ಊಟಕ್ಕೂ ಪರದಾಡಿ, ಫುಟ್ಫಾತಿನಲ್ಲಿ ಬೆಳೆದ ನಟನ ಸಿರಿಮುಡಿಗೆ ಫಾಲ್ಕೆ ಕಿರೀಟ

by Narayan Chambaltimar

🔵 ಕಣಿಪುರ ಸುದ್ದಿಜಾಲ

ಹಸಿವಿನಿಂದ ಬಳಲಿ ಊಟಕ್ಕಾಗಿ ಕೈ ಚಾಚಿದ ದಿನಗಳಿದ್ದುವು.!
ನನ್ನ ಬದುಕೇನೂ ಹೂವಿನ ಹಾಸಿಗೆಯಾಗಿರಲೇ ಇಲ್ಲ. ನಾನು ಫುಟ್ಬಾತ್ ನಲ್ಲಿ ಮಲಗಿದ್ದೇನೆ, ಅಲ್ಲಿಂದಲೇ ಬೆಳೆದಿದ್ದೇನೆ. ನನ್ನ ಪಾಲಿಗೆ ದಾದಾ ಸಾಹೇಬ್ ಫಾಲ್ಕೆಯಂತಹ ಅತ್ಯುನ್ನತ ಪ್ರಶಸ್ತಿ ಒಲಿಯಬಹುದೆಂದು ನಿರೀಕ್ಷಿಸಿರಲೇ ಇಲ್ಲ..
ಇದು ನನ್ನಿಂದ ಸಾಧ್ಯವಾಗುವುದಾದರೆ ಪರಿಶ್ರಮಿಸಿದರೆ ಯಾರು ಬೇಕಾದರೂ ಈ ಉನ್ನತ ಪ್ರಶಸ್ತಿ ಪಡೆಯಬಹುದು..”
ಇದು ಫಾಲ್ಕೆ ಪ್ರಶಸ್ತಿ ವಿಜೇತ ನಟ ಮಿಥುನ್ ಚಕ್ರವರ್ತಿಯವರ ಮನದ ಮಾತು….

ಭಾರತೀಯ ಸಿನಿಮಾದ ದಂತಕತೆ, ಅಭಿಮಾನಿಗಳ ಪ್ರೀತಿಯ ದಾದಾ ನಟ ಮಿಥುನ್ ಚಕ್ರವರ್ತಿ ಅವರಿಗೆ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.
ಅಕ್ಟೋಬರ್ 8ರಂದು ನಡೆಯುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ವೇಳೆ ಮಿಥುನ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವರು.
ಕೇಂದ್ರ ಮಾಹಿತಿ ಮತ್ತು ಪ್ರಸಾರಖಾತೆ ಸಚಿವ ಅಶ್ವಿನಿ ವೈಷ್ಣವ್ ಪ್ರಶಸ್ತಿ ಘೋಷಿಸಿದ್ದು, ತಜ್ಞರ ಸಮಿತಿ ಈ ಆಯ್ಕೆ ನಡೆಸಿದೆ. 5ದಶಕದ ಜೀವಮಾನ ಸಾಧನೆ ಪರಿಗಣಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ.

ಇತ್ತೀಚೆಗೆ ತವರು ರಾಜ್ಯ ಬಂಗಾಳದಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡಿರುವ ಮಿಥುನ್ ಇತ್ತೀಚೆಗೆ ಪದ್ಮಭೂಷಣ ಗೌರವ ಸಂಪಾದಿಸಿದ್ದರು. ಇದರ ಬೆನ್ನಲ್ಲೇ ಫಾಲ್ಕೆ ಪ್ರಶಸ್ತಿ ಸಂದಿದೆ.

ಮೋದಿ ಅಭಿನಂದನೆ

ಈ ಬಗ್ಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಗುರುತಿಸಿ ಚಕ್ರವರ್ತಿ ಅವರಿಗೆ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿಯನ್ನು ನೀಡಿರುವುದು ಸಂತೋಷ ತಂದಿದೆ. ಅವರು ಸಾಂಸ್ಕೃತಿಕ ಐಕಾನ್ ಆಗಿದ್ದಾರೆ, ಅವರ ಬಹುಮುಖ ಪ್ರದರ್ಶನಗಳಿಗಾಗಿ ತಲೆಮಾರುಗಳಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದಿದ್ದಾರೆ. ಸಚಿವ ವೈಷ್ಣವ್‌ ಪ್ರತಿಕ್ರಿಯಿಸಿ, ‘ಚಕ್ರವರ್ತಿಯವರ ಗಮನಾರ್ಹ ಸಿನಿಮಾ ರಂಗದ ಪ್ರಯಾಣವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ’ ಎಂದಿದ್ದಾರೆ.

