ಸೈನಿಕ ವಿಮಾನ ಪತನದಲ್ಲಿ ಕಾಣೆಯಾದ ಯೋಧನ ಮೃತದೇಹ 56ವರ್ಷಗಳ ಬಳಿಕ ಪತ್ತೆ!

by Narayan Chambaltimar

ಕಣಿಪುರ ಸುದ್ದಿಜಾಲ (ಅ.1)

56 ವರ್ಷಗಳ ಹಿಂದೆ ಸಂಭವಿಸಿದ ಭಾರತೀಯ ಸೇನೆಯ ವೈಮಾನಿಕ ದುರಂತದಲ್ಲಿ ಮೃತಪಟ್ಟ ಕೇರಳೀಯ ಸೈನಿಕನ ಸಹಿತ ಮೂವರ ಮೃತದೇಹ ಪತ್ತೆಯಾಗಿದೆ. ನಿನ್ನೆ ಹಿಮಾವೃತ ಪರ್ವತಶ್ರೇಣಿಗಳ ನಡುವೆ ವಿಮಾನದ ಬಿಡಿಭಾಗಗಳು ಮತ್ತು ನಾಲ್ವರು ಯೋಧರ ಮೃತದೇಹ ಪತ್ತೆ ಹಚ್ಚಿ, ಮೂವರನ್ನು ಆಧಿಕೃತವಾಗಿ ಗುರುತಿಸಲಾಯಿತು.

1968 ಫೆ.7ರಂದು ಹಿಮಾಚಲದಲ್ಲಿ ಸೈನಿಕ ವಿಮಾನ ಪತನವಾಗಿತ್ತು. ಇದರಲ್ಲಿ ಮೃತರಾದ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಥಾಮಸ್ ಚೆರಿಯಾನ್ ಅವರ ಮೃತದೇಹ ಇದೀಗ ಪತ್ತೆಯಾಗಿದೆ. ಈ ಕುರಿತಾದ ಮಾಹಿತಿಯನ್ನು ಸೇನೆ ಔದ್ಯೋಗಿಕವಾಗಿ ಕೇರಳಕ್ಕೆ ತಿಳಿಸಿದೆ. ಗುರುತು ಹಚ್ಚಲಾದ ಉಳಿದಿಬ್ಬರು ಮಲ್ಖಾನ್ ಸಿಂಗ್, ಸಿಪಾಯಿ ನಾರಾಯಣ್ ಸಿಂಗ್ ಎಂಬಿವರಾಗಿದ್ದಾರೆ.

ಕೇರಳದ ಪಟ್ಟಣಂತಿಟ್ಟ ನಿವಾಸಿ ಥಾಮಸ್ ಚೆರಿಯಾನ್ ಅವರಿಗೆ ಸಾವಪ್ಪುವಾಗ 22ವರ್ಷ ವಯಸ್ಸಾಗಿತ್ತು. ಈಗ ಅವರ ಒಡಹುಟ್ಟುಗಳೆಲ್ಲ ಮೃತರಾಗಿದ್ದು ಸಹೋದರನ ಮಕ್ಕಳಷ್ಟೇ ಊರಲ್ಲಿದ್ದಾರೆ. ಇವರು ಯಾರೂ ಕೂಡ ಥಾಮಸ್ ಚೆರಿಯಾನ್ ಅವರನ್ನು ಒಮ್ಮೆಯೂ ಕಂಡವರೇ ಅಲ್ಲ. ಆದರೆ ಹಿರಿಯರಿಂದ ಹೀಗೊಂದು ದುರ್ಘಟನೆಯಲ್ಲಿ ನಮ್ಮವರೊಬ್ಬರು ಅಗಲಿದ್ದಾರೆಂದು ತಿಳಿದಿದ್ದರು. ಅವರ ಮೃತದೇಹ 56ವರ್ಷಗಳ ಬಳಿಕ ಈ ಕುಟುಂಬಕ್ಕೆ ದೊರೆಯುತ್ತದೆಂಬ ಯಾವ ನಿರೀಕ್ಷೆಯೂ ಇವರಲ್ಲಿರಲಿಲ್ಲ.ಪ್ರಸ್ತುತ ಈ ವಿಶೇಷ ಘಟನೆ ಇಡೀ ಕುಟುಂಬವನ್ನು ಮತ್ತೆ ಜೋಡಿಸುಂತೆ ಮಾಡಿದೆ.

ಸೈನಿಕ ವಿಮಾನ ಪತನದಲ್ಲಿ ಒಟ್ಟು 102ಮಂದಿ ಮೃತರಾಗಿದ್ದರು. ಈ ಪೈಕಿ 9ಮಂದಿಯ ಮೃತದೇಹ ಪತ್ತೆಯಾಗಿರಲಿಲ್ಲ. ಇವರ ಪತ್ತೆಗಾಗಿ ಕಳೆದ 5ದಶಕಗಳಿಂದಲೂ ಕಾರ್ಯಾಚರಣೆ ನಡೆಯುತಿತ್ತು. ದೇಶದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಕಾರ್ಯಾಚರಣೆ ಇದಾಗಿದೆ. ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ಈ ಕಾರ್ಯಾಚರಣೆ ನಡೆಸಿದೆ. ಮೃತದೇಹದ ಕಳೇಬರವನ್ನು ಸೈನ್ಯ ಕೇರಳಕ್ಕೆ ತಂದು ಸೈನಿಕ ಗೌರವಗಳೊಂದಿಗೆ ಕುಟುಂಬದವರಿಗೆ ಹಸ್ತಾಂತರಿಸಲಿದೆ.

ಏನಿದರ ಹಿನ್ನೆಲೆ?
1968ರಲ್ಲಿ 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ A-12 ಎಂಬ ವಿಮಾನವು ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್‌ನಲ್ಲಿ (Rohtang Pass) ಅಪಘಾತಕ್ಕೀಡಾಗಿತ್ತು. ಫೆಬ್ರವರಿ 7, 1968 ರಂದು 102 ಜನರನ್ನು ಹೊತ್ತಿದ್ದ ಅವಳಿ-ಎಂಜಿನ್ ಟರ್ಬೊಪ್ರಾಪ್ ಸಾರಿಗೆ ವಿಮಾನವು ಚಂಡೀಗಢದಿಂದ ಲೇಹ್‌ಗೆ ಹಾರುತ್ತಿದ್ದಾಗ ನಾಪತ್ತೆಯಾಗಿತ್ತು.

ಅಪಘಾತಕ್ಕೀಡಾದ ವಿಮಾನದಲ್ಲಿ ಈ ಹಿಂದೆ 2003ರಲ್ಲಿ ಮೊದಲ ಬಾರಿಗೆ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ (Atal Bihari Vajpayee Institute of Mountaineering) ಪರ್ವತಾರೋಹಿಗಳು ಅವಶೇಷಗಳನ್ನು ಪತ್ತೆಹಚ್ಚಲಾಗಿತ್ತು. ಅದಾದ ಬಳಿಕ 2005, 2006, 2013, ಮತ್ತು 2019ರಲ್ಲಿ ಡೋಗ್ರಾ ಸ್ಕೌಟ್ಸ್ (Dogra Scouts) ವಿವಿಧ ಕಾರ್ಯಾಚರಣೆಗಳನ್ನು ನಡೆಸಿತ್ತು.

 

2019ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿತ್ತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00