆ, ಕಾರಡ್ಕ, ಬೆಳ್ಳೂರು, ದೇಲಂಪಾಡಿ, ಮೊಗ್ರಾಲು, ಕುಂಬಳೆ, ಪುತ್ತಿಗೆ ಮುಂತಾದ ಪಂಚಾಯತಿನ ವ್ಯಾಪ್ತಿ ಹೊಂದಿದೆ. ಇಲ್ಲಿ ಸೇವೆ ಸಲ್ಲಿಸುವ 400ಕ್ಕೂ ಅಧಿಕ ವೈದ್ಯರು ಸಂಘಟನೆಯ ಘಟಕದಲ್ಲಿ ಸದಸ್ಯರು. ಆದರೆ ಅವರೆಲ್ಲ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಜತೆಯಾಗುವುದೇ ವಿರಳ. ನನ್ನ ಮೊದಲ ಗುರಿ ಏನಿದ್ದರೂ ಎಲ್ಲರನ್ನೂ ಜತೆ ಸೇರಿಸುವುದು ಮತ್ತು ಸಂಘಟನೆಯನ್ನು ಬಲಪಡಿಸುವುದೇ ಆಗಿದೆ ಎಂದರು ಡಾ. ಹರಿಕಿರಣ ಬಂಗೇರ.

 

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00