ಮಿಥುನ್‌ ಹರ್ಷ
ಇದಕ್ಕೆ ಪ್ರತಿಕ್ರಿಯೆ ನೀಡಿರುವ 74ರ ಹರೆಯದ ಮಿಥುನ್‌, ‘ಈಗ ನನ್ನ ಬಳಿ ಪದಗಳಿಲ್ಲ. ಇದು ನನಗೆ ಹಿಂದಿನದನ್ನು ನೆನಪಿಸಿದ ಸಂದರ್ಭ. ನನ್ನ ಜೀವನ ಎಂದಿಗೂ ಸುಗಮ ಆಗಿರಲಿಲ್ಲ. ನಾನು ಕೋಲ್ಕತಾದಿಂದ ಮುಂಬೈಗೆ ಹೋಗಿದ್ದೆ. ಮುಂಬೈನಲ್ಲಿ 2 ಹೊತ್ತು ಊಟಕ್ಕೂ ಪರದಾಡುತ್ತಿದ್ದೆ ಮತ್ತು ಕೆಲವೊಮ್ಮೆ ತೋಟದಲ್ಲಿ ಮಲಗುತ್ತಿದ್ದೆ. ಇಷ್ಟೆಲ್ಲ ಪರದಾಡಿದ ನನಗೆ ಈಗ ದೊಡ್ಡ ಗೌರವ ಸಂದಿದೆ. ಇದು ಎಲ್ಲ ನೋವನ್ನು ಮರೆಸಿಬಿಡುತ್ತದೆ, ದೇವರು ದಯೆ ತೋರಿದ್ದಾನೆ. ಈ ಪ್ರಶಸ್ತಿ ನನ್ನ ಕುಟುಂಬಕ್ಕೆ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಅರ್ಪಣೆ’ ಎಂದಿದ್ದಾರೆ.

ಸಿನಿ ರಂಗದಲ್ಲಿ ಅರ್ಧ ದಶಕದಿಂದ ‘ಚಕ್ರವರ್ತಿ’

ಮಿಥುನ್‌ ಚಕ್ರವರ್ತಿ ಹೆಚ್ಚೂ ಕಡಿಮೆ ಅರ್ಧ ದಶಕ ಕಾಲ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ವ್ಯಕ್ತಿ. ಬಂಗಾಳದವರಾದರೂ ಮುಂಬೈಗೆ ತೆರಳಿ ಬಾಲಿವುಡ್‌ನಲ್ಲಿ ಮಿಂಚಿದವರು.

ಮೃಣಾಲ್ ಸೇನ್ ಅವರ 1976 ರ ಚಲನಚಿತ್ರ ‘ಮೃಗಾಯಾ’ ದೊಂದಿಗೆ ಮಿಥುನ್‌ ನಟನೆ ಆರಂಭಿಸಿದರು. ಇದರಲ್ಲಿ ಅತ್ಯುತ್ತಮ ನಟನೆಗಾಗಿ ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದರು. 1982ರಲ್ಲಿ ಸೂಪರ್‌ಹಿಟ್ ‘ಡಿಸ್ಕೋ ಡಾನ್ಸರ್‌’ನಲ್ಲಿ ತಮ್ಮ ವಿಶಿಷ್ಟ ನೃತ್ಯ ಶೈಲಿಯೊಂದಿಗೆ ಜನಪ್ರಿಯತೆ ಸಂಪಾದಿಸಿದರು. ಆಗಿನಿಂದ ಭಾರತದಲ್ಲಿ ಡಿಸ್ಕೋ ಡಾನ್ಸ್‌ ಬಲು ಜನಪ್ರಿಯಗೊಂಡಿತು. ಈ ಚಿತ್ರವು ಜಾಗತಿಕವಾಗಿ ಚಕ್ರವರ್ತಿ ಅಭಿಮಾನಿಗಳನ್ನು ಗಳಿಸಿದ ಅಪರೂಪದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ.

ನಂತರ ‘ಮುಝೆ ಇನ್ಸಾಫ್ ಚಾಹಿಯೇ’, ‘ಹಮ್ ಸೆ ಹೈ ಜಮಾನಾ’, ‘ಪಸಂದ್ ಅಪ್ನಿ ಅಪ್ನಿ’, ‘ಘರ್ ಏಕ್ ಮಂದಿರ್’, ‘ಕಸಂ ಪೈದಾ ಕರ್ನೆ ವಾಲೆ ಕಿ’ ಮತ್ತು ‘ಮಾಂಡೋ’, ‘ಅಗ್ನಿಪಥ್‌’ನಂಥ ಹಿಟ್ ಚಿತ್ರದಲ್ಲಿ ನಟಿಸಿದರು. 1992ರಲ್ಲಿ ‘ತಹದರ್ ಕಥಾ’ ಚಿತ್ರಕ್ಕೆ ಅತ್ಯುತ್ತಮ ನಟ ಮತ್ತು 1998ರಲ್ಲಿ ‘ಸ್ವಾಮಿ ವಿವೇಕಾನಂದ’ಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ರಾಜ್ಯಸಭಾ ಸದಸ್ಯರೂ ಆಗಿದ್ದ ಚಕ್ರವರ್ತಿ ಅವರು 2021ರ ಪ. ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡರು.

ಕನ್ನಡ ಸೇರಿ 8 ಭಾಷೆಗಳಲ್ಲಿ ನಟನೆ
4 ದಶಕಗಳ ವೃತ್ತಿಜೀವನದಲ್ಲಿ ಮಿಥುನ್‌ ಚಕ್ರವರ್ತಿ, ಕನ್ನಡ, ಬಂಗಾಳಿ, ಹಿಂದಿ, ತೆಲುಗು, ಭೋಜ್‌ಪುರಿ, ಪಂಜಾಬ್‌, ಒಡಿಶಾ, ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಕನ್ನಡದ ‘ದ ವಿಲನ್‌’ ಚಿತ್ರದಲ್ಲಿ ಮಿಥುನ್‌ ನಟಿಸಿದ್ದರು.

 

 

 

 

.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00